ಸಾಗರ : ಪಟ್ಟಣ ವ್ಯಾಪ್ತಿಯಲ್ಲಿ ಭಾನುವಾರ ಸುರಿದ ಗಾಳಿಮಳೆಗೆ ಅಪಾರ ಪ್ರಮಾಣದ ಹಾನಿಯುಂಟಾಗಿದ್ದು, ವಿದ್ಯುತ್ ಕಂಬಗಳು ಮುರಿದು ಬಿದ್ದ ಘಟನೆ ನಡೆದಿದೆ.

ನಗರದ ಧರ್ಮಶ್ರೀ ಲೇಔಟ್, ಶ್ರೀರಾಮ ಪುರ ಬಡಾವಣೆ, ಇಂದಿರಾ ನಗರ, ಶಾಂತಿನಗರ, ಅಣಲೆಕೊಪ್ಪ, ಎಸ್.ಎನ್.ನಗರ ಇನ್ನಿತರೆ ಭಾಗಗಳಲ್ಲಿ ಮನೆಗಳ ಮೇಲೆ ಮರ ಮುರಿದು ಬಿದ್ದು ಅಪಾರ ಹಾನಿ ಸಂಭವಿಸಿದೆ. ನಗರದ ಬೇರೆಬೇರೆ ಬಡಾವಣೆಗಳಲ್ಲಿ ೨೦ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದು ವಿದ್ಯುತ್ ವ್ಯತ್ಯಯ ಸಂಭವಿಸಿದೆ.

ಶ್ರೀರಾಮಪುರ ಬಡಾವಣೆಯ ಗೋಪಾಲರಾವ್ ಎಂಬುವವರ ಆರ್.ಸಿ.ಸಿ. ಮನೆಯ ಮೇಲೆ ಬೃಹತ್ ಗಾತ್ರದ ಮರ ಮುರಿದು ಬಿದ್ದು ಮನೆ ಜಖಂಗೊಂಡಿದೆ. ಮನೆಯ ಮೇಲ್ಭಾಗದ ತಗಡಿನ ಷೆಡ್ ಮುರಿಯುವ ಜೊತೆಗೆ ಆರ್.ಸಿ.ಸಿ. ಮನೆ ಬಿರುಕು ಬಂದಿದೆ.

ಎಸ್.ಎನ್.ನಗರದ ಇಕ್ಕೇರಿ ರಸ್ತೆಯಲ್ಲಿ ಬೃಹತ್ ಮರವೊಂದು ಮುರಿದು ಬಿದ್ದು ವಾಹನ ಸಂಚಾರಕ್ಕೆ ತೀವೃ ಅಡಚಣೆ ಉಂಟಾಯಿತು. ನಗರಸಭೆ ಮತ್ತು ಮೆಸ್ಕಾಂನವರು ಮರ ತೆರವುಗೊಳಿಸಿ ೧೨ಗಂಟೆ ನಂತರ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಬಹುತೇಕ ಕಡೆಗಳಲ್ಲಿ ವಿದ್ಯುತ್ ತಂತಿಯ ಮೇಲೆ ಮರ ಮುರಿದು ಬಿದ್ದಿರುವುದು, ವಿದ್ಯುತ್ ಕಂಬ ಮುರಿದು ಬಿದ್ದಿದ್ದರಿಂದ ನಗರವ್ಯಾಪ್ತಿಯಲ್ಲಿ ಭಾನುವಾರ ಸಂಜೆ ೬ರಿಂದ ರಾತ್ರಿ ೧೨ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಸ್ಥಳಕ್ಕೆ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
: ಫೋನ್ ಎತ್ತದ ಪೌರಾಯುಕ್ತ : ನಗರವ್ಯಾಪ್ತಿಯಲ್ಲಿ ಭಾನುವಾರ ಮಳೆಗಾಳಿಗೆ ಅನೇಕ ಕಡೆಗಳಲ್ಲಿ ಮನೆಹಾನಿಯಾಗಿದ್ದು, ಮರಗಳು ಧರೆಗುರುಳಿ ದೊಡ್ಡಮಟ್ಟದ ಅನಾಹುತವಾಗಿದೆ. ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ. ಸಾರ್ವಜನಿಕರು ಸಮಸ್ಯೆ ಹೇಳಲು ಫೋನಾಯಿಸಿದರೆ ಪೌರಾಯುಕ್ತ ನಾಗಪ್ಪ ಯಾವ ಫೋನ್ ಕರೆಯನ್ನು ಸ್ವೀಕರಿಸಿಲ್ಲ. ಸೋಮವಾರ ಸಹ ಮಳೆಹಾನಿ ಬಗ್ಗೆ ಮಾಹಿತಿ ಕೇಳಲು ಪತ್ರಕರ್ತರು ಫೋನ್ ಮಾಡಿದಾಗಲೂ ಪೌರಾಯುಕ್ತ ನಾಗಪ್ಪ ಫೋನ್ ಎತ್ತದೆ ಸತಾಯಿಸಿದ್ದಾರೆ ಎನ್ನಲಾಗಿದೆ.