ಶಿವಮೊಗ್ಗ,ಫೆ.೧೮: ಅತಿಥಿ ಉಪನ್ಯಾಸಕರ ಕಷ್ಟ ಕಾರ್ಪಣ್ಯ, ಗುತ್ತಿಗೆದಾರರ ಸಂಕಷ್ಟಗಳು, ಉದಯಗಿರಿಯಲ್ಲಿ ನಡೆದ ಘಟನೆ , ಕಾಂಗ್ರೆಸ್ ಮುಖಂಡರ ಅರ್ಥವಿಲ್ಲದ ಹೇಳಿಕೆಗಳು, ಪೊಲೀಸರಿಗೆ ರಕ್ಷಣೆ ಇಲ್ಲದ ಸ್ಥಿತಿ ಇವು ಕ್ರಾಂತಿವೀರ ಬ್ರಿಗೇಡ್ನ ಮುಖ್ಯಸ್ಥ ಹಾಗೂ ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಅವರು ನಡೆಸಿದ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು.
ಪ್ರತಿಯೊಂದು ವಿಷಯದ ಬಗ್ಗೆ ವಿವರಣೆ ನೀಡಿದ ಅವರು ಪ್ರಮುಖವಾಗಿ ಅತಿಥಿ ಉಪನ್ಯಾಸಕರ, ಶಿಕ್ಷಕರ ಸಮಸ್ಯೆಗಳು ಹಲವು ಬಗೆಯದ್ದಾಗಿದೆ. ಕಳೆದ ಅಗಸ್ಟ್ ತಿಂಗಳಿನಿಂದ ಅಂದರೆ ೭ ತಿಂಗಳಿನಿಂದ ಅವರಿಗೆ ಸಂಬಳವೇ ಬಂದಿಲ್ಲ. ಪಾಠ ಮಾಡುವ ಗುರುಗಳಿಗೆ ತಿಂಗಳಾನುಗಟ್ಟಲೆ ವೇತನ ಪವಾತಿ ಮಾಡದಿರುವ ಸ್ಥಿತಿ ರಾಜ್ಯ ಸರ್ಕಾರಕ್ಕೆ ಬಂದಿದ್ದು, ದುರ್ದೈವ. ಇದಕ್ಕೆ ಸಂಬಂಧಿಸಿದ್ದಂತೆ ಅತಿಥಿ ಉಪನ್ಯಾಸಕರು ಶಿಕ್ಷಕರ ಸಮಸ್ಯೆಗಳನ್ನು ಇಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ಮಧುಬಂಗಾರಪ್ಪನವರಿಗೆ ಬಹಿರಂಗ ಪತ್ರ ಬರೆಯುವುದಾಗಿ ಈಶ್ವರಪ್ಪ ತಿಳಿಸಿದರು.

ಅತಿಥಿ ಶಿಕ್ಷಕರಿಗೆ, ಉಪನ್ಯಾಸಕರಿಗೆ ಎಲ್ಕೆಜಿ, ಯುಕೆಜಿ ಶಿಕ್ಷಕರಿಗೆ ಸಂಬಳವೇ ಇಲ್ಲ ಎಂದರೆ ಹೇಗೆ, ಅವರ ಸೇವೆಗೆ ಬೆಲೆಯಿಲ್ಲವೆ. ಅವರು ನೇಣು ಹಾಕಿಕೊಳ್ಳಬೇಕೆ, ನೇಣು ಹಾಕಿಕೊಂಡರೆ ಮಾತ್ರ ಈ ಸರ್ಕಾರಕ್ಕೆ ಗೊತ್ತಾಗುತ್ತದೆಯೇ ಎಂದು ಪ್ರಶ್ನೆ ಮಾಡಿದ ಅವರು, ಮೊದಲು ಅವರಿಗೆ ಸಂಬಳ ಕೊಡಿ. ಡಿಸೆಂಬರ್ ತನಕ ಬೇಡ ಜನವರಿಯಿಂದ ಕೊಡಿ ಎಂಬ ಸರ್ಕಾರಿ ಸುತ್ತೋಲೆಗಳು ಬೇರೆ. ಇದು ಎಂತಹ ಪರಿಸ್ಥಿತಿ. ಸುಮಾರು ೬೦ ಸಾವಿರ ಅತಿಥಿ ಉಪನ್ಯಾಸಕ ಮತ್ತು ಶಿಕ್ಷಕ ವರ್ಗದವರಿದ್ದಾರೆ. ಇವರೆಲ್ಲ ಜೀವನ ಮಾಡುವುದು ಹೇಗೆ, ಒಂದು ಕೆಲಸ ಮಾಡಿ ಮಂತ್ರಿಗಳ ಮತ್ತು ಶಾಸಕರ ಸಂಬಳವನ್ನು ನಿಲ್ಲಿಸಿಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಪರಿಸ್ಥಿತಿ ಗುತ್ತಿಗೆದಾರರದ್ದು ಆಗಿದೆ. ಸುಮಾರು ೬೪ ಸಾವಿರ ಕೋಟಿ ಗುತ್ತಿಗೆದಾರರಿಗೆ ಬಾಕಿ ಬರಬೇಕಾಗಿದೆ. ಅದರಲ್ಲಿ ಶಿವಮೊಗ್ಗ ಜಿಲ್ಲೆಯದ್ದು ೨೨೫೦ ಕೋಟಿ ರೂ. ಇದೆ. ಅವರು ಹೇಗೆ ಬದುಕುವುದು. ಹೀಗಾದರೆ ಗುತ್ತಿಗೆದಾರರು ಕೂಡ ಆತ್ಮಹತ್ಯೆಯ ದಾಳಿ ತುಳಿಯುವುದಿಲ್ಲವೆ. ಇದೇ ಕಾಂಗ್ರೆಸ್ ವಿರೋಧ ಪಕ್ಷದಲ್ಲಿದ್ದಾಗ ಏನೆಲ್ಲ ಬಬ್ಬೆ ಹೊಡೆಯುತ್ತಿದ್ದರು. ಈಗ ಅವರಿಗೆ ಗುತ್ತಿಗೆದಾರರ ಸ್ಥಿತಿ ಅರ್ಥವಾಗುತ್ತಿಲ್ಲವೆ ಎಂದು ವ್ಯಂಗ್ಯವಾಡಿದರು.

ಉದಯಗಿರಿಯ ಪ್ರಕರಣ ಇಡಿ ರಾಜ್ಯವೇ ತಲೆತಗ್ಗಿಸುವಂತದ್ದು, ಪೊಲೀಸರು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಸೇವೆ ಮಾಡುತ್ತಾರೆ. ಇವರ ಮೇಲೆ ಹಲ್ಲೆಯಾಗುತ್ತದೆ ಎಂದರೆ ಏನು ಅರ್ಥ. ಒಬ್ಬ ಪೊಲೀಸ್ ಅಧಿಕಾರಿಯ ಮೇಲೆ ಸಾವಿರಾರು ಜನರು ಕಲ್ಲು ತೂರಾಟ ನಡೆಸುತ್ತಾರೆ. ಒಮ್ಮೆಗೆ ಇಷ್ಟೊಂದು ಜನ ಹೇಗೆ ಸೇರುತ್ತಾರೆ. ಆ ಕಲ್ಲುಗಳು ಎಲ್ಲಿಂದ ಬಂದವು. ಇದು ಪೂರ್ವಯೋಜಿತ ಘಟನೆ ಅಲ್ಲವೇ ಎಂದು ಪ್ರಶ್ನೆ ಮಾಡಿದರು.
ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರ ಹರಿಪ್ರಸಾದ್ ಲಕ್ಷ್ಮಣ್ ಅವರ ಹೇಳಿಕೆಗಳು ತೀರ ಬಾಲಿಶವಾಗಿದದ್ದು, ಇಲ್ಲಿ ಗಲಾಟೆ ಮಾಡಿದವರು ಬಿಜೆಪಿಯವರು ಬುರ್ಕಾ ಹಾಕಿಕೊಂಡು ಕಲ್ಲು ಎಸೆಯುತ್ತಾರೆ. ಆರ್ಎಸ್ಎಸ್ ಪಾತ್ರವು ಇದೆ ಎಂದು ಸುಳ್ಳು ಹೇಳುತ್ತಾರಲ್ಲ ಇವರಿಗೆ ಏನಾದರೂ ಮಾನ ಮಾರ್ಯಾದೆ ಇದಿಯ. ಇವರಿಗೆ ಜನ ಹಾಲಿನ ಅಭಿಷೇಕ ಬೇರೆ ಮಾಡುತ್ತಾರೆ ಎಂದು ಹೀಯಾಳಿಸಿದರು.
ಭದ್ರಾವತಿಯಲ್ಲಿ ಶಾಸಕನೊಬ್ಬನ ಮಗ ಅಧಿಕಾರಿಗೆ ಕುಡುಕನು ಬಳಸದ ಭಾಷೆಯಲ್ಲಿ ಬಯ್ಯುತ್ತಾನೆ. ಆತನ ವಿರುದ್ಧ ಪ್ರಕರಣ

ದಾಖಲಿಸಿಕೊಳ್ಳಲು ಅಧಿಕಾರಿಗಳೇ ಎದುರುತ್ತಾರೆ. ಇದು ಪ್ರಜಾಪ್ರಭುತ್ವವೇ. ಅಧಿಕಾರಿಗಳು ಹೇಗೆ ಕೆಲಸ ಮಾಡಬೇಕು ಎಂದರು.
ಕಾಂಗ್ರೆಸ್ಸಿನ ನಾಯಕರುಗಳಾದ ಕೆ.ಎನ್.ರಾಜಣ್ಣ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಮುಂತಾದವರ ಹೇಳಿಕೆಗಳು ಅರ್ಥಹೀನ ಹೇಳಿಕೆಗಳಾಗಿವೆ. ಹೀಗಾಗಲೆ ಇದನ್ನು ನಾನು ಖಂಡಿಸಿದ್ದೇನೆ. ಇನ್ನಾದರು ಕಾಂಗ್ರೆಸ್ ನಾಯಕರು ಓಲೈಕೆಗಳನ್ನು ನಿಲ್ಲಿಸಬೇಕು. ಗುಂಡಾಗಿರಿ ವರ್ತನೆ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಬಾಲು, ಎಂ.ಶಂಕರ್, ಸೋಗಾನೆ ರಮೇಶ್,ಮೋಹನ್ ಜಾಧವ್, ಗುರುಮೂರ್ತಿ, ಪ್ರಶಾಂತ್, ಟಾಕ್ರಾನಾಯ್ಕ ಇದ್ದರು.