
ಶಿವಮೊಗ್ಗ: ಭದ್ರಾವತಿ ತಾಲೂಕು ಜನ್ನಾಪುರದಲ್ಲಿ ಖಾಸಗಿ ಫೈನಾನ್ಸ್ ಕಿರುಕುಳಕ್ಕೆ ಟಿ.ಟಿ. ರಾಮು (55) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರ ಪುತ್ರಿ ನೀಡಿದ ದೂರಿನನ್ವಯ ಭದ್ರಾವತಿ ನ್ಯೂಟೌನ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ರಾಮು ಅವರು ಫೈನಾನ್ಸ್ ಕಂಪನಿಯಲ್ಲಿ ಸಾಲ ಮಾಡಿ ಬೈಕ್ ಖರೀದಿಸಿದ್ದರು.
ಕೆಲವು ಕಂತುಗಳನ್ನು ಬಾಕಿ ಉಳಿಸಿಕೊಂಡಿದ್ದರಿಂದ ಫೈನಾನ್ಸ್ ರಿಕವರಿ ಏಜೆಂಟ್ ಕರೆ ಮಾಡಿ ಬೆದರಿಕೆ ಹಾಕಿದ್ದಲ್ಲದೇ ಜ.15ರಂದು ಸಂತ್ರಸ್ತರ ಮನೆಗೆ ಬಂದು ನಿಂದಿಸಿ, ಎಚ್ಚರಿಕೆ ಕೊಟ್ಟು ತೆರಳಿದ್ದ.
ಈ ವಿಷಯವನ್ನು ಕಾಲೇಜಿನಿಂದ ಮನೆಗೆ ಬಂದ ಪುತ್ರಿಗೆ ತಂದೆ ತಿಳಿಸಿದ್ದಾರೆ. ಬಳಿಕ ಕೆಲವೇ ಹೊತ್ತಿನಲ್ಲಿ ಕೋಣೆಗೆ ತೆರಳಿ ನೇಣಿಗೆ ಶರಣಾಗಿದ್ದಾರೆ. ತಮ್ಮ ತಂದೆ ಸಾವಿಗೆ ಕಾರಣವಾದರವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.