ಶಿವಮೊಗ್ಗ,ಮಾ.೬: ವೀರಶೈವ ಮಹಾಸಭಾದಲ್ಲಿ ೮೭ ಉಪಪಂಗಡಗಳಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕೂಡ ಆ ಉಪಪಂಗಡದಲ್ಲಿ ಬರುತ್ತಿದ್ದು, ಶಾಸಕ ಯತ್ನಾಳ್ ಅವರಿಗೆ ಇದರ ಮಾಹಿತಿ ಇಲ್ಲ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಎಸ್.ಎನ್. ರುದ್ರಮುನಿ ಸಜ್ಜನ್ ಹೇಳಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯತ್ನಾಳ್ ಅವರಿಗೆ ಮಾಹಿತಿ ಇಲ್ಲದಿದ್ದರೆ ನಾವು ಮಹಾಸಭಾದಿಂದಲೇ ಕಳುಹಿತಿಸಿ ಕೊಡುತ್ತೇವೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಅಧಿಕಾರದಲ್ಲಿದ್ದಾಗ ಒಂದೇ ಸಮಾಜಕ್ಕೆ ಸೀಮಿತವಾಗಿ ಕೆಲಸ ಮಾಡಿಲ್ಲ. ಯತ್ನಾಳ್ ಅವರು ಬಾಯಿಗೆ ಬಂದಂತೆ ಮಾತನಾಡಿ, ವೀರಶೈವ ಸಮಾಜದ ಉಪಪಂಗಡಗಳಿಗೆ ಅವಮಾನ ಮಾಡಿದ್ದಾರೆ ಎಂದು ದೂರಿದರು.
ವೀರಶೈವ ಲಿಂಗಾಯಿತರಲ್ಲಿ ಅವರವರ ಕಸುಬಿಗೆ ತಕ್ಕಂತೆ ಉಪಪಂಗಡಗಳಿವೆ. ಅವರು ರಾಜ್ಯದ ವಿವಿಧ ಭಾಗಗಳಲ್ಲಿ ತಮ್ಮ ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಬಗ್ಗೆಯೂ ಸಹ ಯತ್ನಾಳ್ ಅವರಿಗೆ ಅರಿವಿಲ್ಲ ಎಂದು ವ್ಯಂಗ್ಯವಾಡಿದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಲಿಂಗಾಯಿತರೇ ಅಲ್ಲ. ಅವರು ಬಳೆಶೆಟ್ಟರು ಎಂದು ಹೇಳಿಕೆ ನೀಡಿರುವುದನ್ನು ವೀರಶೈವ ಮಹಾಸಭಾ ತೀವ್ರವಾಗಿ ಖಂಡಿಸುತ್ತದೆ. ಯತ್ನಾಳ್ ಅವರಿಗೆ ಕೇವಲ ಎರಡು ಮೂರು ಉಪಪಂಗಡಗಳು ಮಾತ್ರ ಗೊತ್ತಿದೆ. ಈಗಿರುವ ೮೭ ಉಪಪಂಗಡಗಳ ಬಗ್ಗೆ ಅರಿವಿಲ್ಲ ಎಂದರು.
ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಶಾಸಕ ಶಾಮನೂರು ಶಿವಶಂಕರಪ್ಪನವರನ್ನು ಕೂಡ ಬ್ಲಾಕ್ಮೇಲರ್ ಎಂದಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ಮತ್ತೆ ಅವರ ಆರೋಪಗಳಿಗೆ ರಾಷ್ಟ್ರೀಯ ಅಧ್ಯಕ್ಷರು ಪತ್ರಿಕಾಗೋಷ್ಠಿ ನಡೆಸಿ ಉತ್ತರಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸಂತೋಷ್ ಬಳ್ಳಕೆರೆ, ತಮ್ಮಡಿಹಳ್ಳಿ ನಾಗರಾಜ್, ವಿರೂಪಾಕ್ಷಪ್ಪ, ಪಾರ್ವತಮ್ಮ, ಶಾಂತ ಆನಂದ್, ರತ್ನಮ್ಮ, ಶಿವರಾಜ್, ಚಂದ್ರಯ್ಯ, ತಿಪ್ಪೇಶ್ ಮೊದಲಾದವರು ಇದ್ದರು.