ಶಿವಮೊಗ್ಗ,ಜ.೨೭: ದುರಂಹಕಾರವನ್ನು ಬಿಟ್ಟು ಅಭಿವೃದ್ಧಿಗಾಗಿ ಒಟ್ಟಾಗಿ ಹೆಜ್ಜೆ ಹಾಕಿ ಎಂದು ಸಂಸದ ಬಿ.ವೈ.ರಾಘವೇಂದ್ರ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅವರಿಗೆ ಎಚ್ಚರಿಕೆಯ ಹಿತನುಡಿಗಳನ್ನಾಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದವರ ಬಗ್ಗೆ ಅದರಲ್ಲೂ ಮಾಜಿ ಸಚಿವ ಹರತಾಳು ಹಾಲಪ್ಪ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಗುರವಾಗಿ ಮಾತನಾಡಿದ್ದನ್ನು ಸಂಸದ ಬಿ.ವೈ.ರಾಘವೇಂದ್ರ ತೀವ್ರ ತರಾಟೆಗೆ ತೆಗೆದುಕೊಂಡರು.
ಹರತಾಳು ಹಾಲಪ್ಪ ಬಿಜೆಪಿಯಲ್ಲಿ ಹಿರಿಯರು. ಮೇಲಾಗಿ ಮಾಜಿ ಸಚಿವರು. ನಾನು ಮಲೆನಾಡಿನ, ಅರಣ್ಯ ಭೂಮಿ ಸಮಸ್ಯೆಗಳ ಬಗ್ಗೆ ಕೆಲಸ ಮಾಡುತ್ತಿದ್ದೇನೆ ಎಂದು ಸ್ವಾಭಾವಿಕವಾಗಿಯೇ ಹೇಳಿಕೆ ನೀಡಿದ್ದರು. ಅದಕ್ಕೆ ಸಚಿವ ಮಧು ಬಿಜೆಪಿ ಸಾರ್ಕಾರವಿದ್ದಾಗ ಈ ಭಾಗದ ಸಮಸ್ಯೆಗಳ ಬಗ್ಗೆ ಮಾತನಾಡದೆ ಹಾಲಪ್ಪ ಬಾಯಲ್ಲಿ ಸಗಣಿ ತುಂಬಿಕೊಂಡಿದ್ದರೆ ಎಂದು ಹಗುರವಾಗಿ ಮಾತನಾಡಿದ್ದನ್ನು ನಾವು ಸಹಿಸುವುದಿಲ್ಲ ಎಂದು ಕುಟುಕಿದರು.
ನಾವು ವಿರೋಧ ಪಕ್ಷದವರು. ಸರ್ಕಾರದ ಆಡಳಿತ ವೈಫಲ್ಯ, ಕುಂಠಿತ ಅಭಿವೃದ್ಧಿಗಳ ಬಗ್ಗೆ ಪ್ರಶ್ನೆ ಮಾಡುವುದು ನಮ್ಮ ಕರ್ತವ್ಯ. ಆದಾಗ್ಯೂ ಆಡಳಿತಕ್ಕೆ, ಅಭಿವೃದ್ಧಿ ಕೆಲಸಗಳಿಗೆ ಸಹಕಾರ ನೀಡುತ್ತಿದ್ದೇವೆ. ಸಚಿವ ಮಧು ಇದನ್ನು ಅರಿತುಕೊಳ್ಳಬೇಕು ಎಂದು ಕಿವಿ ಹಿಂಡಿದರು.
ಇಲ್ಲನ ಶರಾವತಿ ಸಂತ್ರಸ್ತರು, ಭೂಮಿ ಸಮಸ್ಯೆ ಕುರಿತು ನಾನು ಸಂಸದನಾಗಿ ಹರತಾಳು ಹಾಲಪ್ಪ, ಕೆ.ಬಿ.ಅಶೋಕ ನಾಯ್ಕ ಮೊದಲಾದವರು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿ ಅವರ ಜೊತೆ ಮಾತನಾಡಿದ್ದನ್ನು ರಾಜ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ತಿಳಿಸಿದ್ದೇವೆ. ನಾವು ಅವರನ್ನು ಭೇಟಿ ಮಾಡಿದ್ದು ತಪ್ಪೆ? ಸರ್ಕಾರ ಯಾರಪ್ಪನ ಆಸ್ತಿಯಲ್ಲ ಎಂದು ಗರಂ ಅಗಿಯೇ ಚಾಟಿ ಬೀಸಿದರು.
೫೦-೬೦ ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ಸೇ ಶರಾವತಿ ಸಂತ್ರಸ್ತರ, ಭದ್ರಾವತಿಯ ವಿಐಎಸ್ಎಲ್ನ ಇಂದಿನ ಪರಿಸ್ಥಿತಿಗೆ ಕಾರಣ. ಇದು ಕಾಂಗ್ರೆಸ್ ನ ಪಾಪದ ಕೂಸು ಎಂದು ಟೀಕಿಸಿದರು.
ವೈಯಕ್ತಿಕ ಹಿತಾಸಕ್ತಿಯನ್ನಿಟ್ಟುಕೊಂಡು ವಿರೋಧ ಪಕ್ಷದವರ ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡಬಾರದು ಎಂದ ಸಂಸದರು ಮಧು ಬಂಗಾರಪ್ಪ ಒಂದು ಸುಳ್ಳಿನ ಕಂತೆ. ಹಿಂದಿನ ಸರ್ಕಾರಗಳು ಅಭಿವೃದ್ಧಿಗೆ ಕೊಟ್ಟ ಅನುದಾನವನ್ನು ಸರ್ಕಾರ ವಾಪಸ್ ಪಡೆದುಕೊಂಡು ಈಗ ನಮ್ಮ ಮೇಲೆ ಹರಿಹಾಯ್ದರೆ ಹೇಗೆ ಎಂದು ಸಿಡಿಮಿಡಿಕೊಂಡರು.
ಇನ್ನಾದರೂ ಮಧುಬಂಗಾರಪ್ಪನವರು ಸಣ್ಣತನವನ್ನು ಬಿಡಬೇಕು. ಸರ್ಕಾರ ಎಂದರೆ ಆಡಳಿತ ಮತ್ತು ವಿರೋಧ ಪಕ್ಷದ ಎರಡು ಪಾತ್ರಗಳು ಇರುತ್ತವೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಭಿವೃದ್ಧಿಗಳನ್ನು ಒಟ್ಟಾಗಿ ತೆಗೆದುಕೊಂಡುಹೋಗಬೇಕು. ಸರ್ಕಾರ ಚೌಕಟ್ಟಿನಲ್ಲಿಯೇ ನಾವೆಲ್ಲ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಡಾ.ಧನಂಜಯ ಸರ್ಜಿ ಮುಂತಾದವರು ಇದ್ದರು.