ಶಿವಮೊಗ್ಗ: ರಾಜ್ಯ ಸರ್ಕಾರಕ್ಕೆ ತಾಕತ್ ಇದ್ದರೆ ಕೂಡಲೇ ಜಾತಿ ಜನಗಣತಿ ವರದಿ ಬಿಡುಗಡೆ ಮಾಡಬೇಕು ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿಗಣತಿಗೆ ಸಂಬಂಧಿಸಿದಂತೆ ಈಗಾಗಲೇ ಸಾಕಷ್ಟು ಚರ್ಚೆಯಾಗುತ್ತಿದೆ. ರಾಜಕಾರಣವೇ ಹೆಚ್ಚು ಚರ್ಚೆಯಾಗುತ್ತಿರುವುದರಿಂದ ಅದು ನಿಲ್ಲಬೇಕಾಗಿದೆ. ಇದಕ್ಕಾಗಿಯೇ ಸುಮಾರು ೧೬೮ ಕೋಟಿ ರೂ. ಖರ್ಚಾಗಿದೆ. ೭ ವರ್ಷಗಳೇ ಹಿಂದೆಯೇ ವರದಿ ಬಿಡುಗಡೆಯಾಗಬೇಕಿತ್ತು. ಇನ್ನೂ ಬಿಡುಗಡೆಯಾಗಿಲ್ಲ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ವರದಿ ಬಿಡುಗಡೆ ಮಾಡಲು ಮೀನಮೇಷ ಎಣಿಸುತ್ತಿದ್ದಾರೆ ಎಂದು ದೂರಿದರು.

ಜಾತಿ ಜನಗಣತಿ ಬಿಡುಗಡೆ ಮಾಡಲು ಕಾಂಗ್ರೆಸ್ ಪಕ್ಷದವರೇ ಕಾಲೆಳೆಯುತ್ತಿದ್ದಾರೆ. ಮತ್ತೊಂದು ಕಡೆ ಲಿಂಗಾಯತ ಮತ್ತು ಒಕ್ಕಲಿಗ ಸಮಾಜದವರು ನಾವು ಅದನ್ನು ನೋಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎನ್ನುತ್ತಿದ್ದಾರೆ. ಮುಖ್ಯಮಂತ್ರಿಗಳಿಗೆ ಇದು ಅರ್ಥವಾಗುತ್ತಿಲ್ಲವೇ? ಅವರು ಉತ್ತರ ಪೌರುಷ ತೋರಿಸುತ್ತಿದ್ದಾರೆ. ಇದಿನ್ನೂ ಕ್ಯಾಬಿನೆಟ್ ಚರ್ಚೆಗೇ ಬಂದಿಲ್ಲ, ಇದಕ್ಕೆ ಮುಕ್ತಿ ಯಾವಾಗ? ಮೊದಲು ಕ್ಯಾಬಿನೆಟ್ ಗೆ ತನ್ನಿ. ಆಮೇಲೆ ಚರ್ಚೆಗೆ ಬಿಡಿ. ಬೇಕಾದರೆ ತಿದ್ದುಪಡಿ ಮಾಡಿಕೊಳ್ಳಬಹುದು. ಇದಕ್ಕೆ ಒಂದು ಡೆಡ್ ಲೈನ್ ಅಗತ್ಯವಿದೆ ಎಂದರು.

ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಕೂಡ ಜಾತಿ ಜನಗಣತಿ ಮಾಡುವ ಬಗ್ಗೆ ವಿಶೇಷ ಆಸಕ್ತಿ ವಹಿಸಿದ್ದಾರೆ. ಇದಕ್ಕಾಗಿ ಅವರಿಗೆ ಅಭಿನಂದನೆಗಳು. ಇದನ್ನು ಕಾಂಗ್ರೆಸ್ ಮುಖಂಡರು ಕೂಡ ಸ್ವಾಗತಿಸಿದ್ದಾರೆ. ಆದರೆ ರಾಹುಲ್ ಗಾಂಧಿ ಅವರು ಸಿದ್ಧರಾಮಯ್ಯ ಅವರಿಗೆ ಜಾತಿಗಣತಿಯನ್ನು ಬೇಗ ಬಿಡುಗಡೆ ಮಾಡುವಂತೆ ಏಕೆ ಸೂಚನೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.
ಮುಸಲ್ಮಾನರ ಗೂಂಡಾತನ ಹೆಚ್ಚಾಗಿದೆ:
ಮುಸಲ್ಮಾನರ ಗೂಂಡಾಗಿರಿ ಹೆಚ್ಚಾಗತೊಡಗಿದೆ. ಇವರಿಗೆ ರಾಜ್ಯ ಸರ್ಕಾರದ ಸಹಾಯ ಇದ್ದಂತೆ ಕಾಣುತ್ತದೆ. ಕೊಲೆಗಳಿಗೆ ಇಳಿದಿದ್ದಾರೆ. ಬೀದಿ ಬೀದಿಗಳಲ್ಲಿ ಮಚ್ಚು, ತಲವಾರ್, ಪಿಸ್ತೂಲ್ ಬಳಸುತ್ತಿದ್ದಾರೆ. ಮೊನ್ನೆ ಶಿವಮೊಗ್ಗದ ಟಿಪ್ಪುನಗರದಲ್ಲಿ ಇರ್ಫಾನ್ ಎಂಬ ವ್ಯಕ್ತಿ ತನ್ನ ಒರಿಜಿನಲ್ ಗನ್ ನಿಂದ ಗುಂಡು ಹಾರಿಸಿದ್ದಾನೆ. ಈ ಬಗ್ಗೆ ಎಸ್ಪಿಯವರ ಜೊತೆ ಕೂಡ ನಾನು ಮಾತನಾಡುತ್ತೇನೆ. ಅವರು ಆತ ರೌಡಿಶೀಟರ್. ಕ್ರಮ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ ಎಂದು ಈಶ್ವರಪ್ಪ ಹೇಳಿದರು.

ಮಂಗಳೂರಿನಲ್ಲಿಯೂ ಕೂಡ ಹಿಂದೂ ಯುವಕನ ಕೊಲೆಯಾಗಿದೆ. ಅಲ್ಲಿ ಗಲಭೆಗಳಿಗೆ ಲೆಕ್ಕವೇ ಇಲ್ಲ. ಸುಹಾಸ್ ಶೆಟ್ಟಿಯನ್ನು ಮನಸ್ಸಿಗೆ ಬಂದಂತೆ ಕೊಚ್ಚಿ ಹಾಕಿದ್ದಾರೆ. ಅಲ್ಲಿ ಪೊಲೀಸರು ಇಲ್ಲವೇ? ಪೊಲೀಸ್ ಇಲಾಖೆಯ ಭಯವೇ ಇಲ್ಲವೇ? ಇದು ಪೊಲೀಸ್ ವೈಫಲ್ಯವಲ್ಲದೇ ಮತ್ತೇನು? ರಾಜ್ಯ ಸರ್ಕಾರ ನಿದ್ದೆ ಮಾಡುತ್ತಿದೆಯೇ? ಈ ಘಟನೆ ಅತ್ಯಂತ ಖಂಡನೀಯ ಎಂದರು.

ಡಿಸಿ ಕಚೇರಿ ಎದುರಿನ ಆಟದ ಮೈದಾನದಲ್ಲಿ ಪ್ರತಿಭಟನೆಗೆ ಅವಕಾಶ ಇಲ್ಲ:
ವಕ್ಫ್(ತಿದ್ದುಪಡಿ) ಮಸೂದೆ ವಿರುದ್ಧ ಯಾವ ಪ್ರತಿಭಟನೆಗಳನ್ನು ಮಾಡಬಾರದು ಎಂದು ಹೈಕೋರ್ಟೇ ಹೇಳಿದೆ. ಈ ಮಸೂದೆ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿರುವುದರಿಂದ ಅದರ ಕಾನೂನುಬದ್ಧತೆಯನ್ನು ಕೋರ್ಟ್ ನಿರ್ಧರಿಸುತ್ತದೆ ಎಂಬುದನ್ನು ಕರ್ನಾಟಕ ಸರ್ಕಾರ ಗಮನದಲ್ಲಿಟ್ಟುಕೊಳ್ಳಬೇಕೆಂದು ನ್ಯಾಯಾಲಯ ಹೇಳಿದ್ದರೂ ಕೂಡ ಪ್ರತಿಭಟನೆಗಳಿಗೆ ಸರ್ಕಾರ ಅವಕಾಶ ಕೊಡುತ್ತಿರುವುದು ಸರಿಯಲ್ಲ ಎಂದು ಈಶ್ವರಪ್ಪ ಹೇಳಿದರು.
ಪ್ರತಿಭಟನೆಯು ಸುಪ್ರೀಂ ಕೋರ್ಟ್ನಲ್ಲಿರುವ ತಿದ್ದುಪಡಿ ಮಸೂದೆ ವಿರುದ್ಧ ಎಂಬ ಅರಿವಿದ್ದರೂ ಕಾನೂನಿನಡಿಯಲ್ಲಿ ರಾಜ್ಯ ಸರ್ಕಾರ ಅನುಮತಿ ನೀಡಿರಬಹುದು. ಆದರೆ ಇಂತಹ ಪ್ರತಿಭಟನೆಯ ವೇಳೆ ರಸ್ತೆಗಳನ್ನು ಪ್ರತಿಬಂಧಿಸಿ ಸಾರ್ವಜನಿಕರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ನ್ಯಾಯಮೂರ್ತಿಗಳೇ ತಿಳಿಸಿದ್ದಾರೆ ಎಂದರು.

ನ್ಯಾಯಾಲಯದ ಅನುಮತಿಯಂತೆ ಜಿಲ್ಲಾಧಿಕಾರಿ ಕಚೇರಿ ಎದುರು ಇರುವ ಆಟದ ಮೈದಾನದಲ್ಲಿ ಯಾವುದೇ ರೀತಿಯ ಪ್ರತಿಭಟನೆ ಮಾಡಲು ಅವಕಾಶವಿಲ್ಲ. ಜಿಲ್ಲಾಧಿಕಾರಿ ಮತ್ತು ಎಸ್ಪಿ ಇದಕ್ಕೆ ಅವಕಾಶ ಕೊಡಬಾರದು ಎಂದರು.
ಈಗಾಗಲೇ ಈ ಜಾಗ ವಕ್ಫ್ ಆಸ್ತಿಯಲ್ಲ, ಖಾತೆಯೇ ಕಾನೂನುಬಾಹಿರ ಎಂದು ಪಾಲಿಕೆ ಆಯುಕ್ತರೇ ಸರ್ಕಾರಕ್ಕೆ ತಿಳಿಸಿದ್ದಾರೆ. ಇದಕ್ಕೆ ಸಂಬಂಧಪ್ಟ ದಾಖಲೆಗಳನ್ನು ಕೂಡ ನೀಡಿದ್ದೇವೆ. ಹಾಗಾಗಿ ಈ ಜಾಗಕ್ಕೆ ಯಾವುದಾದರೂ ಮಹಾಪುರುಷರ ಹೆಸರನ್ನು ಇಡಬೇಕಾಗಿದೆ. ಪಾಲಿಕೆ ಈ ಬಗ್ಗೆ ಚಿಂತನೆ ನಡೆಸಬೇಕು. ಇಲ್ಲದೇ ಹೋದರೆ ರಾಷ್ಟ್ರಭಕ್ತರ ಬಳಗವೇ ಸಾರ್ವಜನಿಕರಿಗೆ ಸಂದೇಶ ಕೊಟ್ಟು ಈ ಜಾಗಕ್ಕೆ ಒಂದು ಉತ್ತಮ ಹೆಸರನ್ನು ಇಡಲು ಅಗತ್ಯಕ್ರಮ ಕೈಗೊಳ್ಳುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಇ. ವಿಶ್ವಾಸ್, ಜಾಧವ್, ಶ್ರೀಕಾಂತ್, ಬಾಲು, ಗೋವಿಂದರಾಜು, ಶಿವಾಜಿ, ಶಿವು, ರಾಜು, ಮುಂತಾದವರಿದ್ದರು.