,
Box-
ಗಜೇಂದ್ರಸ್ವಾಮಿ, ಶಿವಮೊಗ್ಗ
ಕಾರಣಬದ್ಧ ಕರುಣೆ ಕೊಂಚವಾದರೂ ಇರಲಿ.
ಇವಿಷ್ಟು ಹಫ್ಪೋಸ್ಟ್ ವೆಬ್ ಪತ್ರಿಕೆಯು ಪಟ್ಟಿ ಮಾಡಿದ ಆದುನಿಕ ಸಂಸ್ಕಾರಗಳು. ಮಾಡರ್ನ್ ಎಂದು ಹೇಳಿದರೂ ಇವು ನಮಗೆಲ್ಲ ಹೊಸದೇನಲ್ಲ. ಮನಸ್ಸು ಮಾಡಿದರೆ ಹೊಸೆದುಕೊಂಡು ಜೀವನವನ್ನು ಹಸನುಗೊಳಿಸುವುದೂ ಕಷ್ಟವೇನಲ್ಲ. ಆದರೆ, ಕುದುರೆಯ ಗಾದೆ ಗೊತ್ತಲ್ಲ? ನೀರಿರುವಲ್ಲಿಗೆ ಕರೆದುಕೊಂಡು ಹೋಗಬಲ್ಲವೇ ವಿನಾ ನೀರು ಕುಡಿಯುವಂತೆ ಮಾಡಲಾರವು. ಅಂತೆಯೇ ಈ ಉಪದೇಶಗಳು ಹಾಗಾಗದಿರಲಿ

ಪ್ರತಿದಿನವೂ ಪ್ರಕೃತಿಯ ಮಡಿಲಲ್ಲಿ ಸ್ವಲ್ಪ ಹೊತ್ತನ್ನಾದರೂ ಕಳೆಯಿರಿ. ಬೆಳಗಿನ ಹೊತ್ತಿನಲ್ಲಿ ಅಥವಾ ಸಂಜೆಹೊತ್ತು ಒಂದು ವಾಕ್ ಇರಲಿ, ಹುಲ್ಲಿನ ಮೇಲೆ ಕಾಲುಚಾಚಿ ಕುಳಿತುಕೊಳ್ಳುವುದಿರಬಹುದು, ಚಿಕ್ಕದೊಂದು ಗುಡ್ಡವನ್ನೇರಿ ಇಳಿಯುವುದಿರಬಹುದು- ಯಾವುದಾದರೂ ಸರಿ. ಕೆಲ ಕ್ಷಣಗಳಾದರೂ ಸೂರ್ಯನ ಬಿಸಿಲು ನಿಮ್ಮ ಮುಖದ ಮೇಲೆ ಬೀಳಲಿ. ನೈಸರ್ಗಿಕ ಗಾಳಿ ನಿಮ್ಮ ಮೈಯನ್ನು ಸೋಕಲಿ. ಹಳ್ಳಿಯಲ್ಲಿರುವವರಿಗೆ ಇದೇನೂ ವಿಶೇಷವಲ್ಲ, ಆದರೆ ಪಟ್ಟಣದ ಬೆಂಕಿಪೊಟ್ಟಣದೊಳಗೆ ಇರುವವರಿಗೆ ಇದು ಅಗತ್ಯ.

ನಿಮ್ಮ ವಾಸಸ್ಥಳವನ್ನು ಒಪ್ಪ-ಓರಣವಾಗಿಟ್ಟುಕೊಳ್ಳಲು ಕ್ರಮ ಕೈಗೊಳ್ಳಿ. ನಿಮ್ಮ ಅಪಾರ್ಟ್ಮೆಂಟ್ ಇರಬಹುದು, ಆಫೀಸ್ ಇರಬಹುದು, ವಿಶಾಲವಾದ ಬಂಗ್ಲೆಯೇ ಇರಬಹುದು ಸ್ವಲ್ಪವೂ ಅಚ್ಚುಕಟ್ಟಾಗಿ ಇಲ್ಲದಿರುವುದು, ವಸ್ತುಗಳೆಲ್ಲ ಚಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿರುವುದು ಒಟ್ಟಾರೆಯಾಗಿ ನಿಮ್ಮ ವ್ಯಕ್ತಿತ್ವದ ಪ್ರತಿಫಲನ ಆಗುತ್ತದೆ. ಮಾತ್ರವಲ್ಲ, ನಿಮಗೆ ಗೊತ್ತಿಲ್ಲದಂತೆಯೇ ನಿಮ್ಮ ಮಾನಸಿಕ ಸ್ವಾಸ್ಥ್ಯ ಸೂಚ್ಯಂಕವು ನೂರು ಪ್ರತಿಶತಕ್ಕೆ ಕೊಂಚ ಕಮ್ಮಿಯೇ ಇರುವುದರ ಲಕ್ಷಣವೂ ಹೌದು. ಇದು ಅನಾವಶ್ಯಕ ಉದ್ವೇಗ ಆತಂಕಗಳಿಗೆ ಕಾರಣವಾಗುವುದೂ ಹೌದು. ಸ್ವಚ್ಛಗೊಳಿಸುವುದನ್ನು ಒಂದು ಕೆಲಸದ ಹೊರೆ ಅಂದುಕೊಳ್ಳಬೇಕಿಲ್ಲ. ನಿಜವಾಗಿಯಾದರೆ ಗಲೀಜು ಮಾಡುವುದೆಂದರೇನೇ ಅವಮಾನ. ಸ್ವಚ್ಛಗೊಳಿಸುವುದು ಯಾವತ್ತಿಗೂ ಗೌರವಾರ್ಹ.

ಸೋಷಿಯಲ್ ಮೀಡಿಯಾದಲ್ಲಿ ವ್ಯಯಿಸುವ ಸಮಯ ಕಡಿಮೆ ಮಾಡಿ. ವಾಟ್ಸಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ಗಳ ಪೋಸ್ಟುಗಳನ್ನೆಲ್ಲ ನೋಡುತ್ತಾ ಕೂರುವುದು, ಅವರಿವರ ವಿಷಯಗಳಲ್ಲಿ ಕುತೂಹಲದಿಂದ ಇಣುಕುವುದು, ಕಾಲಹರಣ ಮಾತ್ರವಲ್ಲ, ಒಂಥರದ ಕೀಳರಿಮೆ ಮೂಡಲಿಕ್ಕೆ, ನಿದ್ದೆ ಕಡಿಮೆಯಾಗುವುದಕ್ಕೆ, ತನ್ಮೂಲಕ ಅನಾರೋಗ್ಯಕ್ಕೂ ದಾರಿಯಾದೀತು. ಇಂಟರ್ನೆಟ್ ಮತ್ತು ಸೋಶಿಯಲ್ ಮೀಡಿಯಾದಿಂದ ಬಹಳ ಪ್ರಯೋಜನವಿರುವುದು ಹೌದು, ಆದರೆ ಅತಿಯಾದರೆ ಅಮೃತವೂ ವಿಷವಾಗುತ್ತದಲ್ಲವೇ? ಹಾಗಾಗಿ ಅದೊಂದು ದುಶ್ಚಟವಾಗಲಿಕ್ಕೆ ಬಿಡಬಾರದು.
ಡೈಲಿ ಡೈರಿ ಅಥವಾ ಜರ್ನಲ್ ಬರೆಯುವ ಅಭ್ಯಾಸವಿಟ್ಟುಕೊಳ್ಳಿ. ನಿಮ್ಮ ಆಲೋಚನೆಗಳನ್ನು ತಿದ್ದಿತೀಡಲಿಕ್ಕೆ, ಕಷ್ಟಕಾಲದಲ್ಲಿ ಮನಸ್ಸಿನ ಹತೋಟಿ ಸಾಧಿಸಲಿಕ್ಕೆ, ಬದುಕಿನ ಸಣ್ಣಸಣ್ಣ ಸಂಗತಿಗಳ ಮೇಲೂ ಸಿಂಹಾವಲೋಕನ ಬೀರುವುದಕ್ಕೆ, ಬಾಳಿನಲ್ಲಿ ಸಾಧ್ಯವಾದಷ್ಟೂ ವಸ್ತುನಿಷ್ಠತೆ ತಂದುಕೊಳ್ಳುವುದಕ್ಕೆ, ಕೃತಜ್ಞತಾಭಾವವನ್ನು ಹೆಚ್ಚಿಸಿಕೊಳ್ಳಲಿಕ್ಕೆ- ಹೀಗೆ ಒಟ್ಟಾರೆಯಾಗಿ ಚಿಕಿತ್ಸಕ ಪ್ರಯೋಜನವುಳ್ಳ ಅತ್ಯುತ್ತಮ ಅಭ್ಯಾಸವಿದು.

ರಾತ್ರಿಯಿಡೀ ನಿದ್ದೆ ಮಾಡುವುದನ್ನು ತಪ್ಪಿಸಿಕೊಳ್ಳಬೇಡಿ. ವಯೋಮಾನಕ್ಕನುಗುಣವಾಗಿ ದಿನಕ್ಕೆ ಏಳರಿಂದ ಒಂಬತ್ತು ಗಂಟೆಗಳ ನಿದ್ದೆ, ನಿರ್ದಿಷ್ಟ ಸಮಯಕ್ಕೆ ಆರಂಭವಾಗಿ ನಿರ್ದಿಷ್ಟ ಸಮಯಕ್ಕೆ ಅಂತ್ಯಗೊಳ್ಳುವ ಅಭ್ಯಾಸ ಬೆಳೆಸಿಕೊಂಡರೆ ಅದರಷ್ಟು ಒಳ್ಳೆಯದು ಬೇರಿಲ್ಲ. ಅನಿವಾರ್ಯ ಅಡಚಣೆಗಳು ಆಗಾಗ ಬರುವುದು ಸಹಜವೇ. ಆದರೂ ರೋಗನಿರೋಧಕ ಶಕ್ತಿ, ಮನೋಲ್ಲಾಸ, ಕಾರ್ಯದಕ್ಷತೆಗಳು ನಿಮ್ಮಲ್ಲಿ ಹೆಚ್ಚಬೇಕಿದ್ದರೆ ಅಂಥದೊಂದು ಶಿಸ್ತನ್ನು ನೀವು ರೂಢಿಸಿಕೊಳ್ಳುವುದು ಖಂಡಿತ ಒಳ್ಳೆಯದು.

ದಿನದಲ್ಲಿ ಸ್ವಲ್ಪ ಹೊತ್ತು ಧ್ಯಾನಕ್ಕೆ ಸಮಯ ಮೀಸಲಿಡಿ. ಮನಸ್ಸು ಮತ್ತು ದೇಹ ಸದಾ ಹೇಚಿ ತಾಳ-ಮೇಳದಲ್ಲಿರಬೇಕಂತಾದರೆ ಧ್ಯಾನ ಅತ್ಯುತ್ತಮ ಮಾರ್ಗ. ಮೃದುವಾದ ಸಂಗೀತ ಹಾಕಿಕೊಂಡು ಧ್ಯಾನ ಮಾಡಬಹುದು. ಅದಕ್ಕೆಂದೇ ಆಪ್ಗಳು, ಯುಟ್ಯೂಬ್ ವಿಡಿಯೋಗಳೂ ಇವೆ. ಅವ್ಯಾವುದರ ನೆರವಿಲ್ಲದೆ ಸಂಪೂರ್ಣವಾಗಿ ಮೌನಂ ಶರಣಂ ಗಚ್ಛಾಮಿ ಬಹಳ ಒಳ್ಳೆಯದು.
ದಿನಕ್ಕೊಮ್ಮೆಯಾದರೂ ನಿಮ್ಮದೇ ಕುಶಲ ವಿಚಾರಿಸಿಕೊಳ್ಳಿ. ನೀವು ವರ್ಕ್ಹೊಲಿಕ್ ಆಗಿದ್ದು ನಿದ್ದೆ ಊಟ ಎಲ್ಲ ಬಿಟ್ಟು ಪ್ರಯೋಗಾಲಯಗಳಲ್ಲಿ ಕಳೆದುಹೋಗುವ, ಕ್ರಮೇಣ ಆಬ್ಸೆಂಟ್ ಮೈಂಡೆಡ್ ಪ್ರೊಫೆಸರುಗಳಾಗುವ ವಿಜ್ಞಾನಿಗಳಂತಾಗುವುದು ಬೇಡ. ಕಾಲಕಾಲಕ್ಕೆ ಊಟ ತಿಂಡಿ, ಸ್ನಾನ, ನಿದ್ದೆ ಮಾಡುವುದು ನಿಮ್ಮ ಬಗ್ಗೆ ನಿಮಗೆ ಕಾಳಜಿಯಿದೆ, ಬೇಕಾಬಿಟ್ಟಿ ಆಗಿರಲಿಕ್ಕೆ ಬಿಡುವುದಿಲ್ಲ ಎಂಬುದರ ದ್ಯೋತಕ.

ದೇಹವನ್ನು ಜಡತ್ವಕ್ಕೆ ದೂಡಬೇಡಿ, ಆಗಾಗ ಚಲನೆಯಲ್ಲಿಡಿ. ದಿನವಿಡೀ ಕುಳಿತುಕೊಂಡೇ ಕೆಲಸ ಮಾಡಬೇಕಾದವರು ಗಂಟೆಗೊಮ್ಮೆ ಎದ್ದು ಅಷ್ಟಿಷ್ಟು ದೇಹದಂಡನೆ ಮಾಡಿಕೊಳ್ಳಬೇಕು. ಒಳ್ಳೆಯ ಸಂಗೀತಕ್ಕೆ ಹೆಜ್ಜೆ ಹಾಕುವುದಾದರೆ ನಾಚಿಕೆ ಬೇಡ. ಐವತ್ತರಿಂದ ನೂರು ‘ಊಠ್-ಬೈಸ್’ ಬಸ್ಕಿ ಹೊಡೆಯುವುದನ್ನೂ ಶಿಕ್ಷೆ ಎಂದುಕೊಳ್ಳುವುದು ಬೇಡ. ಕ್ರಮಬದ್ಧ ಯೋಗಾಸನಗಳು ಅಥವಾ ಇತರ ಯಾವುದೇ ವ್ಯಾಯಾಮ ವಿಧಾನಗಳಿದ್ದರಂತೂ ಮತ್ತೂ ಒಳ್ಳೆಯದೇ. ಒಟ್ಟಿನಲ್ಲಿ ದೇಹಕ್ಕೆ ಆಗಾಗ ಚುರುಕು ಮುಟ್ಟುತ್ತಿರಬೇಕು.
ಪ್ರೀತಿಪಾತ್ರರೊಂದಿಗೆ ಕನೆಕ್ಟ್ ಆಗಿ. ಆನ್ಲೈನ್ನಲ್ಲಿ ಅಲ್ಲ, ನಿಜ ಜಗತ್ತಿನಲ್ಲಿ! ದೂರವಾಣಿಯಲ್ಲಾದರೂ ಸರಿ ಸ್ನೇಹಿತರೊಡನೆ ಒಂದಷ್ಟು ಹೊತ್ತು ಹರಟೆ ಇರಲಿ. ಆಫೀಸ್ನ ಲಂಚ್ಬ್ರೇಕ್ನಲ್ಲಿ ಸಹೋದ್ಯೋಗಿಯೊಡನೆ ಚಿಕ್ಕದೊಂದು ವಾಕ್ ಹೋಗಿ. ಮನೆಯಲ್ಲಿ ಗಂಡ-ಹೆಂಡತಿ-ಮಕ್ಕಳು ಅಡುಗೆ ಮನೆಯಲ್ಲೂ ಡೈನಿಂಗ್ ಹಾಲ್ನಲ್ಲೂ ಸಾಧ್ಯವಾದಷ್ಟೂ ಮಟ್ಟಿಗೆ ಜತೆಜತೆಯಾಗಿರಿ.

ಒಂದು ಒಳ್ಳೆಯ ಹವ್ಯಾಸದಲ್ಲಿ ಸಮಯವನ್ನು ತೊಡಗಿಸಿಕೊಳ್ಳಿ. ಮನೆಯಲ್ಲೂ ಆಫೀಸ್ನಲ್ಲೂ ಕತ್ತೆಯಂತೆ ದುಡಿಮೆ, ಕುಟುಂಬ ಸದಸ್ಯರ ಬೇಕು-ಬೇಡಗಳನ್ನು ಪೂರೈಸುವುದು, ಮತ್ತು ಇತರ ಸಾಮಾಜಿಕ ಜವಾಬ್ದಾರಿಗಳನ್ನು ನಿಭಾಯಿಸುವುದು- ಇದರಲ್ಲೇ ಹೈರಾಣಾಗಿ ಹೋಗುವಾಗ ಇನ್ನೆಲ್ಲಿಯ ಹವ್ಯಾಸಗಳು ಎಂದು ನೀವು ಪರಿತಪಿಸಬಹುದು. ಆದರೂ ನಿಮ್ಮ ಆಸಕ್ತಿಗನುಗುಣವಾಗಿ ಸ್ವಲ್ಪ ಸಮಯ ಮಾಡಿಕೊಂಡರೆ ಅದರಿಂದಾಗುವ ಲಾಭ ಅಪರಿಮಿತ. ಹಾಡುವುದು, ಸಂಗೀತವಾದ್ಯ ನುಡಿಸುವುದು, ಚಿತ್ರ ಬಿಡಿಸುವುದು, ಕಸೂತಿ, ಕಲಾಕೃತಿ ರಚನೆ, ವಸ್ತುಗಳ ಸಂಗ್ರಹ… ಹವ್ಯಾಸಗಳ ನಮೂನೆಗಳಿಗೇನು ಕೊರತೆಯೇ? ಆಲಸ್ಯ ಆವರಿಸದಂತೆ, ಮತ್ತು ಅದೇ ಒಂದು ಹುಚ್ಚು ಎನ್ನುವ ಪರಿಸ್ಥಿತಿ ಬಾರದಂತೆಯೂ ನೋಡಿಕೊಳ್ಳುವುದು ಮುಖ್ಯ. * ದಿನಕ್ಕೊಂದೆರಡು ಸಲ ದೀರ್ಘವಾಗಿ ಉಸಿರೆಳೆದುಕೊಳ್ಳಿ. ತುಂಬ ಹೇಚಿ ಒತ್ತಡಕ್ಕೊಳಗಾಗಿರುವಾಗ ಗಂಟೆಗಟ್ಟಲೆ ಅಥವಾ ಇಡೀ ದಿನವೇ ದೀರ್ಘ ಶ್ವಾಸೋಚ್ಛ್ವಾಸ ಮಾಡದೇ ಇರುವ ಪರಿಸ್ಥಿತಿ ಬರುತ್ತದೆ. ಆದರೆ ಉದ್ದೇಶಪೂರ್ವಕವಾಗಿ ನಿಗಾ ಇಟ್ಟು ಒಂದೆರಡು ಸರ್ತಿ ದೀರ್ಘ ಉಸಿರೆಳೆದುಕೊಳ್ಳುವುದು ದೇಹಕ್ಕೂ ಮನಸ್ಸಿಗೂ ಚೈತನ್ಯದ ಟಾನಿಕ್ ಇದ್ದಂತೆ.

ಯಾವುದಾದರೂ ಸಂಸ್ಥೆಗೆ ಸ್ವಯಂಸೇವಕರಾಗಿ ಸೇರಿಕೊಳ್ಳಿ. ನಿಮ್ಮ ಅಭಿರುಚಿಯನ್ನವಲಂಬಿಸಿ ಶ್ರಮದಾನ ಅಥವಾ ಇತರ ವಿಧದಲ್ಲಿ ನಿಮ್ಮ ಸೇವೆಯನ್ನು ಸಲ್ಲಿಸಲಿಕ್ಕೆ ವಿಪುಲ ಅವಕಾಶಗಳಿರುತ್ತವೆ. ಸೇವಾಭಾವದಿಂದ ನೀವು ಮಾಡುವ ಕೆಲಸವು ಇನ್ನೊಬ್ಬರ ಬಾಳಿನಲ್ಲಿ ಒಳಿತನ್ನು ಮಾಡುತ್ತದೆಯೆಂಬ ತೃಪ್ತಿ ಅಸಾಮಾನ್ಯವಾದದ್ದು. ಇದು ನಿಮ್ಮ ಬಗ್ಗೆ ನಿಮ್ಮಲ್ಲಿ ಒಳ್ಳೆಯ ಭಾವನೆ ಬೆಳೆಯಲಿಕ್ಕೆ, ಇನ್ನಷ್ಟು ಕ್ರಿಯಾಶೀಲರಾಗುವುದಕ್ಕೆ, ಪ್ರಯೋಜನಕಾರಿ.
ಹೆಚ್ಚು ತರಕಾರಿಗಳನ್ನು ಸೇವಿಸಿ. ಸಂಸ್ಕರಿಸಿದ ಸಿದ್ಧ ಆಹಾರ ಸಾಮಗ್ರಿಗಿಂತ ಕಚ್ಚಾ ತರಕಾರಿ ಮತ್ತು ಸೊಪ್ಪು ಕೊಳ್ಳುವುದಕ್ಕೆ ನಿಮ್ಮ ಮಾಸಿಕ ಬಜೆಟ್ನಲ್ಲಿ ಹೆಚ್ಚು ಮೊತ್ತ ತೆಗೆದಿಡಿ. ಮೂರು ಹೊತ್ತಿನ ಆಹಾರ ಸೇವನೆಯಲ್ಲಿ ತರಕಾರಿ ಪ್ರಮಾಣ ಸಾಧ್ಯವಾದಷ್ಟೂ ಹೆಚ್ಚು ಇರಲಿ.
ಪ್ರೀತಿಪಾತ್ರರನ್ನು ಸಂದರ್ಭೋಚಿತವಾಗಿ ಸ್ಪರ್ಶಿಸಿ, ಮುದ್ದಿಸಿ. ನಿಮ್ಮದೇ ಸಂಗಾತಿಯಿರಬಹುದು, ಮಕ್ಕಳಿರಬಹುದು, ಒಡಹುಟ್ಟಿದವರಿರಬಹುದು- ಸ್ಪರ್ಶ ಮತ್ತು ಆಲಿಂಗನಗಳು ಮಾಡುವ ಮ್ಯಾಜಿಕ್ ಅದ್ಭುತವಾದದ್ದು. ಸಾಕುಪ್ರಾಣಿಗಳ ಮೈದಡವುವುದು ಕೂಡ ದೇಹ ಮತ್ತು ಮನಸ್ಸಿಗೆ ಬಹಳ ಒಳ್ಳೆಯದೇ. ಆತಂಕ, ಒಂಟಿತನ, ಖಿನ್ನತೆ ನಿವಾರಣೆಯಾಗುವುದಕ್ಕೆ ಅದು ರಾಮಬಾಣ. ನೀವು ಕೊಟ್ಟ ಪ್ರೀತಿಯ ದ್ವಿಗುಣ ಪ್ರೀತಿಯನ್ನು ಈ ಮೂಕಪ್ರಾಣಿಗಳು ನಿಮಗೆ ಹಿಂದಿರುಗಿಸುತ್ತವೆ.
ಇಲ್ಲ ಎಂದು ಹೇಳುವುದೂ ಗೊತ್ತಿರಲಿ. ಇತರರನ್ನು ಸದಾ ಮೆಚ್ಚಿಸುತ್ತಲೇ ಇರಬೇಕೆಂಬ ಖಯಾಲಿ ಕೆಲವರಿಗಿರುತ್ತದೆ. ಆ ಇತರರು ಅದರ ದುರುಪಯೋಗ ಮಾಡಿಕೊಳ್ಳುವುದೂ ಇದೆ. ನಿಮ್ಮ ವಿಷಯದಲ್ಲಿ ಹೀಗಾಗದಿರಲಿ. ಒತ್ತಾಯದಿಂದಿರಬಹುದು, ತಪ್ಪಿತಸ್ಥಭಾವ ಬಾರದಂತೆ ಇರಬಹುದು, ಋಣಸಂದಾಯವೆಂಬಂತೆ ಇರಬಹುದು ಅಂತೂ ಪರರ ಸೇವೆ ಮಾಡಿಯೇ ಸಮಯ ಮತ್ತು ಶಕ್ತಿಗಳನ್ನು ಕಳೆದುಕೊಳ್ಳುವ ಬಗ್ಗೆ ಎಚ್ಚರವಿರಲಿ. ಪ್ರತಿಯೊಂದನ್ನೂ ಒಪ್ಪಿಕೊಂಡು ತಲೆಮೇಲೆ ಹೊತ್ತುಕೊಳ್ಳುವ ಬದಲು ‘ಕ್ಷಮಿಸಿ. ಇದು ನನ್ನಿಂದಾಗುವುದಿಲ್ಲ’ ಎಂದು ವಿನಯದಿಂದಲೇ ಹೇಳಲಿಕ್ಕೆ ಕಲಿಯಿರಿ. ಅಂದರಿಕಿ ಮಂಚಿವಾಡು ಎಂದೆನಿಸಿಕೊಳ್ಳುವ ಬದಲು ಸ್ವಲ್ಪ ನಿಷ್ಠುರ ಕಟ್ಟಿಕೊಂಡರೆ ಪ್ರಳಯವೇನೂ ಆಗುವುದಿಲ್ಲ. .