ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಪ.ಜಾ.ಪ.ಂ.ದವರಿಗೆ ಅತಿ ಹೆಚ್ಚು ದ್ರೋಹವಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ ಕುಡಚಿ ಗಂಭೀರ ಆರೋಪ ಮಾಡಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ತಾವು ಅಹಿಂದ ನಾಯಕರೆಂದುಕೊಂಡೇ ಅಧಿಕಾರದ ಚುಕ್ಕಾಣಿ ಹಿಡಿದವರು. ಆದರೆ ಹಿಂದುಳಿದವರಿಗೆ ಮೀಸಲಿಟ್ಟ ೩೯ ಸಾವಿರ ಕೋಟಿ ರೂಪಾಯಿ ಹಣವನ್ನು ನೀಡುವುದಾಗಿ ಆಯವ್ಯಯದಲ್ಲಿ ಭರವಸೆ ನೀಡಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿ ಈಗ ಆ ಹಣವನ್ನು ಬೇರೆ ಕಡೆ ವರ್ಗಾಯಿಸಿ ಹಿಂದುಳಿದ ಸಮುದಾಯಕ್ಕೆ ಅನ್ಯಾಯವೆಸಗಿದ್ದಾರೆ ಎಂದು ಕಿಡಿ ಕಾರಿದರು.

ಪ.ಜಾ.,ಪ.ಪಂ.ಗಳ ಅಭಿವೃದ್ಧಿಗೆ ೨೦೨೩ರಲ್ಲಿ ೧೧,೧೪೪ ಸಾವಿರ ಕೋಟಿ, ೨೦೨೪ರಲ್ಲಿ ೧೪,೨೮೨ ಸಾವಿರ ಕೋಟಿ, ೨೦೨೫ರಲ್ಲಿ ೧೪,೪೮೮ ಸಾವಿರ ಕೋಟಿ ರೂಪಾಯಿ ಹಣವನ್ನು ಈಗಿನ ಕಾಂಗ್ರೆಸ್ ಸರ್ಕಾರ ಗುಳುಂ ಮಾಡಿದೆ. ಹಿಂದುಳಿದವರ ಪ್ರಬಲ ನಾಯಕರೆಂದು ಹೇಳಿಕೊಳ್ಳುವ ಸಚಿವ ಮಹಾದೇವಪ್ಪ, ಪ್ರಿಯಾಂಕ್ ಖರ್ಗೆ ಅವರು ವರ್ಗಾವಣೆ ಆದ ಹಣದ ಬಗ್ಗೆ ಮಾಧ್ಯಮದವರ ಮುಂದೆ ಹಾರಿಕೆ ಉತ್ತರ ನೀಡುತ್ತಾರೆ. ಹಿಂದುಳಿದ ಸಮುದಾಯಕ್ಕೆ ಅನ್ಯಾಯ ಮಾಡಿದ್ದರ ವಿರುದ್ಧ ಬಿಜೆಪಿ ಬೃಹತ್ ಆಂದೋಲನ ಹಮ್ಮಿಕೊಳ್ಳುವ ಮೂಲಕ ಇವರ ಕಿವಿ ಹಿಂಡುವ ಕೆಲಸಕ್ಕೆ ಮುಂದಾಗಿದೆ ಎಂದರು.
೧೯೭೫-೭೫ರಲ್ಲೇ ರಾಜ್ಯ ಯೋಜನಾ ಆಯೋಗ ಪ.ಜಾ.ಪಂ.ಗಳಿಗೆ ಯೋಜನೆ ರೂಪಿಸಬೇಕು ಎಂಬ ಆದೇಶ ನೀಡಿತ್ತು. ಬಿ.ಎಸ್.ಯಡ್ಯೂರಪ್ಪ ಅವರು ಮುಖ್ಯಮಂತ್ರಿಗಳಾದಾಗ ಈ ಕುರಿತು ಕಾಯ್ದೆ ರಚಿಸುವ ಮೊದಲೇ ಎಸ್.ಸಿ.ಎಸ್.ಟಿ. ಮತ್ತು ಟಿ.ಎಸ್.ಪಿ.ಗೆ ೯ಸಾವಿರ ಕೋಟಿ ರೂ. ನೀಡಿದ್ದರು. ಕಾಂಗ್ರೆಸ್ ಸರ್ಕಾರ ಎಸ್.ಸಿ.ಎಸ್.ಟಿ.ಪಿ. ಮತ್ತು ಟಿ.ಎಸ್.ಪಿ. ಸಂಬಂಧ ಕಾಯ್ದೆ ಜಾರಿಗೆ ತಂದರೂ ಹಿಂದುಳಿದವರಿಗೆ ಕೇವಲ ೬ ಸಾವಿರ ಕೋಟಿ ರೂ.ಹಣವನ್ನು ನೀಡಿದೆ. ಹೆಜ್ಜೆಗೂ ಕೈಯಲ್ಲಿ ಸಂವಿಧಾನ ಹಿಡಿದು ಡಾ.ಅಂಬೇಡ್ಕರ್ ಅವರಿಗೆ ಅಪಮಾನ ಮಾಡುತ್ತಿರುವ ಕಾಂಗ್ರೆಸ್ ಹಿಂದುಳಿದವರಿಗೆ ಮಾಡಿದ್ದೇನು ಎಂದು ಖಾರವಾಗಿ ಪ್ರಶ್ನಿಸಿದರು.
ವಿಜಯಪುರದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೆ ನೀಡಲಾದ ಲ್ಯಾಪ್ ಟಾಪ್, ವಿದ್ಯಾರ್ಥಿ ವೇತನ ಇತ್ಯಾದಿ ಹಣಕಾಸಿನ ಸೌಲಭ್ಯಗಳನ್ನು ಸರ್ಕಾರಕ್ಕೆ ವಾಪಸ್ ಮಾಡುವಂತೆ ಅಲ್ಲಿನ ಉಪಕುಲಪತಿಗೆ ಪತ್ರ ಬಂದಿದ್ದು ಸರ್ಕಾರ ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿದೆ ಎಂಬುದನ್ನು ಸಾಬೀತು ಪಡಿಸುತ್ತದೆ ಎಂದರು.

ಪ.ಜಾ.ಪ.ಪಂ. ಮತ್ತು ಸಾಮಾನ್ಯ ವರ್ಗದವರ ನಡುವೆ ಸಂಘರ್ಷ ಉಂಟುಮಾಡುವುದೇ ಕಾಂಗ್ರೆಸ್ ನ ಕಾಯಕವಾಗಿದೆ ಎಂದ ಅವರು ಅರ್ಥಿಕವಾಗಿ ದಲಿತರು ಸಬಲರಾಗುವ ಯಾವ ಯೋಜನೆಗಳೂ ಕಾಂಗ್ರೆಸ್ನಲ್ಲಿ ಇಲ್ಲ. ರಾಜೀವ್ ಗಾಂಧಿ, ಡಾ.ಅಂಬೇಡ್ಕರ್ ಆವಾಸ್ ಯೋಜನೆಯಡಿಯಲ್ಲಿ ಕಳೆದ ಎರಡು ವರ್ಷದಲ್ಲಿ ಒಂದು ಮನೆಯನ್ನೂ ನೀಡದೆ ಹಿಂದುಳಿದವರಿಗೆ ಮೋಸ ಮಾಡುತ್ತಿದೆ ಎಂದು ದೂರಿದರು. ಈ ಸರ್ಕಾರದ ಅವಧಿಯಲ್ಲಿ ನನ್ನ ಅವಧಿಯಲ್ಲಿ ಹಿಂದುಳಿದವರಿಗೆ ೧೦ ಮನೆಗಳನ್ನು ನಿರ್ಮಿಸಿಕೊಟ್ಟಿದ್ದೇನೆ ಅಂತಾ ಒಬ್ಬ ಶಾಸಕನಾದರೂ ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.

ಈ ಸಂದರ್ಭದಲ್ಲಿ ಶಾಸಕ ಡಾ.ಧನಂಜಯ ಸರ್ಜಿ, ಬಿಜೆಪಿ ರಾಜ್ಯ ಪ್ರಕೋಷ್ಠಗಳ ಅಧ್ಯಕ್ಷ ಎಸ್.ದತ್ತಾತ್ರಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಮುಖಂಡರಾದ ಬಂಗಾರು ಹನುಮಂತ, ಗಿರೀಶ್ ಭದ್ರಾಪುರ, ಮಾಲತೇಶ್, ಸಂತೋಷ್, ಸಿ.ಮೂರ್ತಿ, ಲಿಂಗರಜು, ಕೆ.ವಿ.ಅಣ್ಣಪ್ಪ, ಚಂದ್ರಶೇಖರ್, ಗವಿಸಿದ್ದಪ್ಪ ದ್ಯಾಮಣ್ಣ ಮೊದಲಾದವರಿದ್ದರು.