
ಶಿವಮೊಗ್ಗ: ಶಿಕ್ಷಣದಲ್ಲಿ ಧಾರ್ಮಿಕ ವಿಚಾರಗಳನ್ನು ಬೆರೆಸುವ ಮೂಲಕ ಮೌಲ್ಯ ಶಿಕ್ಷಣದ ಸೋಗಿನಲ್ಲಿ ಧಾರ್ಮಿಕ ಮತಾಂಧತೆ ಸಲ್ಲದು. ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ಮಕ್ಕಳು ಶಾಲಾ ಕಾಲೇಜಿನಲ್ಲಿ ಕಲಿಯಬೇಕಾದ ಮೌಲ್ಯಗಳು ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ಮತ್ತು ಮಾನವ ಹಕ್ಕುಗಳ ನೆಲೆಯಲ್ಲಿನ ಮಾನವೀಯ ಮೌಲ್ಯಗಳಾಗಿರಬೇಕು. ಆಗ ಮಾತ್ರ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ. ಸುಸ್ಥಿರ ಸಮಾಜ ನಿರ್ಮಾಣಕ್ಕೆ ಮೌಲ್ಯಯುತ ಶಿಕ್ಷಣ ಅಗತ್ಯ ಎಂದು ಮಾಜಿ ಸಚಿವ, ಶಾಸಕ ಆರಗ ಜ್ಞಾನೇಂದ್ರ ಪ್ರತಿಪಾದಿಸಿದರು.
ನಗರದ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ತೀರ್ಥಹಳ್ಳಿ ತಾಲೂಕಿನ ಬಾಳಗಾರು ಗ್ರಾಮದಲ್ಲಿ ಹಮ್ಮಿಕೊಂಡಿರುವ ಎನ್ಎಸ್ಎಸ್ ಶಿಬಿರದಲ್ಲಿ ಏ.೭ರ ಸೋಮವಾರದಂದು ಪಾಲ್ಗೊಂಡು ಅವರು ಮಾತನಾಡಿದರು.

ಮೌಲ್ಯಯುತ ಶಿಕ್ಷಣ ಕುರಿತ ಚರ್ಚೆ ಸಮಾಜದಲ್ಲಿ ಹೊಸದೇನಲ್ಲ. ಶಿಕ್ಷಣದ ಮೂಲ ಉದ್ದೇಶವೇ ಸಾಮಾಜಿಕ ಒಳಿತು ಮತ್ತು ಮಾನವೀಯತೆಯ ಬದುಕನ್ನು ಕಟ್ಟಿಕೊಳ್ಳಲು ಅವಶ್ಯವಾದ ಜ್ಞಾನವನ್ನು ನೀಡುವುದಾಗಿದೆ. ಶಿಕ್ಷಣದ ಮೌಲ್ಯಗಳು ಸಾಮಾಜಿಕ ಪರಿವರ್ತನೆಯ ದೊಡ್ಡ ಸಾಧನವಾಗಿವೆ ಎಂದರು.

ಶಿಕ್ಷಣ ಚಲನಶೀಲವಾಗಿದ್ದು, ಆಯಾ ಕಾಲಕ್ಕೆ ಅಗತ್ಯವಾದ ಮೌಲ್ಯಗಳನ್ನು ಒಳಗೊಳ್ಳುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಸ್ವಾತಂತ್ರ್ಯಾ ನಂತರ ಸಾಂವಿಧಾನಿಕ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸುವ ಬಗ್ಗೆ ರಾಷ್ಟ್ರೀಯ ಶಿಕ್ಷಣ ನೀತಿಗಳು ಹಾಗೂ ಪಠ್ಯಕ್ರಮ ಚೌಕಟ್ಟುಗಳು ಒತ್ತಿ ಹೇಳಿವೆ ಎಂದು ತಿಳಿಸಿದರು.

ಮೌಲ್ಯಯುತ ಶಿಕ್ಷಣವು ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಮೌಲ್ಯಗಳ ಜೊತೆಗೆ ಮಾನವ ಹಕ್ಕುಗಳ ನೆಲೆಯಲ್ಲಿ ಮಾನವೀಯ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸಬೇಕು. ಇವುಗಳನ್ನು ಜೀವನದಲ್ಲಿ ಅನುಸರಿಸುವ ಮೂಲಕ ಪ್ರತಿಯೊಬ್ಬ ನಾಗರಿಕರೂ ಘನತೆಯಿಂದ ಜೀವಿಸುವ ಭೂಮಿಕೆಯನ್ನು ಸಮಾನತೆ ಮತ್ತು ತಾರತಮ್ಯ ರಹಿತ ನೆಲೆಯಲ್ಲಿ ಕಟ್ಟಿಕೊಡಬೇಕೆಂದರು.

ರಾಜ್ಯ ಸರ್ಕಾರ ಪ್ರಸಕ್ತ ಬಜೆಟ್ನಲ್ಲಿ ೧೬೦೦ ಕೋಟಿ ರೂ.ಗಳನ್ನು ಅಲ್ಪ ಸಂಖ್ಯಾಂತರಿಗೆ ೨೨೫ ಉರ್ದು ಶಾಲೆ, ೧೦೦ ಪಿಯು ಕಾಲೇಜ್, ೧೦೦ ಹಾಸ್ಟೆಲ್ ಸೇರಿದಂತೆ ಮತ್ತಿತರೆ ಉದ್ದೇಶಗಳಿಗೆ ಮೀಸಲಿಟ್ಟಿದೆ. ಎಲ್ಲಾ ಧರ್ಮದ ಮಕ್ಕಳು ಒಂದೆಡೆ ಸೇರಿ ಆಟ-ಪಾಠ ಕಲಿತಾಗ ಸಾಮರಸ್ಯ ಬೆಳೆಯುತ್ತದೆ. ಸ್ವಾತಂತ್ರ್ಯ ದೊರಕುವ ಸಂದರ್ಭದಲ್ಲಿ ಧರ್ಮಾಧಾರಿತವಾಗಿ ದೇಶ ಒಡೆಯಲಾಯಿತು. ಆದರೀಗ ಮನಸ್ಸುಗಳನ್ನು ಒಡೆಯುವ ಕೆಲಸ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಜಿಲ್ಲಾ ಒಕ್ಕಲಿಗರ ಸಂಘದ ವನಮಾಲ ಮೋಹನ್, ಸಹನಾ ಸುಭಾಷ್, ಗ್ರಾಪಂ ಸದಸ್ಯರುಗಳಾದ ವಿಷ್ಣುಮೂರ್ತಿ, ಇಂದಿರಾ, ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಮಧು ಜಿ., ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಎನ್.ಜೆ. ಪ್ರಕಾಶ್ ಮತ್ತಿತರರು ಭಾಗವಹಿಸಿದ್ದರು.