ಶಿವಮೊಗ್ಗ,ಜ.27 : ನಗರದ ನೆಹರು ರಸ್ತೆಯಲ್ಲಿನ ರಾಷ್ಟ್ರೀಕೃತ ಬ್ಯಾಂಕ್ ಒಂದರ ಎಟಿಎಂ ನಲ್ಲಿನ ಹಣ ಕಳ್ಳತನಕ್ಕೆ ಖದೀಮರು ವಿಫಲ ಯತ್ನ ನಡೆಸಿರುವ ಘಟನೆ ಕಳೆದ ತಡರಾತ್ರಿ ನಡೆದಿದೆ. ಘಟನೆ ನಡೆದ ಅರ್ಧ ಘಂಟೆಯೊಳಗೆ ಕೋಟೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಇತ್ತೀಚೆಗೆ ಹಾಡಹಗಲೇ ಬೀದರ್ ಮತ್ತು ಮಂಗಳೂರಲ್ಲಿ ಬ್ಯಾಂಕ್ ದರೋಡೆ ಪ್ರಕರಣ ಬೆನ್ನಲ್ಲೇ ಶಿವಮೊಗ್ಗದಲ್ಲೂ ಎಟಿಎಂನಲ್ಲಿನ ರಬ್ಬರಿಗೆ ಕಳ್ಳ ಪ್ರಯತ್ನ ನಡೆಸಿರುವುದು ಬೆಳಕಿಗೆ ಬಂದಿದೆ.
ನಗರದ ನೆಹರೂ ರಸ್ತೆಯಲ್ಲಿನ ಕೆನರಾ ಬ್ಯಾಂಕ್ ಎಟಿಎಂ ಕಳ್ಳತನ ಮಾಡಲು ಖದೀಮರು ಯತ್ನಿಸಿದ್ದಾರೆ. ಅಷ್ಟರಲ್ಲಿ ಎಟಿಎಂ ಅಲರಾಂ ಶಬ್ದ ಮಾಡಿದೆ. ಆಗ ಕಳ್ಳ ಸ್ಥಳದಿಂದ ಪರಾರಿಯಾಗಿದ್ದಾನೆ.
ಎಟಿಎಂನಿಂದ ಸೈರನ್ ಬರುತ್ತಿದ್ದಂತೆ ಸ್ಥಳಕ್ಕೆ ೧೧೨ ಪೊಲೀಸರು ಸೇರಿದಂತೆ ಕೋಟೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಎಟಿಎಂ ಮಷಿನ್ ಓಪನ್ ಮಾಡಿ ಹಣ ತೆಗೆದು ಹೋಗುವ ಯತ್ನದಲ್ಲಿದ್ದಾಗ ಸೈರನ್ ಕೂಗಿದ್ದರಿಂದ ಕಳ್ಳ ಓಡಿ ಹೋಗಿದ್ದಾನೆ. ಇದರಿಂದ ಎಟಿಎಂನಲ್ಲಿ ಯಾವುದೇ ಹಣ ಕಳ್ಳತನ ಆಗಿಲ್ಲ.
ಎಟಿಎಂನಲ್ಲಿ ಸಿಸಿ ಕ್ಯಾಮರಗಳನ್ನು ಅಳವಡಿಸಲಾಗಿದೆ. ಎಟಿಎಂ ಕಳ್ಳತನ ಯತ್ನದ ಮಾಹಿತಿ ಸಿಕ್ಕ ಕೂಡಲೇ ಬ್ಯಾಂಕ್ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ಬ್ಯಾಂಕಿನ ಪ್ರಮುಖರಿಗೆ ಮಾಹಿತಿ ನೀಡಿದ್ದಾರೆ. ಅವರ ದೂರಿನ ಮೇರೆಗೆ ಕಾರ್ಯಾಚರಿಸಿದ ಪೊಲೀಸರು ಆರೋಪಿ ಬಿಹಾರ ಮೂಲದ ಮೊಹಮ್ಮದ್ ವಾಸೀಂ ಬಿನ್ ಅಲಿಹಸನ್ (೨೨) ಬಂದಿಸಿದ್ದಾರೆ. ಪೋಲೀಸರ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಪ್ರಶಂಸಿದ್ದಾರೆ.