ಶಿವಮೊಗ್ಗ,ಏ.೧೬: ಶಿವಮೊಗ್ಗದ ಖಾಸಗಿ ಶಾಲೆಯೊಂದರಲ್ಲಿ ೩ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮಗುವೊಂದು ಶುಲ್ಕ ಕಟ್ಟಿಲ್ಲ ಎಂಬ ಕಾರಣಕ್ಕೆ ಜಾತಿ ನಿಂದನೆ ಮಾಡಿ ಮಗುವಿನ ಮುಂದಲೆಯ ಕೂದಲನ್ನು ಕತ್ತರಿಸಿರುವುದು ಅಮಾನವೀಯ ಎಂದು ಚಿತ್ರದುರ್ಗದ ಶ್ರೀ ಜಗದ್ಗುರು ಛಲವಾದಿ ಗುರುಪೀಠ, ಛಲವಾದಿ ಮಹಾಸಂಸ್ಥಾನ ಮಠದ ಶ್ರೀಬಸವನಾಗಿದೇವ ಶರಣರು ಆರೋಪಿಸಿದ್ದಾರೆ.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗದ ಹೊರವಲಯದಲ್ಲಿರುವ ಪ್ರತಿಷ್ಠಿತ ಖಾಸಗಿ ಶಾಲೆಯೊಂದರಲ್ಲಿ ೩ನೇ ತರಗತಿಯಲ್ಲಿ ಓದುತ್ತಿದ್ದ ಮಗುವಿನ ಬಾಕಿ ಶುಲ್ಕ ೫ ಸಾವಿರ ರೂ. ಕಟ್ಟಿಲ್ಲ ಎಂಬ ಕಾರಣಕ್ಕಾಗಿ ಪರೀಕ್ಷೆಯನ್ನು ಬರೆಯುವುದಕ್ಕೂ ಅವಕಾಶ ನೀಡದೆ ಮಗುವಿನ ಭವಿಷ್ಯವನ್ನು ಸಂಸ್ಥೆ ಹಾಳು ಮಾಡಿದೆ. ಅಷ್ಟೇ ಅಲ್ಲ ಅಸ್ಪೃಶ್ಯತೆ ಈಗಲೂ ಜೀವಂತವಾಗಿದೆ ಎಂಬುವುದು ಇದರಿಂದ ಗೊತ್ತಾಗುತ್ತದೆ. ಮಗುವಿನ ಮೇಲೆ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿರುವುದು ನಾಗರೀಕ ಸಮಾಜ ತಲೆ ತಗ್ಗಿಸುವಂತಹದ್ದು ಎಂದರು.

ಈಗಾಗಲೇ ಈ ಬಗ್ಗೆ ಪೋಲೀಸರಿಗೂ ದೂರು ನೀಡಲಾಗದೆ. ಎಫ್ಐಆರ್ ಕೂಡ ದಾಖಲಾಗಿದೆ. ಇಲಾಖೆಯ ಅಧಿಕಾರಿಗಳಿಗೂ ಕೂಡ ತಿಳಿಸಲಾಗಿದೆ. ಆದರೆ ಇಡೀ ಪ್ರಕರಣವನ್ನು ಮುಚ್ಚಿ ಹಾಕುವ ಸಂಚು ನಡೆದಿದೆ. ತನಿಖೆಯಲ್ಲಿ ಅಧಿಕಾರಿಗಳು ಸಾಕ್ಷಿ ನಾಶ ಮಾಡುವ ಹುನ್ನಾರ ನಡೆದಿದೆ. ಆದ್ದರಿಂದ ಈ ಘಟನೆಯನ್ನು ಪ್ರಾಮಾಣಿಕ ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳಬೇಕು.

ಇಲ್ಲದಿದ್ದರೆ ಸಾಮಾಜಿಕ ನ್ಯಾಯಕ್ಕಾಗಿ ಛಲವಾದಿ ಮಹಾಸಭವು ರಾಜ್ಯಾದಾದ್ಯಂತ ಹೋರಾಟವನ್ನು ಮುಂದುವರೆಸುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಛಲವಾದಿ ಸಮಾಜದ ಪ್ರಮುಖರಾದ ಜವರಯ್ಯ, ಮುತ್ತುರಾಜ್, ಆನಂದ್, ಅರುಣ್ಕುಮಾರ್, ಜಬೀವುಲ್ಲಾ, ಮಂಜುನಾಥ್ ಇದ್ದರು.