ಸಾಗರ, ಏ.೨೮- ಈ ದೇಶದಲ್ಲಿ ಕಾಂಗ್ರೆಸ್ ನಡೆಸಿದ ದುರಾಡಳಿತ ಪರಿಣಾಮ ಉಗ್ರಗಾಮಿಗಳ ಮನೋಬಲ ಹೆಚ್ಚಲು ಕಾರಣವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕೆಲವು ಕಾಂಗ್ರೆಸ್ ಮುಖಂಡರು ನೀಡಿದ ಹೇಳಿಕೆಯಿಂದ ಉಗ್ರರು ಹಿಂದುಗಳ ಮೇಲೆ ಆಕ್ರೋಶ ವ್ಯಕ್ತಪಡಿಸುವಂತಾಗಿದೆ. ಹೊರಗಿನವರು ಹೇಗೇ ಇರಲಿ, ನಮ್ಮ ಮನೆಯೊಳಗಿದ್ದವರೇ ವಿಷ ಹಾಕಿದರೆ ಹೇಗೆ ? ಎಂದವರು ಮಾರ್ಮಿಕವಾಗಿ ಪ್ರಶ್ನಿಸಿ, ನಮ್ಮ ದೇಶದೊಳಗಿನ ಶತ್ರುಗಳೇ ಅಪಾಯಕಾರಿ ಎಂದರು.

ಪೆಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿ ಅತ್ಯಂತ ಖಂಡನೀಯ. ಇದು ಪಾಕಿಸ್ತಾನ ಪ್ರೇರಿತ ಉಗ್ರರ ಕೃತ್ಯ. ನಾಗರಿಕರ ಮೇಲೆ ಗುಂಡು ಹಾರಿಸಿ ಜೀವ ತೆಗೆಯುವ ಘಟನೆಗಳು ಹಿಂದೆ ಅಲ್ಲೊಂದು ಇಲ್ಲೊಂದು ನಡೆಯುತ್ತಿತ್ತು. ದೇಶದ ರಕ್ಷಣೆ ಮಾಡುವ ಸೈನಿಕರ ಮೇಲೆ ಇಂಥ ಕೃತ್ಯ ನಡೆಯುತ್ತಿತ್ತು. ಆದರೆ ಜಮ್ಮು-ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಅದೂ ಕುಟುಂಬದ ಎದುರು ಧರ್ಮದ ಹೆಸರು ಕೇಳಿ ಗುಂಡು ಹಾರಿಸಿ ಜೀವ ತೆಗೆದಿರುವುದು ಪ್ರಪಂಚದಲ್ಲೇ ಚರ್ಚೆಯ ವಿಷಯವಾಗಿದೆ. ದೇಶದಲ್ಲಿ ಇಂಥ ಕೃತ್ಯ ನಡೆಸಿದವರ ವಿರುದ್ಧ ಪ್ರಧಾನಿ ಮೋದಿಯವರು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಪಾಕಿಸ್ತಾನದ ವಿರುದ್ಧ ಕೈಗೊಂಡ ಕ್ರಮಕ್ಕೆ ಅವರನ್ನು ಅಭಿನಂದಿಸಬೇಕು ಎಂದರು.

೧೯೬೦ ರ ಸಿಂಧು ನದಿ ಒಪ್ಪಂದದ ಪ್ರಕಾರ ಪಕ್ಕದ ದೇಶ ಎಂದು ಜಮ್ಮು-ಕಾಶ್ಮೀರದಲ್ಲಿ ನೀರು ತಡೆಯುವ ಪ್ರಯತ್ನ ಮಾಡಿರಲಿಲ್ಲ. ಆದರೆ ಅದು ವಿಷ ಕಕ್ಕುವ ಕೆಲಸ ಮಾಡುತ್ತಿದೆ. ಭಾರತದಲ್ಲಿರುವ ಪಾಕಿಸ್ತಾನಿಗಳನ್ನು ಗಡುವು ನೀಡಿ ಹೊರಹೋಗಲು ಕೈಗೊಂಡ ಕಠೋರ ನಿಲುವಿಗೆ ಪ್ರಧಾನಿಯವರನ್ನು ಅಭಿನಂದಿಸಬೇಕು. ದೇಶವಾಸಿಗಳ ರಕ್ಷಣೆಗೆ ಕಟಿಬದ್ಧವಾಗಿರುವ ಮೋದಿಯವರು ಹೊಸ ಪ್ರಯತ್ನ ಮಾಡುತ್ತಿದ್ದಾರೆ.

ಉಗ್ರರಿಗೆ ಪರೋಕ್ಷ ಬೆಂಬಲ ಕೊಡುತ್ತಿರುವ ಪಾಕಿಸ್ತಾನಕ್ಕೆ ಸರಿಯಾದ ಪಾಠ ಕಲಿಸುವ ಯೋಜನೆ ರೂಪಿಸುತ್ತಿದ್ದಾರೆ. ಈ ಘಟನೆಯಿಂದ ದೇಶದ ಜನರು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಶಿವಮೊಗ್ಗದ ಮಂಜುನಾಥ್ ಅವರನ್ನು ಉಗ್ರರು ಗುಂಡು ಹೊಡೆದು ಸಾಯಿಸಿದಾಗ, ಅವರ ಪತ್ನಿ ನನಗೂ ಗುಂಡು ಹೊಡೆಯಿರಿ ಎಂದಾಗ, ಅವರು ಮೋದಿ ಹೆಸರು ಹೇಳಿದರು. ದೇಶದ ಪ್ರತಿಯೊಬ್ಬ ಪ್ರಜೆಯೂ ಜಾತಿ, ಧರ್ಮ ಮೀರಿ ನಾವು ಭಾರತೀಯರು ಎಂಬ ಚಿಂತನೆ ಬೆಳೆಸಿಕೊಂಡಾಗ ದೇಶದ ಜನರಿಗೆ ರಕ್ಷಣೆ ಸಾಧ್ಯ ಎಂದರು.

ಕೇಂದ್ರ ಸಚಿವ ಗಡ್ಕರಿ ಯವರಿಗೆ ಅಭಿನಂದನೆ :
ಸಾಗರ ತಾಲ್ಲೂಕಿನ ಕರೂರು ಹೋಬಳಿ ಜನತೆಯ ಬಹು ವರ್ಷದ ಕನಸು ನನಸಾಗುತ್ತಿದೆ. ಗುತ್ತಿಗೆದಾರರು ತುಮರಿ ಸೇತುವೆ ಬಿಟ್ಟುಕೊಡಲು ಆಗಸ್ಟ್ ತಿಂಗಳವರೆಗೆ ಸಮಯ ತೆಗೆದುಕೊಂಡಿದ್ದಾರೆ. ಆದರೆ ಮಳೆಗಾಲಕ್ಕೆ ಮೊದಲು ಸೇತುವೆ ಲೋಕಾರ್ಪಣೆಯಾಗಲಿದೆ. ಭೂ ಸಾರಿಗೆ ಸಚಿವರಾದ ಗಡ್ಕರಿಯವರು ಒಂದು ವಾರದ ಹಿಂದೆ ಶರ್ಮ ತಂಡದವರನ್ನು ಸೇತುವೆ ಪರಿಶೀಲನೆಗೆ ಕಳಿಸಿ ವರದಿ ಪಡೆದುಕೊಂಡಿದ್ದಾರೆ. ಇದೊಂದು ದೇಶದ ೨ ನೇ ಉದ್ದದ ಸೇತುವೆಯಾಗಿದ್ದು, ಇತಿಹಾಸದಲ್ಲಿ ದಾಖಲಾಗುತ್ತದೆ. ಈ ಮಾರ್ಗದ ಮೂಲಕ ಅನೇಕ ದೇವಸ್ಥಾನಗಳ ಸಂಪರ್ಕ ಸಾಧ್ಯವಾಗುತ್ತದೆ. ೪೦-೫೦ ವರ್ಷಗಳ ಮುಳುಗಡೆ ಸಂತ್ರಸ್ತರಿಗೆ ನೆಮ್ಮದಿ ಸಿಗಲಿದೆ.
ಸೇತುವೆಯಾಗಲು ಆ ಭಾಗದ ಹೋರಾಟಗಾರರು ಮೊದಲಿಗೆ ಅಭಿನಂದನೀಯರು ಹಾಗೂ ಅಂದಿನ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರ ಇಚ್ಛಾಶಕ್ತಿ ಕಾರಣ ಅವರೂ ಅಭಿನಂದನೀಯರು. ಸೇತುವೆ ಉದ್ಘಾಟನೆಗೆ ಪ್ರಧಾನಿಯವರನ್ನು ಆಹ್ವಾನಿಸಿದ್ದೇವೆ ಎಂದರು.
ಗ್ರಾಮ ಪಂಚಾಯಿತಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡಲು ಯಡಿಯೂರಪ್ಪ ಮತ್ತು ಗಡ್ಕರಿ ಅವರು ಕಾರಣ. ಬೆಂಗಳೂರು- ಹೊನ್ನಾವರ ಹೆದ್ದಾರಿ ರಸ್ತೆ ವಿಸ್ತರಣೆ ಕೆಲಸ ನಡೆಯುತ್ತಿದೆ. ರಾಣೆಬೆನ್ನೂರು-ಶಿವಮೊಗ್ಗ-ಹೊಸನಗರ- ಬೈಂದೂರು ರಾಷ್ಟ್ರೀಯ ಹೆದ್ದಾರಿ ಸಾವಿರಾರು ಕೋಟಿ ರೂ. ಕಾಮಗಾರಿ ಪ್ರಗತಿಯಲ್ಲಿದೆ. ಈ ಮಾರ್ಗದಲ್ಲಿ ೧೨೫ ಕ್ರಾಸ್ಗಳು ಬರುತ್ತವೆ. ಇದಕ್ಕೆ ೧ ಗಂಟೆ ೪೫ ನಿಮಿಷ ಬೇಕಾಗುತ್ತದೆ. ಇದಕ್ಕೆ ಪರ್ಯಾಯವಾಗಿ ನೇರ ರಸ್ತೆಗೆ ೩೫೦ ಕೋಟಿ ರೂ. ಡಿಪಿಆರ್ ಸಿದ್ದವಾಗಿದ್ದು, ಮಾವಿನಕೊಪ್ಪ ವೃತ್ತ, ಆಡುಗೋಡಿಯಲ್ಲಿ ೨ ಸೇತುವೆ ನಿರ್ಮಾಣವಾಗಬೇಕಿದೆ ಎಂದರು.
ಬಿಎಸ್ಎನ್ಎಲ್ ಸಂಸ್ಥೆ ಮುಚ್ಚುವ ಹಂತಕ್ಕೆ ತಲುಪಿತ್ತು. ಪ್ರಧಾನಿಯವರು ೫ ಕೋಟಿ ರೂ. ಸಾಲ ನೀಡಿ ಅದಕ್ಕೆ ಜೀವ ತುಂಬಿದರು. ಈ ಸಂಸ್ಥೆ ಹಂತ ಹಂತವಾಗಿ ಪ್ರಗತಿ ಸಾಧಿಸುತ್ತಿದೆ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರೈಲ್ವೆ ಇಲಾಖೆಯ ಪರೀಕ್ಷೆಯೊಂದಕ್ಕೆ ಪರೀಕ್ಷಾರ್ಥಿಗಳು ಜನಿವಾರ, ಮಂಗಲಸೂತ್ರ ತೆಗೆದು ಪರೀಕ್ಷಾ ಕೊಠಡಿಗೆ ಬರಬೇಕು ಎಂಬ ನಿಯಮ ಹಾಕಿದೆಯಲ್ಲ ? ಎಂಬ ಪ್ರಶ್ನೆಗೆ, ಮೈಕ್ರೋ ಚಿಪ್ ಗ್ಲಾಸ್ನೊಳಗೆ ಇರುತ್ತದೆ ಎಂಬ ಕಾರಣದ ಹಿನ್ನೆಲೆಯಲ್ಲಿ ಇಂಥ ಕ್ರಮ ಕೈಗೊಂಡಿರಬಹುದು. ಏನೇ ಇದ್ದರೂ ನಮ್ಮ ಧಾರ್ಮಿಕ ಪರಂಪರೆಗೆ ನೋವಾಗುವಂತೆ ಮಾಡಬಾರದು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಮಾಜಿ ಅಧ್ಯಕ್ಷ ಟಿ.ಡಿ.ಮೇಘರಾಜ್, ಮಾಧ್ಯಮ ಪ್ರಮುಖ್ ಹು.ಬಾ.ಅಶೋಕ್ ಉಪಸ್ಥಿತರಿದ್ದರು.
……………………………