ಶಿವಮೊಗ್ಗ,ಮಾ.೬: ಶ್ರೀ ರಾಘವೇಂದ್ರ ಸ್ವಾಮಿಗಳವರ ವಧಂತಿ ಉತ್ಸವದ ಪ್ರಯುಕ್ತ ಇಂದು ದುರ್ಗಿಗುಡಿ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳವರ ಬೃಂದಾವನಕ್ಕೆ ಸಂಪೂರ್ಣವಾಗಿ ಬೆಳ್ಳಿಯ ಕವಚವನ್ನು ಸಮರ್ಪಣೆ ಮಾಡಲಾಯಿತು. ಹಾಗೂ ಸಾರ್ವಜನಿಕವಾಗಿ ಅನ್ನದಾನ ಕಾರ್ಯಕ್ರಮಗಳನ್ನು ಕೂಡ ಮಾಡಲಾಯಿತು. ಈ ಸಂದರ್ಭದಲ್ಲಿ ಉತ್ಸವದ ಬಗ್ಗೆ ಮಠದ ಪ್ರಧಾನ ಅರ್ಚಕರಾದ

ವಾದಿರಾಜ್ ಬಾಟ್ನಿ, ಹಾಗೂ ಕಾರ್ಯದರ್ಶಿಗಳದ ಸುರೇಶ್ ರವರು ಮತ್ತು ಖಜಾಂಚಿಗಳಾದ ಸಿ.ವಿ.ರಾಘವೇಂದ್ರರಾವ್ ಮಾಹಿತಿ ನೀಡಿ ಮಾ.೧ರಿಂದ ೬ನೇ ತಾರೀಖಿನವರೆಗೆ ಶ್ರೀಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ರಾಯರ ೪೦೪ನೇ ವೇದಾಂತ

ಪಟ್ಟಾಭಿಷೇಕ ಮತ್ತು ಇಂದು ೪೩೦ನೇ ವರ್ಧಂತಿ ಉತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಸುಮಾರು ೫ ಸಾವಿರಕ್ಕೂ ಹೆಚ್ಚು ಭಕ್ತರು ಪ್ರಸಾದ ಸ್ವೀಕರಿಸಿದ್ದಾರೆ. ಸಂಪೂರ್ಣ ಏಕರಜತ ಕವಚವನ್ನು ಸಮರ್ಪಿಸಲಾಗಿದೆ. ಇಂದು ಸಂಜೆ ಶ್ರೀರಾಯರಿಗೆ ರಜತ ರಥೋತ್ಸವ ಕೂಡ ನಡೆಯಲಿದೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅ.ನಾ.ವಿಜಯೇಂದ್ರರಾವ್ ಹಾಗೂ ಮಠದ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು