
ಶಿವಮೊಗ್ಗ,ಮಾ.೨೮: ಮಹಾನಗರ ಪಾಲಿಕೆಯ ವಲಯ ವಿಂಗಡಣೆಯಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಸರಿಪಡಿಸಲು ಆಗ್ರಹಿಸಿ ಹಲವು ವಾರ್ಡ್ಗಳ ಸಾರ್ವಜನಿಕರು ನಿನ್ನೆ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಮಹಾನಗರ ಪಾಲಿಕೆಯು ಅಧಿಕಾರದ ವಿಕೇಂದ್ರಿಕರಣದ ಹೆಸರಿನಲ್ಲಿ ೩ ವಲಯಗಳನ್ನಾಗಿ ಮಾಡಿದೆ. ಆದರೆ ಇದು ಅವೈಜ್ಞಾನಿಕವಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅದರಲ್ಲೂ ವಲಯ ೩ರಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲ. ಸಾರಿಗೆ ವ್ಯವಸ್ಥೆಯೂ ಇಲ್ಲ. ಸ್ವಂತ ವಾಹನ ಇದ್ದವರು ಮಾತ್ರ ಓಡಾಡಬಹುದು. ಆದ್ದರಿಂದ ೩ನೇಯ ವಲಯಕ್ಕೆ ಸಂಬಂಧಪಟ್ಟಂತೆ ಖಾಸಗಿ ಬಸ್ ನಿಲ್ದಾಣದ ಇಂದಿರಾ ಕ್ಯಾಂಟಿನಾ ಹಿಂಭಾಗದಲ್ಲಿ ನಗರ ಪಾಲಿಕೆಯ ಕಟ್ಟಡವಿದ್ದು, ಆ ಕಟ್ಟಡದಲ್ಲಿ ೩ನೇ ವಲಯ ಕಛೇರಿಯನ್ನು ತೆರೆಯಬೇಕು ಎಂದು ಆಗ್ರಹಿಸಿದರು.

ಅಲ್ಲದೆ ಎಲ್ಲಾ ಮೂರು ವಲಯಗಳ ಕಚೇರಿಗಳಿಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ರಾಜಶೇಖರ್, ಪ್ರಮುಖರಾದ ಚಿನ್ನಸ್ವಾಮಿ, ನವೀನ್, ರಮೇಶ್, ಶಬ್ಬೀರ್ ಸಾಹೇಬ್, ಕುಮಾರ, ಚಂದ್ರಶೇಖರ್ ಸೇರಿದಂತೆ ಹಲವರಿದ್ದರು.