ಶಿವಮೊಗ್ಗ: ವಕ್ಫ್ ಕಾಯ್ದೆಯ ವಿರೋಧದ ಹೆಸರಿನಲ್ಲಿ ಪಶ್ಚಿಮ ಬಂಗಾಳವನ್ನು ಹಿಂಸಾಚಾರದ ಅಗ್ನಿ ಕುಂಡಕ್ಕೆ ನೂಕುತ್ತಿರುವ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವನ್ನು ರಾಷ್ಟ್ರಪತಿಗಳು ತಕ್ಷಣ ವಜಾಗೊಳಿಸಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು ಇಂದು ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಹಿಂದೂಗಳಿಗೆ ಬಲಾತ್ಕಾರವಾಗಿ ಕಿರುಕುಳ ನೀಡಲಾಗುತ್ತಿದೆ. ರಾಷ್ಟ್ರ ವಿರೋಧಿ ಮತ್ತು ಹಿಂದೂ ವಿರೋಧಿ ಶಕ್ತಿಗಳಿಗೆ ತಮ್ಮ ಚತುರ ಯೋಜನೆಗಳನ್ನು ನಿಷ್ಕಂಟಕವಾಗಿ ನಿರ್ವಹಿಸಲು ಸಂಪೂರ್ಣ ಮುಕ್ತತೆ ನೀಡಲಾಗಿದೆ. ಇದರಿಂದ ಬಂಗಾಳದ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಮುರ್ಶಿದಾಬಾದ್ನಲ್ಲಿ ಆರಂಭವಾದ ಈ ಭೀಕರ ಹಿಂಸೆ ಇಡೀ ಬಂಗಾಳದ ಮೇಲೆ ವ್ಯಾಪಿಸುತ್ತಿರುವಂತಿದೆ. ಆಡಳಿತ ವ್ಯವಸ್ಥೆ ದಂಗೆಕೋರರ ಎದುರು ನಿಷ್ಕ್ರಿಯವಾಗಿರುವುದಲ್ಲದೆ ಕೆಲ ಕಡೆಗಳಲ್ಲಿ ಅವರಿಗೆ ಸಹಾಯಕರಾಗಿ ಅಥವಾ ಪ್ರೇರಕರಾಗಿ ಕೆಲಸ ಮಾಡುತ್ತಿರುವುದು ಗೋಚರವಾಗುತ್ತಿದೆ. ಪರಿಸ್ಥಿತಿಯು ನಿಯಂತ್ರಣದಿಂದ ಹೊರ ಹೋಗುವ ಮೊದಲು, ಕೇಂದ್ರ ಸರ್ಕಾರವು ಆಡಳಿತವನ್ನು ತನ್ನ ಕೈಯಲ್ಲಿ ತೆಗೆದುಕೊಂಡು ರಾಷ್ಟ್ರ ಮತ್ತು ಹಿಂದೂ ವಿರೋಧಿ ಶಕ್ತಿಗಳಿಗೆ ಅವರ ದುಷ್ಕøತ್ಯಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಲಾಗಿದೆ.

ಏ.11ರಂದು ಮುಸ್ಲಿಂ ಗುಂಪು ವಕ್ಫ ಕಾಯ್ದೆಯ ವಿರೋಧದ ಹೆಸರಿನಲ್ಲಿ ನಡೆಸಿದ ಹಿಂಸಾತ್ಮಕ ಪ್ರತಿಭಟನೆ, ಸರ್ಕಾರದ ವಿರುದ್ಧವಲ್ಲದೆ ಹಿಂದೂಗಳ ಮೇಲೆ ನೇರವಾಗಿ ನಡೆದ ಹಿಂಸಾತ್ಮಕ ದಾಳಿ ಆಗಿತ್ತು. ಈ ಕಾಯ್ದೆಯ ರಚನೆಯಲ್ಲಿ ಹಿಂದೂ ಸಮುದಾಯದ ಯಾವುದೇ ಪಾತ್ರವಿಲ್ಲ ಎಂಬುದನ್ನು ಪ.ಬಂ.ಸರ್ಕಾರ ಮನಗಾಣಬೇಕಿತ್ತು. ಇದು ಶುದ್ಧ ಸಂವಿಧಾನಾತ್ಮಕ ಪ್ರಕ್ರಿಯೆ ಆಗಿತ್ತು. ಇದರ ಅರ್ಥ, ವಕ್ಫ್ ಕೇವಲ ನೆಪವಾಗಿತ್ತು ಎಂದು ಪ್ರತಿಭಟನಾಕಾರರು ಆರೋಪಿಸಿದರು.

ನಿಜವಾದ ಉದ್ದೇಶ ಮುರ್ಶಿದಾಬಾದ್ ಅನ್ನು ಹಿಂದೂ ಶೂನ್ಯವಾಗಿಸುವುದಾಗಿತ್ತು. ಈ ಜಿಹಾದಿ ಗುಂಪು 200ಕ್ಕಿಂತ ಅಧಿಕ ಹಿಂದೂಗಳ ಮನೆಗಳು ಮತ್ತು ಅಂಗಡಿಗಳನ್ನು ಬೆಂಕಿ ಹಚ್ಚಿ ನಾಶಮಾಡಿತು, ನೂರಾರು ಜನರನ್ನು ಗಂಭೀರವಾಗಿ ಗಾಯಗೊಳಿಸಿತು ಹಾಗೂ ಮೂರು ನಾಗರಿಕರನ್ನು ಕೊಂದು ಹಾಕಿತು. ಡಜನ್ಗಟ್ಟಲೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೂ ನಡೆದಿದೆ. ಇದರ ಪರಿಣಾಮವಾಗಿ 500ಕ್ಕೂ ಹೆಚ್ಚು ಹಿಂದೂ ಕುಟುಂಬಗಳು ಮುರ್ಶಿದಾಬಾದ್ ನಿಂದ ಪಲಾಯನ ಮಾಡಬೇಕಾಯಿತು ಎಂದು ಕಿಡಿ ಕಾರಿದರು.

ಅವರಿಗೆ ಭೇಟಿ ನೀಡಿ ಸಹಾಯ ಮಾಡುವ ಬದಲು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಈ ದಂಗೆಗೆ ಕಾರಣಕರ್ತರಾದವರನ್ನು ರಕ್ಷಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿ.ಎಚ್.ಪಿ. ಜಿಲ್ಲಾಧ್ಯಕ್ಷ ವಾಸುದೇವ್, ಶಾಸಕ ಎಸ್.ಎನ್.ಚನ್ನಬಸಪ್ಪ, ನಟರಾಜ್ ಭಾಗ್ವತ್, ರಮೇಶ್ ಬಾಬು, ರಾಜೇಶ್ ಗೌಡ, ಜಗದೀಶ್, ಕೆ.ಇ.ಕಾಂತೇಶ್, ಸುರೇಖಾ ಮುರಳೀಧರ, ಶ್ರೀನಿವಾಸ್ ಪುರಾಣಿಕ್ ಮೊದಲಾದವರಿದ್ದರು.