![Untitled-1 copy](https://tungataranga.com/wp-content/uploads/2025/02/Untitled-1-copy-1.jpg)
ಶಿವಮೊಗ್ಗ: ಮಹಿಳಾ ಅಧಿಕಾರಿಯ ಮೇಲೆ ಶಾಸಕರ ಪುತ್ರನ ದೌರ್ಜನ್ಯ ಖಂಡಿಸಿ ಫೆ. ೧೪ರಂದು ಶುಕ್ರವಾರ ಭದ್ರಾವತಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದಾ ಅಪ್ಪಾಜಿ ಗೌಡ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭದ್ರಾವತಿಯಲ್ಲಿ ಶಾಸಕ ಸಂಗಮೇಶ್ ಮತ್ತು ಅವರ ಪುತ್ರರ ಆರ್ಭಟ, ದೌರ್ಜನ್ಯ ಮಿತಿ ಮೀರಿದೆ. ಅವರನ್ನು ತಡೆಯುವವರು ಯಾರೂ ಇಲ್ಲದಂತಾಗಿದೆ. ಇಡೀ ಭದ್ರಾವತಿಯಲ್ಲಿ ಗಾಂಜಾ, ಇಸ್ಪೀಟ್, ಅಕ್ರಮ ಮರಳು ದಂಧೆ, ಮೀಟರ್ ಬಡ್ಡಿ ದಂಧೆ, ಅಕ್ರಮ ನಾಟಾ ಸಾಗಣೆ ಸೇರಿದಂತೆ ಹಲವು ಅಕ್ರಮ ಚಟುವಟಿಕೆ ನಿರಂತರವಾಗಿ ನಡೆಯುತ್ತಿವೆ. ಈ ಎಲ್ಲಾ ಅಕ್ರಮಗಳು ಶಾಸಕರ ನೆರಳಿನಲ್ಲಿಯೇ ನಡೆಯುತ್ತಿವೆ ಎಂದು ಗಂಭೀರ ಆರೋಪ ಮಾಡಿದರು.
![](http://tungataranga.com/wp-content/uploads/2023/04/Screenshot_2023_0226_070755-1.jpg)
ಇದಕ್ಕೆ ಸಾಕ್ಷಿ ಎಂಬಂತೆ ಅಕ್ರಮ ಮರಳು ಸಾಗಣೆಗೆ ಸಂಬಂಧಿಸಿದಂತೆ ಅದನ್ನು ತಡೆಯಲು ಬಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಗೆ ಭದ್ರಾವತಿಯ ಶಾಸಕನ ಪುತ್ರ ಅವಾಚ್ಯವಾಗಿ ನಿಂದಿಸಿದ್ದಾರೆ. ಬೆದರಿಕೆ ಹಾಕಿದ್ದಾರೆ. ಹೀಗಾದರೆ ಅಧಿಕಾರಿಗಳು ಏನು ಮಾಡಲು ಸಾಧ್ಯ? ಮಹಿಳೆ ಎಂದು ನೋಡದೇ ಅಶ್ಲೀಲವಾಗಿ ಆತ ಮಾತನಾಡಿದ್ದಾನೆ. ಈ ಎಲ್ಲದರ ಹಿಂದೆ ಶಾಸಕರ ಕುಮ್ಮಕ್ಕು ಇದೆ. ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
![](http://tungataranga.com/wp-content/uploads/2025/02/Screenshot_2025_0208_211945.jpg)
ಪಕ್ಷದ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ಮಾತನಾಡಿ, ಭದ್ರಾವತಿಯ ಅಕ್ರಮಗಳಿಗೆ ಕೊನೆಯೇ ಇಲ್ಲದಂತಾಗಿದೆ. ಶಾಸಕ ಸಂಗಮೇಶ್ ಅವರು ರಾಜೀನಾಮೆ ನೀಡಬೇಕು. ಅವರ ಪುತ್ರ ಬಸವೇಶ್ ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಭದ್ರಾವತಿಯ ಮಾಧವಾಚಾರ್ ಸರ್ಕಲ್ ನಿಂದ ತಾಲೂಕು ಕಚೇರಿವರೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಯಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭಾಗವಹಿಸಲಿದ್ದಾರೆ ಎಂದರು.
![](http://tungataranga.com/wp-content/uploads/2025/02/IMG_20250125_140612-1.jpg)
ಜೆಡಿಎಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಮಧುಕುಮಾರ್ ಮಾತನಾಡಿ, ಇಡೀ ಭದ್ರಾವತಿ ಅಕ್ರಮ ಚಟುವಟಿಕೆಗಳ ನಗರವಾಗಿದೆ. ಇಸ್ಪೀಟ್ ದಂಧೆಯಂತೂ ಎಗ್ಗಿಲ್ಲದೇ ನಡೆಯುತ್ತಿದೆ. ಶಾಸಕರ ಪುತ್ರರು ಸುಮಾರು ೧೨ ಕಡೆ ಇಸ್ಪೀಟ್ ಜೂಜಾಟ ಬಹಿರಂಗವಾಗಿಯೇ ನಡೆಸುತ್ತಿದ್ದಾರೆ. ಬೇರೆ ಬೇರೆ ರಾಜ್ಯಗಳಿಂದ ಭದ್ರಾವತಿಗೆ ಇಸ್ಪೀಟ್ ಆಡಲು ಬರುತ್ತಾರೆ. ಜೊತೆಗೆ ಗಾಂಜಾ ಹಾವಳಿ ಹೆಚ್ಚಿದೆ. ಗೋವಾದಲ್ಲಿ ಇರುವಂತೆ ಒಂದು ರೀತಿಯ ಜೂಜಾಟದ ಅಡ್ಡೆಯಾಗಿ, ಕ್ಯಾಸಿನೋ ಆಗಿ ಭದ್ರಾವತಿ ಪರಿವರ್ತನೆಯಾಗುತ್ತಿದೆ. ಅಧಿಕಾರಿಗಳು ಶಾಸಕರ ಬೆದರಿಕೆಗೆ ಯಾವ ಕೇಸನ್ನೂ ದಾಖಲಿಸಿಕೊಳ್ಳುತ್ತಿಲ್ಲ. ಕೈಗೊಂಬೆಯಾಗಿದ್ದಾರೆ. ಈ ಎಲ್ಲದರಿಂದ ಭದ್ರಾವತಿ ನಗರ ಬಿಡುಗಡೆಯಾಗಬೇಕಾಗಿದೆ ಎಂದರು.
ಜೆಡಿಎಸ್ ರಾಜ್ಯ ಕೋರ್ ಕಮಿಟಿ ಉಪಾಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್ ಮಾತನಾಡಿ, ಮಹಿಳಾ ಅಧಿಕಾರಿಯ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನು ಬಂಧಿಸಬೇಕೋ ಅವರನ್ನು ಬಂಧಿಸಿಲ್ಲ. ಅಲ್ಲಿನ ಶಾಸಕರ ಮಕ್ಕಳ ದುರ್ವರ್ತನೆ ಮಿತಿ ಮೀರುತ್ತಿದೆ. ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಇಡೀ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ಥರ ಮೇಲೆ ಕಠಿಣಕ್ರಮ ಕೈಗೊಳ್ಳಬೇಕು. ಶಾಸಕ ಸಂಗಮೇಶ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ನಗರಾಧ್ಯಕ್ಷ ದೀಪಕ್ ಸಿಂಗ್, ರಾಜ್ಯ ಕಾರ್ಯದರ್ಶಿ ರಾಕೇಶ್ ಡಿಸೋಜ, ಜಿಲ್ಲಾ ಯುವ ಘಟಕದ ಕಾರ್ಯಾಧ್ಯಕ್ಷ ಎಸ್.ಎಲ್. ನಿಖಿಲ್, ಪ್ರಮುಖರಾದ ದ್ಯಾನೇಶಪ್ಪ, ಗೀತಾ ಸತೀಶ್, ಪ್ರೇಮ್ ಕುಮಾರ್, ಸುನಿಲ್, ಲೋಹಿತ್, ನಿರಂಜನ್, ರಾಘವೇಂದ್ರ ಇದ್ದರು.