
ಸಾಗರ : ರಾಜ್ಯ ಸರ್ಕಾರದ ಗ್ಯಾರಂಟಿ ಕಾಪಿ ಮಾಡಿ ದೇಶದಲ್ಲಿ ಬಿಜೆಪಿ ಅಧಿಕಾರ ಹಿಡಿಯುವ ಪ್ರಯತ್ನ ನಡೆಸುತ್ತಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಇಲ್ಲಿನ ನಗರಸಭೆ ರಂಗಮಂದಿರದಲ್ಲಿ ಏರ್ಪಡಿಸಿದ್ದ ಕಾಂಗ್ರೇಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕಾಂಗ್ರೇಸ್ ಸರ್ಕಾರ ರಾಜ್ಯದಲ್ಲಿ ಗ್ಯಾರಂಟಿಯನ್ನು ನೀಡುವ ಮೂಲಕ ಬಡವರಲ್ಲಿ ಆರ್ಥಿಕ ಶಕ್ತಿ ತುಂಬುವ ಪ್ರಯತ್ನ ಮಾಡಿದೆ. ಪ್ರತಿವರ್ಷ ಗ್ಯಾರಂಟಿಗಾಗಿ ೫೬ಸಾವಿರ ಕೋಟಿ ರೂ. ಖರ್ಚು ಮಾಡುತ್ತೇವೆ. ಒಂದು ನಯಾಪೈಸೆ ಕಮೀಷನ್ ಪಡೆದ ದಾಖಲೆ ಇಲ್ಲ. ಬಿಜೆಪಿಯುವರು ಯೋಜನೆ ಜಾರಿಗೆ ತರುವುದೇ ಶೇ. ೪೦ ಕಮೀಷನ್ ಪಡೆಯಲು. ಗ್ಯಾರಂಟಿಯನ್ನು ನಂಬಿ ಮತದಾರರು ನಮ್ಮನ್ನು ಗೆಲ್ಲಿಸಿದ್ದಾರೆ. ಜನರ ವಿಶ್ವಾಸವನ್ನು ಕೊನೆಯವರೆಗೂ ಉಳಿಸಿ ಕೊಂಡು ಹೋಗುತ್ತೇವೆ. ಬಡವರಿಗೆ ನೇರವಾಗಿ ಯೋಜನೆ ತಲುಪುತ್ತಿದೆ. ಹಿಂದಿನ ಸರ್ಕಾರ ೩೭ಸಾವಿರ ಕೋಟಿ ಸಾಲ ಇರಿಸಿದ್ದರು. ಶಿಕ್ಷಣ ಇಲಾಖೆಯಲ್ಲಿ ೩ಸಾವಿರ ಕೋಟಿ ರೂ. ಸಾಲ ಇರಿಸಿ ಹೋಗಿದ್ದರು. ಅದನ್ನೆಲ್ಲಾ ತೀರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಅಭಿವೃದ್ದಿಗೆ ಎಲ್ಲ ಹಂತದಲ್ಲೂ ಹಣ ಬಿಡುಗಡೆ ಮಾಡುತ್ತಿದ್ದಾರೆ ಎಂದರು.

ಜಿಲ್ಲೆಯ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ೨೦ಕ್ಕೂ ಹೆಚ್ಚು ಸಭೆಗಳನ್ನು ನಡೆಸಲಾಗಿದ್ದು ಇದರಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಸಹ ಪಾಲ್ಗೊಂಡು ಅಗತ್ಯ ಸಲಹೆ ನೀಡಿದ್ದಾರೆ. ಕೇಂದ್ರ ಸರ್ಕಾರ ಸಹ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಪೂರಕವಾಗಿ ಸ್ಪಂದಿಸುತ್ತಿದೆ ಎಂದ ಅವರು, ಜಿಲ್ಲಾ, ತಾಲ್ಲೂಕು ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿ ಚುನಾವಣೆ ಅತಿಶೀಘ್ರದಲ್ಲಿ ನಡೆಸಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಕಾರ್ಯಕರ್ತರ ಕೈನಲ್ಲಿ ಅಧಿಕಾರ ನೀಡಿದರೆ ಅಭಿವೃದ್ದಿ ಕೆಲಸಗಳಿಗೆ ಇನ್ನಷ್ಟು ವೇಗ ಸಿಗುತ್ತದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಗೆಲ್ಲಿಸಲು ವಿಶೇಷ ಪ್ರಯತ್ನ ನಡೆಸಲಾಗುತ್ತದೆ ಎಂದು ತಿಳಿಸಿದರು.

ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಬಿಜೆಪಿಯಲ್ಲಿ ಹಿಂದುತ್ವದ ಜಪ ಮಾಡುವ ಎಲ್ಲ ನಾಯಕರನ್ನೂ ಮೂಲೆಗುಂಪು ಮಾಡಲಾಗುತ್ತಿದೆ. ಯತ್ನಾಳ್ ಅವರು ಹಿಂದುತ್ವ ಹಿಂದುತ್ವ ಎಂದು ಜಪ ಮಾಡುತ್ತಿದ್ದರು. ಅವರನ್ನು ಉಚ್ಚಾಟಿಸುವ ಮೂಲಕ ಬೋನ್ಗೆ ಹಾಕಿದ್ದಾರೆ. ಬಜೆಟ್ನಲ್ಲಿ ಶೇ. ೧ಕ್ಕಿಂತ ಕಡಿಮೆ ಅನುದಾನ ಅಲ್ಪಸಂಖ್ಯಾತರಿಗೆ ಘೋಷಣೆ ಮಾಡಿದರೆ ನಮ್ಮದು ಹಲಾಲ್ ಬಜೆಟ್ ಎನ್ನುವ ಬಿಜೆಪಿಯವರು ಪ್ರಧಾನಿ ನರೇಂದ್ರ ಮೋದಿಯವರು ೩೨ಲಕ್ಷ ರಂಜಾನ್ ಕಿಟ್ ಕೊಟ್ಟರೆ ಮೌನವಾಗಿದ್ದು ಯಾಕೆ ಎಂದು ಪ್ರಶ್ನಿಸಿದ ಅವರು ಬಿಜೆಪಿಯವರು ಹಿಂದುತ್ವ ಹಿಂದುತ್ವ ಎಂದು ೬೬ ಸ್ಥಾನಕ್ಕೆ ಬಂದಿದ್ದಾರೆ. ಇದನ್ನೆ ಮುಂದುವರೆಸಿಕೊಂಡು ಬಂದರೆ ಮುಂದಿನ ಚುನಾವಣೆಯಲ್ಲಿ ೪೪ ಸ್ಥಾನಕ್ಕೆ ಇಳಿಯುತ್ತಾರೆ ಎಂದು ಭವಿಷ್ಯ ನುಡಿದರು.
ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ದಿ ಕಾರ್ಯಗಳು ನಿರಂತರವಾಗಿ ನಡೆದಿದೆ. ಹಿಂದಿನ ಶಾಸಕ ಹರತಾಳು ಹಾಲಪ್ಪ ಆರ್.ಎಸ್.ಎಸ್.ನವರು, ಮೇಲ್ದರ್ಜೆಯವರು ಇರುವ ಕಡೆಗಳಲ್ಲಿ ರಸ್ತೆ ಮಾಡಿದ್ದಾರೆಯೆ ವಿನಃ ಹಿಂದುಳಿದವರು ಇರುವ ಕಡೆ ಯಾವುದೇ ರಸ್ತೆ ಮಾಡಿಲ್ಲ. ೧೫೦ ಮೀಟರ್ ಉದ್ದದ ೮೦೦ ರಸ್ತೆ ಮಾಡಿ ಅದನ್ನೆ ಅಭಿವೃದ್ದಿ ಎನ್ನುತ್ತಿದ್ದಾರೆ. ಮುಂದಿನ ಮೂರು ವರ್ಷದಲ್ಲಿ ಹಾಲಪ್ಪ ಅಭಿವೃದ್ದಿಗಿಂತ ದುಪ್ಪಟ್ಟು ಅಭಿವೃದ್ದಿ ಮಾಡಿ ತೋರಿಸುವುದಾಗಿ ಹೇಳಿದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಕಲಸೆ ಚಂದ್ರಪ್ಪ, ಸುಧೀರ್ ಕುಮಾರ್, ಬಿ.ಆರ್.ಜಯಂತ್, ಕಲಗೋಡು ರತ್ನಾಕರ್, ಎಲ್.ಚಂದ್ರಪ್ಪ, ಸುರೇಶಬಾಬು, ಸದ್ದಾಂ, ಅನಿತಾ ಕುಮಾರಿ, ಪ್ರಭಾವತಿ, ಉಷಾ ಎನ್. ಇನ್ನಿತರರು ಹಾಜರಿದ್ದರು