ಶಿವಮೊಗ್ಗ:ಕಾಶ್ಮೀರದಲ್ಲಿ ಭಯೋತ್ಪಾದಕರ ಗುಂಡಿನ ದಾಳಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ್ ರಾವ್ ಅವರ ಪಾರ್ಥೀವ ಶರೀರ ಇಂದು ಬೆಳಿಗ್ಗೆ 5.30ರ ಸುಮಾರಿಗೆ ಬೆಂಗಳೂರಿನಿಂದ ಹೊರಟು 10.30ಕ್ಕೆ ಶಿವಮೊಗ್ಗದ ಅವರ ಮನೆಗೆ ತಲುಪಿತು.
ಪ್ರಾರ್ಥಿವ ಶರೀರದೊಂದಿಗೆ ಅವರ ಪುತ್ರ ಅಭಿಜೈ ಮತ್ತು ಪತ್ನಿ ಪಲ್ಲವಿ ಅಂಬ್ಯುಲೆನ್ಸ್ನಲ್ಲಿ ಜೊತೆಗಿದ್ದರು. ಅಲ್ಲಲ್ಲಿ ಮಂಜುನಾಥ್ ಅವರ ಪಾರ್ಥಿವ ಶರೀರಕ್ಕೆ ಸಾರ್ವಜನಿಕರು ಹೂವಿನ ಹಾರ ಹಾಕಿ ಗೌರವ ಸಮರ್ಪಿಸಿ ಭಯೋತ್ಪಾದಕರ ಕೃತ್ಯವನ್ನು ಖಂಡಿಸಿ ದೇಶ ಪ್ರೇಮವನ್ನು ಮೆರೆದರು.

ಶಿವಮೊಗ್ಗಕ್ಕೆ ಪಾರ್ಥೀವ ಶರೀರ ಪ್ರವೇಶಿಸುತ್ತಿದ್ದಂತೆ ವಿಶ್ವ ಹಿಂದೂ ಪರಿಷತ್ ಬಜರಂಗದಳದ ವತಿಯಿಂದ ಅದ್ದೂರಿ ಸ್ವಾಗತ ಮತ್ತು ಬೈಕ್ ರ್ಯಾಲಿ ಮೂಲಕ ಮಂಜುನಾಥ್ ಮನೆಯವರೆಗೆ ಘೋಷಣೆಗಳನ್ನು ಕೂಗುತ್ತ ಕರೆದೊಯ್ಯಲಾಯಿತು. ನಂತರ ಮನೆಯಲ್ಲಿ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಿ ಅಲ್ಲಿ ಅವರ ತಾಯಿಯವರು ದರ್ಶನ ಮಾಡಿದ ಬಳಿಕ ಕೆಲವು ವಿಧಿ ವಿಧಾನಗಳನ್ನು ಪೂರೈಸಿ ಸಾರ್ವಜನಿಕ ದರ್ಶನಕ್ಕೆ ಇಡಲಾಯಿತು. ಇದಕ್ಕೂ ಮೊದಲು ಮನೆಯ ಅಕ್ಕಪಕ್ಕ ಬ್ಯಾರಿಕೇಡ್ ಅಳವಡಿಸಿ ಪೊಲೀಸ್ ಬಂದೋಬಸ್ತ್ನೊಂದಿಗೆ ಸಕಲ ಸಿದ್ದತೆಗಳನ್ನು ಮಾಡಲಾಗಿತ್ತು.
ನಗರದ ಸಹಸ್ರಾರು ಜನರು ಪಾರ್ಥಿವಶರೀರದ ದರ್ಶನಕ್ಕೆ ಬೆಳಗ್ಗೆಯಿಂದಲೇ ಕಾಯುತ್ತಿದ್ದರು. ಗಣ್ಯಾತಿಗಣ್ಯರು ಹಾಗೂ ಅಧಿಕಾರಿಗಳು ಅಂತಿಮ ದರ್ಶನ ಪಡೆದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಡಿ.ಎಸ್.ಅರುಣ್, ಧನಂಜಯಸರ್ಜಿ, ಬಲ್ಕೀಶ್ ಭಾನು ಹಾಗೂ ಪ್ರಮುಖರಾದ ಎಸ್.ದತ್ತಾತ್ರಿ, ಎಸ್.ರುದ್ರೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಮ್ಯಾಮ್ಕೋಸ್ ಅಧ್ಯಕ್ಷರಾದ ಮಹೇಶ್, ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರು ಮತ್ತು ಸದಸ್ಯರು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಮಾಜಿ ಸಂಸದ ಆಯನೂರು ಮಂಜುನಾಥ್, ಜಿಲ್ಲಾಧಿಕಾರಿ ಗುರುದತ್ಹೆಗಡೆ, ಪೂರ್ವವಲಯ ಐಜಿಪಿ ರವಿಕಾಂತೇಗೌಡ, ಎಸ್.ಪಿ.ಮಿಥುನ್ಕುಮಾರ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿಗಳಾದ ಕಾರ್ಯಪ್ಪ, ಅನಿಲ್ಕುಮಾರ್, ಉಪವಿಭಾಗಾಧಿಕಾರಿಗಳು ತಹಶೀಲ್ದಾರ್, ಆರ್ಎಸ್ಎಸ್ ಪ್ರಮುಖರಾದ ಪಟ್ಟಾಭಿರಾಮ್, ವಿಹೆಚ್ಪಿ ಅಧ್ಯಕ್ಷರಾದ ವಾಸುದೇವ್, ಬಜರಂಗದಳದ ರಾಜೇಶ್ ಗೌಡ ಸೇರಿದಂತೆ ಹಿಂದೂಪರ ಸಂಘಟನೆಗಳ ಪ್ರಮುಖರು ಎಲ್ಲಾ ಪಕ್ಷದ ಪ್ರಮುಖರು ಅಂತಿಮ ದರ್ಶನ ಪಡೆದು ಪುಷ್ಪನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅವರ ಮೃತ ಮಂಜುನಾಥ್ ಪತ್ನಿ ಪಲ್ಲವಿ ಮಾತನಾಡಿ, ತನ್ನ ಮಗ ದ್ವಿತೀಯ ಪಿಯುಸಿಯಲ್ಲಿ 97% ಅಂಕಪಡೆದಿದ್ದು, ಆ ಖುಷಿಯಿಂದ ಪತಿ ಮತ್ತು ಮಗನೊಂದಿಗೆ ನಾವು ಕಾಶ್ಮೀರ ಪ್ರವಾಸಕ್ಕೆ ಹೋಗಿದ್ದೇವು. ಈ ಘಟನೆ ನಿರೀಕ್ಷಿಸಿರಲಿಲ್ಲ. ಘಟನೆಯ ಬಳಿಕ ನನಗೆ ಆಘಾತವಾಯಿತು. ಅಲ್ಲಿನ ಸ್ಥಳಿಯರು ನನಗೆ ಸಹಕರಿಸಿದರು. ಮಗನನ್ನು ಬೆನ್ನಮೇಲೆ ಹೊತ್ತು ಆಸ್ಪತ್ರೆಗೆ ಕರೆದುಕೊಂಡು ಹೋದರು. ನನಗೂ ಕೂಡ ಧೈರ್ಯ ತುಂಬುತ್ತ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋದರು. ಅವರು ಮುಸ್ಲಿಂರಾಗಿದ್ದರು. ಅವರಿಗೂ ಭಯೋತ್ಪಾದಕರು ಬೆದರಿಕೆ ಒಡ್ಡಿದ್ದರು. ಆದರೆ ಅವರು ಕಾಬಿಲ್ ಬಿಸ್ಮಿಲ್ಲಾ ಎಂದು ಹೇಳುತ್ತಾ ಅವರೊಂದಿಗೆ ಮಾತನಾಡಿ, ವಿನಂತಿ ಮಾಡಿದರು. ಅಲ್ಲಿ ಸ್ವಲ್ಪಮಟ್ಟಿಗೆ ಹಿಂದೂ ವಿರೋಧಿ ವಾತಾವರಣವಿದೆ. ಆದರೆ ನಮಗೆ ಅಲ್ಲಿನ ಸ್ಥಳೀಯ ಮುಸ್ಲಿಂರೇ ಸಹಾಯ ಮಾಡಿದ್ದಾರೆ ಎಂದರು.

ಈ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿ, ಇನ್ನೂ ಮುಂದೆ ಈ ರೀತಿಯ ಘಟನೆಗಳು ನಡೆಯಬಾರದು. ಆ ರೀತಿಯ ತಕ್ಕ ಪಾಠವನ್ನು ಭಯೋತ್ಪಾದಕರಿಗೆ ಮೋದಿ ಸರ್ಕಾರ ಕೈಗೊಳ್ಳಲಿ ಎಂದರು.
ನಂತರ ಪಾರ್ಥೀವ ಶರೀರವನ್ನು ಅಲಂಕೃತ ವಾಹನದಲ್ಲಿ ಸುಮಾರು ಒಂದು ಘಂಟೆಯ ವೇಳೆಗೆ ಮೆರವಣಿಗೆ ಪ್ರಾರಂಭವಾಯಿತು. ಮೆರವಣಿಗೆಯಲ್ಲಿ ಭಯೋತ್ಪದನೆಗೆ ಕುಮ್ಮಕ್ಕು ನೀಡುವ ಪಾಕಿಸ್ತಾನಕ್ಕೆ ದಿಕ್ಕಾರ, ಮುರ್ದಾಬಾದ್ ಮುರ್ದಾಬಾದ್ ಪಾಕಿಸ್ತಾನ್ ಮುರ್ದಾಬಾದ್, ಅಮರ್ ರಹೇ.. ಅಮರ್ ರಹೇ ಮಂಜುನಾಥ್ ಅಮರ್ ರಹೇ ಎಂಬ ಘೋಷಣೆ ಮಂಜುನಾಥ್ ಅವರ ಮನೆಯ ಮುಂದೆ ಜಮಾವಣೆಗೊಂಡ ಸಾರ್ವಜನಿಕರು ಘೋಷಣೆ ಕೂಗಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿ ತುಂಗ ನದಿಯ ದಡದಲ್ಲಿರುವ ರೋಟರಿ ಚಿತಾಗಾರಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ಮಾಡಲಾಯಿತು.
ಈ ಸಂದರ್ಭದಲ್ಲಿ ಸಚಿವ ಮಧುಬಂಗಾರಪ್ಪ ಸೇರಿದಂತೆ ಗಣ್ಯರು, ಜನಪ್ರತಿನಿಧಿಗಳು, ಕುಟುಂಬಸ್ಥರು ಪಾಲ್ಗೊಂಡಿದ್ದರು.
ಮಾಜಿ ಡಿಸಿಎಂ ಈಶ್ವರಪ್ಪ ಮಾತನಾಡಿ ಈ ಘಟನೆಯಿಂದ ದೇಶದಲ್ಲಿ ಅಖಂಡತೆಗೆ ಕಾರಣವಾಗಿದೆ. ಪಾಕಿಸ್ತಾನ ತನ್ನ ಶವಕ್ಕೆ ತಾನೇ ಕೊನೆಯ ಮೊಳೆ ಹೊಡೆದುಕೊಂಡು ಅದರ ಅಂತ್ಯಕ್ಕೆ ನಾಂದಿಯಾಡಿದೆ ಎಂದರು.
ಮೋದಿ ಸರ್ಕಾರ ಕೇವಲ ಎರಡು ಗಂಟೆಯಲ್ಲಿ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದೆ. ಪಾಕಿಸ್ತಾನಕ್ಕೆ ಜಲ ಬಾಂಬ್ ಹಾಕಿದೆ. 1969ರ ಸಿಂಧು ನದಿ ಒಪ್ಪಂದದ ಪ್ರಕಾರ ನಾವು ನೀಡುತ್ತಿದ್ದ ನೀರನ್ನು ನಿಲ್ಲಿಸಿ ಪಾಕಿಸ್ತಾನಿ ಪ್ರಜೆಗಳನ್ನು ಮತ್ತು ರಾಯಬಾರಿಗಳನ್ನು ಕೂಡಲೇ ದೇಶಬಿಡುವಂತೆ ತಾಕೀತು ಮಾಡಿದೆ. ಮೊದಲೇ ತೀರ ಹೀನಾಯ ಸ್ಥಿತಿಯಲ್ಲಿರುವ ಪಾಕಿಸ್ತಾನಕ್ಕೆ ಆರ್ಥಿಕ ಹೊಡೆತ ನೀಡಲು ಈಗಾಗಲೇ ಮೋದಿ ಕ್ರಮ ಕೈಗೊಂಡಿದ್ದಾರೆ ಎಂದರು.
ಇಂದು ಶ್ರದ್ದಾಂಜಲಿ ಅರ್ಪಿಸಿ ಇನ್ಮುಂದೆ ರಾಷ್ಟ್ರಭಕ್ತರು ಏನು ಮಾಡಲಿದ್ದಾರೆ ಕಾದು ನೋಡಬೇಕಿದೆ. ಅಖಂಡ ಭಾರತ ಆಗುತ್ತೆ. ಇಂದಲ ನಾಳೆ ಪಾಕಿಸ್ತಾನ್ ಭೂಪಟದಿಂದ ನಾಶವಾಗಲಿದ್ದು, ದೇಶದಲ್ಲಿ ರಾಷ್ಟ್ರಭಕ್ತಿಯನ್ನು ಜಾಗೃತವಾಗಿಸಿ ಅಖಂಡ ಭಾರತವಾಗಲು ಇದೊಂದು ಅವಕಾಶ ಎಂದರು.
ಕಾಂಗ್ರೆಸ್ ಮುಖಂಡ ರಾಬರ್ಟ್ ವಾರ್ದಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ ಆತ ದೇಶದ್ರೋಹಿ. ಆದರೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಈ ಸಂದರ್ಭದಲ್ಲಿ ದೇಶವೊಂದಾಗಿ ಇರಬೇಕು.ಕೇಂದ್ರ ಸರ್ಕಾರಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎನ್ನುವ ಹೇಳಿಕೆಯನ್ನು ನಾನು ಸ್ವಾಗತ ಮಾಡುತ್ತೇನೆ. ಹಿಂದೆ ಕೂಡ ವಾಜಪೇಯಿ ಅವರು ಭಾರತಕ್ಕೆ ಸಂಕಟ ಬಂದಾಗ ಪ್ರಧಾನಿ ಇಂದಿರಾಗಾಂಧಿಯವರನ್ನು ದುರ್ಗೆ ಎಂದು ಹೊಗಳಿ ಬೆಂಬಲ ಸೂಚಿಸಿದ್ದರು. ದೇಶದ ಸಂಕಷ್ಟದ ಸಂದರ್ಭದಲ್ಲಿ ರಾಜಕಾರಣ ಯಾರೂ ಕೂಡ ಮಾಡಬಾರದು ಎಂದರು.
ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಕಾಶ್ಮೀರದಲ್ಲಿ ಇನ್ನೇನು ಸಾರ್ವಜನಿಕರು ಬದುಕು ಕಟ್ಟಿಕೊಂಡು ಜೀವನ ಮಾಡಲು ಮುಂದಾದಾಗ ಪಹಲ್ಗಾಮ್ನಲ್ಲಿ ಭಯೋತ್ಪಾದಕರ ಅಟ್ಟಹಾಸ ಮೆರೆದಿದ್ದಾರೆ. ಇದಕ್ಕೆ ತಕ್ಕ ಉತ್ತರ ಪ್ರಧಾನಿ ಮೋದಿ ತೆಗೆದುಕೊಂಡಿದೆ. ಡಿಪ್ಲಮೆಟಿಕ್ ಆಕ್ಷನ್ ನ್ನ ತೆಗೆದುಕೊಂಡಿದೆ. ಪಾಕಿಸ್ತಾನಕ್ಕೆ ಮತ್ತು ಭಯೋತ್ಪಾದಕರಿಗೆ ತಕ್ಕ ಉತ್ತರ ನೀಡಲಾಗುವುದು.
ಕಾಶ್ಮೀರ ಅಭಿವೃದ್ಧಿಯತ್ತ ಸಾಗಿತ್ತು. ಪ್ರವಾಸೋದ್ಯಮ ಗರಿಗೆದರಿತ್ತು. ಅಲ್ಲಿನ ಜನರಿಗೂ ಜಾತಿ ಧರ್ಮ ಮೀರಿ ಭಾರತದಲ್ಲಿ ಒಳ್ಳೆಯ ಭವಿಷ್ಯವಿದೆ ಎಂದು ಅರಿವಾಗಿತ್ತು. ಈಗ ಈ ಘಟನೆ ಅವರ ಬದುಕಿಗೆ ಹೊಡೆತ ನೀಡಿದೆ. ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಭಯೋತ್ಪಾದನೆ ನಿಗ್ರಹಕ್ಕೆ ಹಲವು ಕ್ರಮ ಕೈಗೊಂಡಿದೆ. ಭಯೋತ್ಪಾದಕರ ವಿರುದ್ಧದ ಹೋರಾಟ ಇನ್ನಷ್ಟು ತೀವ್ರಗೊಳಿಸಿ ದೇಶದಲ್ಲಿ ಭಯೋತ್ಪಾದನೆಯನ್ನು ಬುಡ ಸಮೇತ ಕಿತ್ತು ಹಾಕಲು ಕೇಂದ್ರ ಸರ್ಕಾರ ಸಿದ್ಧವಾಗಿದೆ ಎಂದರು. ಎಲ್ಲರೂ ಸೇರಿ ಈ ಗಟ್ಟಿ ನಿರ್ಧಾರಕ್ಕೆ ಬೆಂಬಲ ನೀಡೋಣ ಎಂದರು.
ಸಚಿವ ಮಧುಬಂಗಾರಪ್ಪ ಮಾತನಾಡಿ ನಿನ್ನೆ ಮಂಜುನಾಥ್ರವರ ಮನೆಗೆ ಬಂದು ತಾಯಿಗೆ ಸಾಂತ್ವನ ಹೇಳಿ ಹೋಗಿದ್ದೆ. ಮುಖ್ಯಮಂತ್ರಿಗಳು ಮತ್ತು ಸಚಿವ ಸಂತೋಷ್ ಲಾಡ್ ಕೂಡ ನಿರಂತರ ಸಂಪರ್ಕದಲ್ಲಿದ್ದು, ಪಲ್ಲವಿಯವರ ಜೊತೆ ಮಾತನಾಡಿ, ಎಲ್ಲ ರೀತಿಯ ನೆರವು ನೀಡಿದ್ದಾರೆ. ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಇನ್ನೂ ಹೆಚ್ಚಿನ ನೆರವನ್ನು ನೀಡಲು ನಾವೆಲ್ಲರೂ ಸೇರಿ ಪ್ಲ್ಯಾನ್ ಮಾಡಿದ್ದೇವೆ. ಇಂತಹ ಘಟನೆ ನಡೆಯಬಾರದು. ದೇಶ ಒಂದಾಗಿ ಖಂಡಿಸಬೇಕು. ಇದಕ್ಕೆ ಒಂದು ಶಾಶ್ವತ ಪರಿಹಾರ ಹುಡುಕೋಣ, ಆ ಕುಟುಂಬದ ಜೊತೆಗೆ ನಮ್ಮ ಸರ್ಕಾರವಿದೆ. ಮಗನ ಭವಿಷ್ಯಕ್ಕೂ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.
ಮಂಜುನಾಥ್ ಅಂತಿಮ ಯಾತ್ರೆ ಪ್ರಯುಕ್ತ ನಿನ್ನೆ ವಿವಿಧ ಸಂಘಟನೆಗಳು ನೀಡಿದ ಕರೆಯಂತೆ ಮೆರವಣಿಗೆ ಸಾಗುವ ರಸ್ತೆಯ ಮತ್ತು ಗಾಂಧಿಬಜಾರ್ನ ಎಲ್ಲಾ ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ಬಂದ್ ಆಚರಿಸಿ ಮಂಜುನಾಥ್ ಅವರಿಗೆ ಗೌರವ ಸಲ್ಲಿಸಿದರು. ಮೆರವಣಿಗೆಯುದ್ದಕ್ಕೂ ಹಿಂದೂ ಪರ ಕಾರ್ಯಕರ್ತರು ಮಂಜುನಾಥ್ ಅಮರ್ ರಹೇ, ಪಾಕಿಸ್ತಾನ ಮುರ್ದಾಬಾದ್ ಎಂದು ಘೋಷಣೆ ಕೂಗುತ್ತ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸಹಸ್ರಾರು ಸಂಖ್ಯೆಯಲ್ಲಿ ಮಂಜುನಾಥ್ ಅವರಿಗೆ ಸಾರ್ವಜನಿಕರು ಪುಷ್ಪನಮನ ಸಲ್ಲಿಸಿದರು.