
ಬೆಂಗಳೂರು: ಕರ್ನಾಟಕ ಭೋವಿ ನಿಗಮದ ಬಹುಕೋಟಿ ರೂ. ಹಗರಣ ಸಂಬಂಧ ಜಾರಿ ನಿರ್ದೇಶನಾಲಯ(ಇ.ಡಿ)ವು ಬೆಂಗಳೂರು ಸಹಿತ ರಾಜ್ಯದಾದ್ಯಂತ 10ಕ್ಕೂ ಅಧಿಕ ಕಡೆ ದಾಳಿ ನಡೆಸಿದೆ.

ಬೆಂಗಳೂರು, ಶಿವಮೊಗ್ಗ ಸಹಿತ 10ಕ್ಕೂ ಹೆಚ್ಚು ಕಡೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಇ.ಡಿ. ವಶಪಡಿಸಿಕೊಂಡಿದೆ. ನಿಗಮದ ಪ್ರಧಾನ ವ್ಯವಸ್ಥಾಪಕರಾಗಿದ್ದ ಡಾ| ಬಿ.ಕೆ. ನಾಗರಾಜಪ್ಪ ಅವರ ಬೆಂಗಳೂರಿನ ನಿವಾಸದಲ್ಲೂ ಇ.ಡಿ. ತಂಡ ಶೋಧ ನಡೆಸಿದೆ. ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಲೀಲಾವತಿಯವರಿಗೆ ಸೇರಿದ ನಿವಾಸ ಮತ್ತು ಕಚೇರಿಗಳಲ್ಲಿ ದಾಳಿ ನಡೆಸಿದೆ. ಬ್ಯಾಂಕ್ ಖಾತೆ ವಿವರ, ಆಸ್ತಿಗಳು, ಸಂಬಂಧಿಕರ ಹೆಸರಿನಲ್ಲಿದ್ದ ಆಸ್ತಿ ಮತ್ತಿತರ ದಾಖಲೆ ಪರಿಶೀಲಿಸಿದೆ ಎಂದು ತಿಳಿದು ಬಂದಿದೆ.

ಏನಿದು ಪ್ರಕರಣ?
2021-22ನೇ ಸಾಲಿನಲ್ಲಿ ನಿಗಮದಲ್ಲಿ ಉದ್ಯಮಿಗಳಿಗೆ ಸಾಲ ನೀಡುವಾಗ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿತ್ತು. ಲಕ್ಷಾಂತರ ರೂ. ಸಾಲ ಕೊಡಿಸುವುದಾಗಿ ಸಾರ್ವ ಜನಿಕ ದಾಖಲೆ ದುರ್ಬಳಕೆ ಜತೆಗೆ 10 ಕೋ.ರೂ.ಗೂ ಹೆಚ್ಚು ಹಣ ಅಕ್ರಮವಾಗಿ ವರ್ಗಾವಣೆ ಮಾಡಿದ್ದ ಆರೋಪವಿತ್ತು. ಬೇರೆ ಯವರ ಹೆಸರಿನಲ್ಲಿ ಕಂಪೆನಿ ಸ್ಥಾಪಿಸಿ ಹಣ ವರ್ಗಾವಣೆ ಮಾಡಿರುವುದು ತನಿಖೆಯಿಂದ ಗೊತ್ತಾಗಿತ್ತು.