ಶಿವಮೊಗ್ಗ, ಮೇ. 2:
ಶಿವಮೊಗ್ಗದ ರಾಮಕೃಷ್ಣ ವಿದ್ಯಾನಿಕೇತನ ಶಾಲೆಯ ಆಡಳಿತ ಮಂಡಳಿ ಹಾಗೂ ವಿಶೇಷವಾಗಿ ಅಧ್ಯಾಪಕ ವೃಂದ ಮತ್ತು ಮಿತ್ರರು ನೀಡಿದ ಸಹಕಾರದಿಂದ ಇಂದು ನಾನು ಎಸ್ ಎಲ್ ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಲು ಸಾಧ್ಯವಾಯಿತು

ಇದಕ್ಕೆ ನನಗೆ ಈ ಶಾಲೆಯೇ ಸ್ಪೂರ್ತಿ ತಂದೆ ತಾಯಿಗಳ ಆಶೀರ್ವಾದವೇ ಕಾರಣ ಎಂದು 625 ಅಂಕ ಗಳಿಸಿದ ರಾಮಕೃಷ್ಣ ವಿದ್ಯಾಸಂಸ್ಥೆಯ ನಿತ್ಯಾ ಎಂ ಪೂಜಾರಿ ಹರ್ಷ ವ್ಯಕ್ತಪಡಿಸಿದರು.

ಅವರು ಇಂದು ಮಧ್ಯಾಹ್ನ ಶಾಲೆಯಲ್ಲಿ ಆಡಳಿತ ಮಂಡಳಿ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ನನ್ನ ವಿದ್ಯಾಭ್ಯಾಸ ಒಂದರಿಂದ ಇಂದಿನವರೆಗೆ ರಾಮಕೃಷ್ಣ ವಿದ್ಯಾನಿಕೇತನದಲ್ಲಿ ನಡೆಯಿತು. ಅಂದಿನಿಂದಲೂ ಗುರುಗಳು ನನ್ನ ಬಗ್ಗೆ ಇಟ್ಟಿದ್ದ ವಿಶ್ವಾಸದ ನಡೆಗೆ ಸ್ಪೂರ್ತಿಯಾಗಿ ಇಷ್ಟೊಂದು ದೊಡ್ಡ ಸಾಧನೆ ಮಾಡಲು ಸಾಧ್ಯವಾಯಿತು. ಇದಕ್ಕೆ ರಾಮಕೃಷ್ಣ ವಿದ್ಯಾಸಂಸ್ಥೆಯೇ ಕಾರಣ. ಈ ಸಂಸ್ಥೆಯ ಸಂಸ್ಥಾಪಕ ವೆಂಕಟರಮಣ ಅವರೇ ಕಾರಣ ಎಂದು ಮತ್ತೊಮ್ಮೆ ಹೇಳಿದರು.

ಪಲಿತಾಂಶ ತುಂಬಾ ಸಂತೋಷವಾಗುತ್ತಿದೆ. ಗರಿಷ್ಠ ಅಂಕ ಪಡೆದ ಖುಷಿ ಎಂಬುದರ ಜೊತೆಗೆ ತಂದೆ ತಾಯಿಯರ ಆಶೀರ್ವಾದ ಹಾಗೂ ನನ್ನ ಸಹೋದರ ವಿಕಾಸ್ ನೀಡಿದ ಸಹಕಾರದಿಂದ ಈ ಆತ್ಮಸ್ಥೈರ್ಯ ಹೆಚ್ಚಿತ್ತು. ಮುಂದೆ ಇನ್ನಷ್ಟು ಉತ್ತಮ ವ್ಯಾಸಂಗದೊಂದಿಗೆ ವೈದ್ಯಕೀಯ ಕೋರ್ಸ್ ಮಾಡಿ ಜನ ಮೆಚ್ಚುಗೆಯ ವೈದ್ಯರಾಗುವ ಆಸೆ ಇದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸರ್ಜಿ ಹಾಸ್ಪಿಟಲ್ ಆಸ್ಪತ್ರೆಯ ಅಡ್ಮಿನಿಸ್ಟೇಟರ್ ಆಗಿರುವ ಮುರುಳಿಧರ್ ಕುಕಕರ್ಣಿ ಹಾಗೂ ಕಲ್ಪನಾ ಎಂ ಕುಲಕರ್ಣಿ ಅವರ ಪುತ್ರಿಯಾದ ನಿತ್ಯ ಈ ವರ್ಷ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಅಂಕಗಳಿಸುವ ಮೂಲಕ ರಾಜ್ಯದ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಪಟ್ಟಿಯಲ್ಲಿರುವುದು

ವಿಶೇಷವೇ ಹೌದು. ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿನಿ ನಿತ್ಯಾ ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ರಾಮಕೃಷ್ಣ ವಿದ್ಯಾಸಂಸ್ಥೆ ಅಭಿನಂದನೆ ಸೂಚಿಸುತ್ತದೆ . ಇಂತಹ ಅತ್ಯುತ್ತಮವಾದ ಪಲಿತಾಂಶಕ್ಕೆ ಕಾರಣವಾದ ಶಿಕ್ಷಕ ವೃಂದವನ್ನು ಹಾಗೂ ರಾಮಕೃಷ್ಣ ವಿದ್ಯಾಸಂಸ್ಥೆಯನ್ನು ರಾಜ್ಯದ ಮೇಲುಸ್ತರದಲ್ಲಿ ಬೆಳೆಸಿದ ಸರ್ವರನ್ನೂ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶೋಭಾ ವೆಂಕಟರಮಣ ಅಭಿನಂದಿಸಿದರು.