ಶಿವಮೊಗ್ಗ: ಸಿಇಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಧಾರ್ಮಿಕ ಸಂಕೇತಗಳನ್ನು ಬಲವಂತವಾಗಿ ತೆಗೆಸಿರುವುದನ್ನು ಖಂಡಿಸಿ ರಾಷ್ಟ್ರಭಕ್ತರ ಬಳಗ ಇಂದು ಕೆ.ಈ.ಕಾಂತೇಶ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಇತ್ತೀಚೆಗೆ ನಡೆದ ಸಿಇಟಿ ಪರೀಕ್ಷೆಯ ವೇಳೆ ಶಿವಮೊಗ್ಗದ ಪರೀಕ್ಷಾ ಕೇಂದ್ರಗಳಲ್ಲಿ ಹಾಗೂ ರಾಜ್ಯದ ಕೆಲವು ಕಡೆ ವಿದ್ಯಾರ್ಥಿಗಳ ತಪಾಸಣೆ ವೇಳೆ ಅವರು ಧರಿಸಿದ್ದ ಜನಿವಾರ, ಕಾಶಿದಾರ, ಶಿವದಾರ, ರುದ್ರಾಕ್ಷಿ ಹಾಗೂ ಇನ್ನಿತರ ಧಾರ್ಮಿಕ ಸಂಕೇತವುಳ್ಳ ವಸ್ತುಗಳನ್ನು ಸರ್ಕಾರದಿಂದ ನಿಯೋಜನೆಗೊಂಡ ಅಧಿಕಾರಿಗಳು ತೆಗೆಸಿದ್ದಾರೆ. ಸರ್ಕಾರದ ಸುತ್ತೋಲೆಯಲ್ಲಿರುವ ನಿರ್ಬಂಧಿತ ವಸ್ತುಗಳನ್ನು ತೆಗೆಸಲು ನಮ್ಮ ಯಾವುದೇ ವಿರೋಧವಿಲ್ಲ. ಆದರೆ ಹಿಂದೂಗಳ ಧಾರ್ಮಿಕ ಭಾವನೆ ಹಾಗೂ ನಂಬಿಕೆಗೆ ಧಕ್ಕೆ ಬರುವ ಹಾಗೆ ಕೆಲವು ಅಧಿಕಾರಿಗಳ ನಡೆ ಖಂಡನಾರ್ಹವಾಗಿದೆ. ಇಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಾಗೂ ಮುಂದಿನ ದಿನಗಳಲ್ಲಿ ಈ ರೀತಿಯ ಅಚಾತುರ್ಯಗಳು ನಡೆಯದಂತೆ ಕ್ರಮ ವಹಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಭಕ್ತ ಬಳಗದ ಪ್ರಮುಖರಾದ ಕೆ.ಈ.ಕಾಂತೇಶ್, ಹಿಂದೂಗಳ ಭಾವನೆಗಳ ಮೇಲೆ ಪ್ರಹಾರ ಮಾಡಲು ರಾಜ್ಯ ಸರ್ಕಾರ ಹೊರಟಿದೆ. ಈ ಸರ್ಕಾರ ಬಸ್ಮಾವಾಗುವುದು ಖಚಿತ. ಬೀದರ್ನ ಪರೀಕ್ಷಾ ಕೇಂದ್ರವೊಂದರಲ್ಲಿ ಬಲವಂತವಾಗಿ ಜನಿವಾರ ತೆಗೆಸಿದ ವಿದ್ಯಾರ್ಥಿ ಆತಂಕಕ್ಕೆಒಳಗಾಗಿದ್ದು, ಒಂದು ಪರೀಕ್ಷೆಯನ್ನು ಬರೆದಿರುವುದಿಲ್ಲ. ಆತನಿಗೆ ಮತ್ತೇ ಅವಕಾಶ ನೀಡಬೇಕು. ಮಂಗಳವಾರದವರೆಗೆ ಗಡುವು ನೀಡುತ್ತೇವೆ. ಅಷ್ಟರೋಳಗೆ ಆತನಿಗೆ ಮತ್ತೇ ಅವಕಾಶ ಕಲ್ಪಿಸದೇ ಇದ್ದರೆ ಹಾಗೂ ಸಂಬಂದಪಟ್ಟ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳದೇ ಇದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಮೋಹನ್ಕುಮಾರ್ ಜಾಧವ್ ಮಾತನಾಡಿ, ಓಟಿಗಾಗಿ ಒಂದು ಸಮುದಾಯದ ತುಷ್ಟೀಕರಣಕ್ಕಾಗಿ ಈ ಸರ್ಕಾರ ಯಾವ ಮಟ್ಟಕ್ಕಾದರೂ ಇಳಿಯುತ್ತದೆ. ರಾಹುಲ್ಗಾಂಧಿಯವರು ಎಲೆಂಕ್ಷನ್ ಸಂದರ್ಭದಲ್ಲಿ ಜನಿವಾರ ಹಾಕಿ ಪ್ರಚಾರ ಮಾಡಿದ್ದರು. ಮಕ್ಕಳ ಆಯೋಗ ಈಗ ಏನೂ ಮಾಡುತ್ತಿದೆ. ಧಾರ್ಮಿಕ ಭಾವನೆಯನ್ನು ಕೆರಳಿಸಿ ಮಕ್ಕಳ ಮೇಲೆ ಮಾನಸಿಕವಾಗಿ, ಒತ್ತಡ ಹೇರುವಂತಹ ಇಂತಹ ಘಟನೆಗಳಿಗೆ ಕಾರಣರಾದವರ ಮೇಲೆ ಮಕ್ಕಳ ಆಯೋಗ ಸುಮ್ಮನಿರುವುದು ಆಶ್ಚರ್ಯ ತಂದಿದೆ. ಹಿಂದೂ ಸಮಾಜಕ್ಕೆ ಒಂದು ಸಂದೇಶ ಹೋಗಬೇಕು. ಇನ್ನೂ ಮುಂದೆ ಈ ರೀತಿಯ ಘಟನೆಗಳಿಗೆ ಅವಕಾಶ ಕೊಡಬಾರದು ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ಎಂ.ಶಂಕರ್, ಕುಪೇಂದ್ರ, ಸಂತೋಷ್, ವಕೀಲರಾದ ಗೀತಾ, ಸೀತಾಲಕ್ಷ್ಮೀ , ಶಿವಾಜಿ, ಬಾಲು, ರಮೇಶ್ ಮತ್ತಿತರರು ಇದ್ದರು.