
ಶಿವಮೊಗ್ಗ :
ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿ ಜನರು ಮನೆಬಿಟ್ಟು ಎಲ್ಲೂ ಹೋಗುವಾಗಿಲ್ಲ, ಹೋದರೆ ಕಳ್ಳರು ಬಂದು ಮನೆ ಬೀಗ ಹೊಡೆದು ಕಳ್ಳತನ ಹಾಗೂ ಮನೆಯ ಮುಂದೆ ನಿಲ್ಲಿಸಿದ ಬೈಕ್ಗಳ ಕಳ್ಳತನ ಮಾಡಿಕೊಂಡು ಹೋಗುತ್ತಿರುವ ಘಟನೆಗಳು ಇತ್ತೀಚೆಗೆ ಹೆಚ್ಚಾಗಿವೆ ಎಂದು ಇಲ್ಲಿನ ಸಾರ್ವಜನಿಕರು ದೂರಿದ್ದಾರೆ.
ವಿನೋಬನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿ ಮೊದಮೊದಲು ವಾಹನಗಳಲ್ಲಿರುವ ಪೆಟ್ರೋಲ್ ಕಳ್ಳತನ ಮಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಬೈಕ್ ಕಳ್ಳತನ, ಮನೆ ಕಳ್ಳತನ ಹೆಚ್ಚಾಗುತ್ತಿವೆ. ಪೊಲೀಸರು ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಇಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.

ಜೆ.ಹೆಚ್.ಪಟೇಲ್ ಬಡಾವಣೆಯ ಇ ಬ್ಲಾಕ್, ಡಿ ಬ್ಲಾಕ್ಗಳಲ್ಲಿ ವಾರದಲ್ಲಿ ೨ ಕಳ್ಳತನವಾಗಿದ್ದು, ಇ ಬ್ಲಾಕ್ನ ಮನೆಯೊಂದರಲ್ಲಿ ಬೀಗ ಮುರಿದು ಕಳ್ಳತನ ಮಾಡಿಕೊಂಡು ಹೋಗುವಾಗ ಕೆಳಗಿನ ಮನೆಯಲ್ಲಿ ಬಾಡಿಗೆಯಿದ್ದ ಯುವಕನ ಬೈಕ್ನಲ್ಲಿ ತೆರಳಿ ಯಾರಿಗೂ ಅನುಮಾನ ಬಾರದಂತೆ ಸ್ವಲ್ಪ ದೂರದಲ್ಲಿ ನಿಲ್ಲಿಸಿ ಹೋಗಿದ್ದಾರೆ. ಇದರ ಬಗ್ಗೆ ಮನೆಯ ಮಾಲೀಕರು ವಿನೋಬನಗರ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಓರ್ವರು ತಿಳಿಸಿದ್ದಾರೆ.
ವಿನೋಬನಗರ ಠಾಣೆಯ ಭಾಗದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುವ ಮುನ್ನವೇ ಅದನ್ನು ಚಿವುಟಿ ಹಾಕಬೇಕಾಗಿದೆ ಹಾಗೂ ಈ ಭಾಗದಲ್ಲಿ ಪೊಲೀಸರ ಬೀಟ್ ವ್ಯವಸ್ಥೆ ಹೆಚ್ಚಿಸಬೇಕು ಎಂಬುದು ನಿವಾಸಿಗಳು ಒತ್ತಾಯಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಇಲ್ಲಿನ ಜನರು ಭಯಭೀತರಾಗಿದ್ದಾರೆ. ಪೊಲೀಸರು ಇದರ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಹಾಗೂ ಬೀಟ್ ವ್ಯವಸ್ಥೆ ಹೆಚ್ಚಿಸಬೇಕು.
-ನಟೇಶ್, ಸ್ಥಳೀಯ