
ಶಿವಮೊಗ್ಗ: ಸದನದ ಪಾವಿತ್ರ್ಯವನ್ನು, ಸಭಾಧ್ಯಕ್ಷರ ಪೀಠಕ್ಕೆ ಅವಮಾನ ಮಾಡಿದ ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಭಾಧ್ಯಕ್ಷರಿಗೆ ಪತ್ರ ಬರೆದಿರುವುದಾಗಿ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಜೆಟ್ ಅಧಿವೇಶನಕ್ಕೆ ತನ್ನದೇ ಆದ ಪ್ರಾಮುಖ್ಯತೆ ಇರುತ್ತದೆ. ಶಾಸಕರಿಗೆ ಇದೊಂದು ಮಹತ್ವದ ಅಧಿವೇಶನವೂ ಹೌದು. ಬಜೆಟ್ ಮೇಲಿನ ಗಂಭೀರ ಚರ್ಚೆ ಮಾಡುವಲ್ಲಿ ವಿರೋಧ ಪಕ್ಷದ ಶಾಸಕರು ಸಂಪೂರ್ಣ ವಿಫಲವಾಗಿದ್ದಾರೆ. ಬಜೆಟ್ ನಲ್ಲಿನ ನ್ಯೂನತೆ ಅಥವಾ ಸಲಹೆಗಳ ಕುರಿತು ಮಾತನಾಡಬೇಕಿತ್ತು. ಆದರೆ, ಅದನ್ನು ಮಾಡದೇ ಗಲಾಟೆ ಮಾಡಿ ಪೀಠಾಧ್ಯಕ್ಷರಿಗೆ ಬಜೆಟ್ ಪ್ರತಿಗಳನ್ನು ಹರಿದು ವ್ಯರ್ಥ ಕಾಲಹರಣ ಮಾಡಿದ್ದಾರೆ. ಮುಖ್ಯಮಂತ್ರಿಗಳು ಉತ್ತರ ಕೊಡುವಾಗಲು ಕೂಡ ಬೇಜವಾಬ್ದಾರಿತನದಿಂದ ವರ್ತಿಸಿದ್ದಾರೆ. ಇದೊಂದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.

ಪೀಠಾಧ್ಯಕ್ಷರು ಒಂದು ನಿರ್ಣಯ ತೆಗೆದುಕೊಂಡ ಮೇಲೆ ಅದಕ್ಕೆ ಗೌರವ ಕೊಡಬೇಕಾದುದು ಎಲ್ಲಾ ಶಾಸಕರ ಕರ್ತವ್ಯವಾಗಿದೆ. ಆ ನಿರ್ಣಯವನ್ನು ಕೂಡ ವಿಧಾನಸಭಾಧ್ಯಕ್ಷರು, ಸದನದ ತೀರ್ಮಾನದ ಪ್ರಕಾರವೇ ತೆಗೆದುಕೊಳ್ಳುತ್ತಾರೆ ಹೊರತೂ ಸಭಾಧ್ಯಕ್ಷರ ವ್ಯಕ್ತಿಗತ ತೀರ್ಮಾನವಾಗಿರುವುದಿಲ್ಲ. ಸದನ ತೀರ್ಮಾನವನ್ನು ಪ್ರಕಟಿಸುವ ಹೊಣೆಗಾರಿಕೆಯಷ್ಟೇ ಅವರ ಕೆಲಸ. ಆದರೆ, ಇದನ್ನು ಅರ್ಥ ಮಾಡಿಕೊಳ್ಳದ ಬಿಜೆಪಿ ಶಾಸಕರು ಸದನದ ಒಳಗೂ ಮತ್ತು ಸದನದ ಹೊರಗೂ ಕೂಡ ನಿಂದನೆಯ ಮಾತುಗಳನ್ನಾಡಿದ್ದಾರೆ. ಇದು ಸದನಕ್ಕೆ ಮಾಡಿದ ಅವಮಾನ ಮಾತ್ರವಲ್ಲ, ಸಭಾಧ್ಯಕ್ಷರ ಸ್ಥಾನಕ್ಕೂ ಮಾಡಿದ ಅವಮಾನವಾಗಿದೆ ಎಂದರು.

ಈ ಘಟನೆಯ ನಂತರ ಮಾಜಿ ಸಚಿವ ಸುನಿಲ್ ಕುಮಾರ್ ಅವರು ಸಭಾಧ್ಯಕ್ಷರ ಪೀಠ ದುರ್ಬಳಕೆಗೆ ಒಳಗಾಗಿದೆ ಎಂದು ಪತ್ರ ಬರೆದಿದ್ದಾರೆ. ಇದು ಕೂಡ ಸರಿಯಲ್ಲ. ಅವರು ಪತ್ರದಲ್ಲಿ ಸಭಾಧ್ಯಕ್ಷರು ಮುಖ್ಯಮಂತ್ರಿಗಳ ಕೈಹಿಡಿದು ಬಲವಂತವಾಗಿ ಬರೆಸಿದ್ದಾರೆ ಎಂದು ಹೇಳಿದ್ದಾರೆ. ಇವರು ಹಿರಿಯ ಶಾಸಕರು. ಹಲವು ಬಾರಿ ಆಯ್ಕೆಯಾಗಿದ್ದಾರೆ. ಸಾಂವಿಧಾನಿಕ ನಿಯಮವನ್ನೇ ಅವರು ತಿಳಿದುಕೊಂಡಿಲ್ಲ. ಲಿಖಿತವಾಗಿ ಬರೆಯುವ ಮೂಲಕ ಹಕ್ಕುಚ್ಯುತಿ ತಂದಿದ್ದಾರೆ ಎಂದರು.

ಸದನದಲ್ಲಿ ನಡೆದ ಯಾವುದೇ ವಿಷಯವನ್ನು ಹೊರಗಡೆ ಎಳೆದು ತರಬಾರದು ಎಂಬ ನಿಯಮ ಕೂಡ ಇದೆ. ಆದರೆ, ಆ ನಿಯಮವನ್ನು ಇವರು ಯಾರೂ ಪಾಲಿಸಿಲ್ಲ. ಇವರಿಗೆ ನಿಜವಾಗಿಯೂ ಸಭಾಧ್ಯಕ್ಷರ ಪೀಠದ ಬಗ್ಗೆ ಗೌರವ ಇದ್ದಿದ್ದರೆ ನಿಮ್ಮ ನಿರ್ಣಯವನ್ನು ಮರು ಪರಿಶೀಲಿಸಿ ಎಂದು ಮನವಿ ಮಾಡಬಹುದಿತ್ತೇ ಹೊರತೂ ಅದನ್ನು ಟೀಕಿಸುವ ಮತ್ತು ಸಭಾಧ್ಯಕ್ಷರನ್ನು ನಿಂದಿಸುವ ಹಕ್ಕು ಇವರಿಗಿಲ್ಲ ಎಂದರು.
ಆದ್ದರಿಂದ ವಿರೋಧ ಪಕ್ಷದ ಶಾಸಕರು ಮಾಡಿದ ಬಹಿರಂಗ ಆರೋಪ ದಾಖಲೆ ಸೇರಿರುವ ನಿಂದನೆಯ ಪತ್ರವನ್ನು ಸದನದ ಪಾವಿತ್ರ್ಯತೆ, ಘನತೆ, ಪರಂಪರೆಯ ಹಿನ್ನಲೆಯಲ್ಲಿ ಗಂಭೀರವಾಗಿ ಪರಿಗಣಿಸಿ ಇವರುಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ಪ್ರಸನ್ನಕುಮಾರ್, ಉಸ್ತುವಾರಿ ಎಸ್.ಟಿ. ಹಾಲಪ್ಪ, ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್, ಪ್ರಮುಖರಾದ ಕಲೀಂ ಪಾಷಾ, ಜಿ.ಡಿ. ಮಂಜುನಾಥ್, ವಿಜಯಲಕ್ಷ್ಮಿ ಪಾಟೀಲ್, ಮಂಜುನಾಥಬಾಬು, ಯು. ಶಿವಾನಂದ್, ಅರ್ಚನಾ, ಸ್ಟೆಲಾ ಮಾರ್ಟಿನ್, ಜಿ. ಪದ್ಮನಾಭ್, ಶಿ.ಜು. ಪಾಷಾ, ಕೃಷ್ಣಪ್ಪ, ಧೀರರಾಜ್ ಡಿಸೋಜ ಮುಂತಾದವರಿದ್ದರು.
ಹನಿಟ್ರ್ಯಾಪ್ ಚರ್ಚೆಯೇ ಅಸಹ್ಯ
ವಿಧಾನ ಮಂಡಲದ ಬಜೆಟ್ ಅಧಿವೇಶನದಲ್ಲಿ ಹನಿಟ್ರ್ಯಾಪ್ ವಿಚಾರ ಪ್ರಸ್ತಾಪವಾಗಿದ್ದಕ್ಕೆ ಮಾಜಿ ಸಂಸದ ಹಾಗೂ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ವಿಧಾನ ಮಂಡಲಕ್ಕೆ ತನ್ನದೇಯಾದ ಗೌರವವಿದೆ. ಅಲ್ಲಿ ಈ ವಿಚಾರ ಪ್ರಸ್ತಾಪಕ್ಕೆ ಬಂದಿದ್ದೇ ಅಸಹ್ಯ, ಅಕ್ಷಮ್ಯ. ಸದನದಲ್ಲಿ ಈ ವಿಚಾರವನ್ನೇ ಯಾರೇ ಪ್ರಸ್ತಾಪಿಸಿದ್ದರೂ ಕೂಡ ಅದನ್ನು ಒಪ್ಪುವುಂತಹದ್ದಲ್ಲ. ಅದಕ್ಕಾಗಿಯೇ ಸದನದಲ್ಲಿ ಗದ್ದಲವಾಯಿತು ಎಂದೀಗ ಹೇಳುವವರು, ಮೊದಲು ಅದನ್ನು ಅಲ್ಲಿ ಯಾರು ಪ್ರಸ್ತಾಪಿಸಿದ್ದರು ಎನ್ನುವುದನ್ನು ಅರಿಯಬೇಕಲ್ಲವೇ? ಎಂದರು.
ಅವರೇ ಆವಿಚಾರವನ್ನು ಪ್ರಸ್ತಾಪಿಸಿ ಕೊನೆಗೆ ಅದೇ ಗಲಾಟೆಯಿಂದ ತಮ್ಮನ್ನು ಹೊರ ಹಾಕಲಾಯಿತು ಎನ್ನುವವರು, ತಾವೇಕೆ ಕೋರ್ಟ್ನಿಂದ ತಡೆಯಾಜ್ಞೆ ತಂದುಕೊಂಡಿದ್ದಾರೆನ್ನುವುದು ಬಯಲಾಗಬೇಕಿದೆ. ಹನಿಟ್ರ್ಯಾಪ್ ವಿಚಾರದಲ್ಲಿ ಯಾರೇ ಇದ್ದರೂ, ಯಾವ ಪಕ್ಷದವರೇ ಆದರೂ, ಅದನ್ನು ಒಪ್ಪಲಾಗದು. ಅದೊಂದು ಅಸಹ್ಯ. ಆ ವಿಚಾರ ಸದನದಲ್ಲಿ ಪ್ರಸ್ತಾಪಿಸಿ, ಸದನದ ಗೌರವ ಕಳೆದವರು ಯಾರೇ ಆದರೂ ಅವರ ನೈತಿಕತೆಯನ್ನು ಪ್ರಶ್ನಿಸಿಕೊಳ್ಳಬೇಕಿದೆ.