ಶಿವಮೊಗ್ಗ: ಧೀಮಂತ ರಾಜಕಾರಣಿ ಮಾಜಿ ಮುಖ್ಯಮಂತ್ರಿ ದಿ. ಎಸ್.ಬಂಗಾರಪ್ಪ ಅವರ ಕೊಡುಗೆ ಅಪಾರ ಹಾಗೂ ಅನನ್ಯ. ಆ ನಿಟ್ಟಿನಲ್ಲಿ ಬಂಗಾರಪ್ಪ ಅವರ ಪುತ್ಥಳಿಯನ್ನು ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ಸ್ಥಾಪಿಸಬೇಕು ಎಂದು ಕೆ.ಪಿ.ಸಿ.ಸಿ. ಸಂಯೋಜಕ ಹಾಗೂ ಅಖಿಲ ಕರ್ನಾಟಕ ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡು ಕಂಡ ಧೀಮಂತ ರಾಜಕಾರಣಿ, ಬಡವರ ಬಂಧು, ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರು ಸೇರಿದಂತೆ ಎಲ್ಲಾ ವರ್ಗದವರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಬಂಗಾರಪ್ಪನವರು ನಾಯಕರಲ್ಲ ನಾಯಕರನ್ನು ಸೃಷ್ಟಿ


ಮಾಡುವ ವಿಶ್ವ ವಿದ್ಯಾಲಯ. ನಾವು ಇಂದು ಸಮೃದ್ಧಿಯಿಂದ ನೀರು ಕುಡಿಯಲು ಬಂಗಾರಪ್ಪ ಅವರ ಕೊಡುಗೆ ಕಾರಣ ಎಂದು ಸ್ಮರಿಸಿದರು.
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ಸೌಲಭ್ಯವನ್ನು ಹೊಂದಿರುವ ಅತ್ಯುತ್ತಮ ಆಸ್ಪತ್ರೆಗಳಲ್ಲಿ ಮೆಗ್ಗಾನ್ ಆಸ್ಪತ್ರೆ ಸಹ ಒಂದಾಗಿದೆ. ಇದರಿಂದಾಗಿ ಜಿಲ್ಲೆಯ? ಅಲ್ಲ. ಬೇರೆ ಜಿಲ್ಲೆಗಳಿಂದಲೂ ಸಹ ರೋಗಿಗಳು ಚಿಕಿತ್ಸೆ ಪಡೆಯಲು ಇಲ್ಲಿಗೆ ಬರುತ್ತಿದ್ದಾರೆ. ಇಂತಹ ಆಸ್ಪತ್ರೆ ಸ್ಥಾಪನೆಗೆ ಅಡಿಗಲ್ಲು ಹಾಕಿದ ಕೀರ್ತಿ ಬಂಗಾರಪ್ಪನವರಿಗೆ ಸಲ್ಲುತ್ತದೆ. ಆದ್ದರಿಂದ ಈ ಆಸ್ಪತ್ರೆಯ ಆವರಣದಲ್ಲಿ ಅವರ ಪ್ರತಿಮೆ ಸ್ಥಾಪಿಸುವುದು ಸೂಕ್ತವಾಗಿದೆ ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಹಿಂದೆ ಇಂಧನ ಸಚಿವರಾಗಿದ್ದಾಗ, ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ನಡೆದ ವಿದ್ಯುತ್ ವಿತರಣಾ ಘಟಕ ಉದ್ಘಾಟನಾ ಸಮಾರಂಭದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದರು. ಆದರೆ ಇದುವರೆಗೂ ಈ ಆಶಯ ಈಡೇರಿಲ್ಲ. ಬಂಗಾರಪ್ಪನವರ ಮಗ ಮಧು, ಬಂಗಾರಪ್ಪ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಈ ಸಂದರ್ಭದಲ್ಲಿ ಬಂಗಾಪ್ಪನವರು ಪ್ರತಿಮೆ ಸ್ಥಾಪಿಸಿದಲ್ಲಿ ಇದಕ್ಕೆ ಮತ್ತ? ಮಹತ್ವ ಬಂದಂತಾಗುತ್ತದೆ ಎಂದರು.

ಜಿಲ್ಲೆಯ ಅಭಿವೃದ್ಧಿಯಲ್ಲಿ ಬಂಗಾರಪ್ಪನವರ ಪಾತ್ರ ಮಹತ್ವದ್ದಾಗಿದೆ. ರಾಜ್ಯದ ಮುಖ್ಯಮಂತ್ರಿಯಾಗಿ ಅವರು ಜಾರಿಗೊಳಿಸಿದ ಅಕ್ಷಯ, ಆಶ್ರಯ, ಆರಾಧನಾ ಮತ್ತಿತರ ಜನಪರ ಯೋಜನೆಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ ಎಂದರು.
ರೈತರ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಪೂರೈಕೆ, ಗಾಜನೂರಿನಿಂದ ಶಿವಮೊಗ್ಗ ನಗರಕ್ಕೆ ಕುಡಿಯುವ ನೀರು ಪೂರೈಕೆ ಯೋಜನೆ ಅಸ್ತು ಸೇರಿದಂತೆ ಅನೇಕಾನೇಕ ಅಭಿವೃದ್ಧಿ ಹಾಗೂ ಜನಪರ ಕಾರ್ಯಗಳು ನಡೆದಿವೆ. ಸಾರ್ವಜನಿಕ ಬದುಕಿನಲ್ಲಿ ಆದರ್ಶರೆನಿಸಿಕೊಂಡವರ ಪ್ರತಿಮೆ ಸ್ಥಾಪಿಸಿ ಗೌರವ ಸಲ್ಲಿಸುವ ರೂಢಿ ಇದೆ. ಅಂತೆಯೇ ಬಂಗಾರಪ್ಪನವರ ಪ್ರತಿಮೆ ಸ್ಥಾಪಿಸಿದಲ್ಲಿ ಮಹತ್ವ ಬರುತ್ತದೆ. ಈ ಸಂಬಂಧ ಜಿಲ್ಲಾಧಿಕಾರಿಯವರ ಮುಖಾಂತರ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಆರೋಗ್ಯ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಬಂಗಾರಪ್ಪನವರ ಕಂಚಿನ ಪ್ರತಿಮೆಯನ್ನು ನಿರ್ಮಿಸಬೇಕೆಂದುಕೊಂಡಿದ್ಡು, ಈ ಪ್ರತಿಮೆಗೆ ಜಾಗ ಗುರುತಿಸಿ ಅದನ್ನು ಸ್ಥಾಪಿಸಲು ರಾಜ್ಯ ಸರ್ಕಾರಕ್ಕೆ ೬ ತಿಂಗಳ ಗಡುವನ್ನು ನೀಡುತ್ತೇವೆ. ಅದರೊಳಗೆ ಈ ಪ್ರತಿಮೆಯನ್ನು ಸ್ಥಾಪಿಸಬೇಕು. ಇಲ್ಲದಿದ್ದಲ್ಲಿ ಹೋರಾಟವನ್ನು ಮುಂದುವರೆಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸಿದ್ದಪ್ಪ, ಚಲವಾದಿ, ಯಲವಟ್ಟಿ ವಿಜಯ್ ಕುಮಾರ್, ತಂಗರಾಜ್, ದೇವೇಂದ್ರಪ್ಪ, ಮಹೇಶ್ ಕುಮಾರ್, ರಮೇಶ್, ರಾಮಲು, ರಾಜಣ್ಣ, ಮಣಿಕಂಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.