ಸಾಗರ : ಸೊರಬ ರಸ್ತೆ ಮತ್ತು ಬಿ.ಎಚ್.ರಸ್ತೆ ಅಗಲೀಕರಣ ಕಾಮಗಾರಿ ಶೀಘ್ರವಾಗಿ ಮುಗಿಸಲಾಗುತ್ತದೆ. ಗುಣಮಟ್ಟದ ರಸ್ತೆ ನಿರ್ಮಿಸಲು ಗುತ್ತಿಗೆದಾರರಿಗೆ ಸೂಚಿಸಿದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಲ್ಲಿನ ಆರ್.ಪಿ.ರಸ್ತೆಯಲ್ಲಿ ಗುರುವಾರ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಚರಂಡಿ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ನಗರದ ಆರ್.ಪಿ. ರಸ್ತೆ ಸೇರಿದಂತೆ ಕೆಲವು ಪ್ರಮುಖ ರಸ್ತೆಗಳಲ್ಲಿ ಚರಂಡಿ ನಿರ್ಮಾಣದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗಿದ್ದು ಅದನ್ನು ತಕ್ಷಣ ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಮಾರ್ಕೇಟ್ ರಸ್ತೆ ಅಗಲೀಕರಣಕ್ಕೆ ೨೯ ಕೋಟಿ ರೂ. ಹಣ ಉಪವಿಭಾಗಾಧಿಕಾರಿಗಳ ಖಾತೆಯಲ್ಲಿದೆ. ಹಿಂದಿನ ಶಾಸಕರ ಅವಧಿಯಲ್ಲಿ ಅವರ ಕಡೆಯವರು ರೌಡಿಸಂ ಮಾಡಿದ್ದರಿಂದ ಸ್ಥಳೀಯ ನಿವಾಸಿಗಳು ನ್ಯಾಯಾಲಯಕ್ಕೆ ಹೋಗಿದ್ದರು. ಇದೀಗ ಅಗಲೀಕರಣಕ್ಕೆ ಜಾಗ ಬಿಟ್ಟುಕೊಡಲು ಒಪ್ಪಿದ್ದಾರೆ. ಶೀಘ್ರದಲ್ಲಿ ಪರಿಹಾರ ನೀಡಿ ಅಗಲೀಕರಣ ಪ್ರಾರಂಭಿಸಲಾಗುತ್ತದೆ ಎಂದು ಹೇಳಿದರು.
ಬಿ.ಎಚ್.ರಸ್ತೆ ಅಗಲೀಕರಣ ಕಾಮಗಾರಿ ತ್ವರಿತವಾಗಿ ನಡೆಯುತ್ತಿದ್ದು ೯೦ ಜನರಿಗೆ ನೋಟಿಸ್ ನೀಡಿದ್ದು ಅಗಲೀಕರಣಕ್ಕೆ ಜಾಗ ಬಿಟ್ಟುಕೊಡಲು ಮನವಿ ಮಾಡಿದೆ. ಈಗಾಗಲೆ ಗಾಂಧಿನಗರ ವೃತ್ತದಿಂದ ಅಗಲೀಕರಣದ ಎರಡನೇ ಹಂತ ಪ್ರಾರಂಭವಾಗಿದೆ. ಜ್ಯೂನಿಯರ್ ಕಾಲೇಜು, ನ್ಯಾಯಾಲಯದ ಕಾಂಪೋಂಡ್ ನಿರ್ಮಾಣವಾಗುತ್ತಿದೆ. ಪರಿಹಾರ ನೀಡಲು ಹಣ ಸಿದ್ದವಿದೆ. ಮುಂದಿನ ಮಾರಿಕಾಂಬಾ ಜಾತ್ರೆಯೊಳಗೆ ಬಿ.ಎಚ್.ರಸ್ತೆ, ಮಾರ್ಕೇಟ್ ರಸ್ತೆ ಅಗಲೀಕರಣ ಕಾಮಗಾರಿ ಪೂರ್ಣಗೊಂಡು ಜನರಿಗೆ ಸಂಚಾರ ವ್ಯವಸ್ಥೆ ಸುಗಮವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಎಚ್.ಕೆ.ನಾಗಪ್ಪ, ಡಿವೈಎಸ್ಪಿ ಗೋಪಾಲಕೃಷ್ಣ ನಾಯ್ಕ್, ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಮಧುಮಾಲತಿ, ಸೈಯದ್ ಜಾಕೀರ್ ಇನ್ನಿತರರು ಹಾಜರಿದ್ದರು