ಶಿವಮೊಗ್ಗ .ಜ.27 :: ಜಗತ್ತು ಕೆಟ್ಟಿದೆ ಅನ್ನುವುದಕ್ಕಿಂತ ನಾನು ಕೆಡದೆ ಇರುವುದು ಹೇಗೆ ಅಂತ ಮೊದಲು ಯೋಚಿಸಬೇಕು. ೧೨ನೇ ಶತಮಾನದಲ್ಲಿ ಶರಣರು ಮಾಡಿದ್ದೂ ಕೂಡ ಇದೆ ಕೆಲಸವನ್ನು ಎಂದು ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಹೇಳಿದರು.
ಶಿವಮೊಗ್ಗ ಬಸವ ಕೇಂದ್ರದಲ್ಲಿ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕ ಆಯೋಜಿಸಿದ್ದ ಮೂರನೇ ಶರಣ ಸಾಹಿತ್ಯ ಸಮ್ಮೇಳನದ ಸಮಾರೋಪ ಭಾಷಣ ಮಾಡಿದ ಅವರು, ಇನ್ನೊಬ್ಬರ ದೋಷವನ್ನು ಎತ್ತಿ ಹೇಳಬಾರದು ಅಂತ ಅಲ್ಲ, ಹೇಳುವ ನೈತಿಕತೆ ನಮ್ಮಲ್ಲಿ ಇದ್ದೀಯ ಅಂತ ಮೊದಲು ನಾವು ಪ್ರಶ್ನೆ ಮಾಡ್ಕೊಬೇಕು ಎಂದರು.
ಮೊದಲು ನಮ್ಮ ಡೊಂಕುಗಳನ್ನು, ನಮ್ಮ ತಪ್ಪುಗಳನ್ನು ನಾವು ತಿದ್ದಿಕೊಳ್ಳೋಣ ಅನಂತರ ಬೇರೆಯವರ ಡೊಂಕು ತಿದ್ದೋಣ ಎಂಬುದು ವಚನಕಾರರು ಹಾಗೂ ಬಸವಣ್ಣನವರ ಆಶಯ ಎಂದರು.
೧೨ ನೇ ಶತಮಾನದ ಯಾವುದೇ ಶರಣರನ್ನು ಹಾಗೂ ಅವರ ವಚನಗಳನ್ನು ಗಮನಿಸಿದಾಗ, ಮೊದಲು ತಮ್ಮನ್ನು ತಿದ್ದುಕೊಂಡು ನಂತರ ಅವರು ಲೋಕವನ್ನು ತಿದ್ದಿದವರು.
ನಾನು ಸರಿ ಇದ್ದಲ್ಲಿ ಮಾತ್ರ ಬೇರೆಯವರಿಗೆ ಹೇಳುವ ನೈತಿಕತೆ ಇರುತ್ತದೆ. ನಾನೆ ಸರಿ ಇಲ್ಲ ಅಂದಮೇಲೆ ಬೇರೆ ಹೇಗೆ ಹೇಳುವುದು.
ಬಸವಣ್ಣ, ಬುದ್ಧ, ಗಾಂಧೀ, ಅಂಬೇಡ್ಕರ್ ಅವೆಲ್ಲ ಮಾಡಿದ್ದೂ ಇದೆ. ಅವರ ನಡೆ- ನುಡಿ ಒಂದಾಗಿದ್ದ ಕಾರಣದಿಂದಲೆ ಮಹಾನ್ ಪುರುಷರಾದವರು ಎಂದು ವಿಶ್ಲೇಷಿಸಿದರು.
ಸಮ್ಮೇಳನದ ಸಾನಿಧ್ಯವಹಿಸಿದ್ದ ಚಿಕ್ಕಮಗಳೂರು ಬಸವ ಮಂದಿರ ಹಾಗೂ ಶಿವಮೊಗ್ಗ ಬಸವಕೇಂದ್ರದ
ಶ್ರೀ ಮ.ನಿ.ಪ್ರ. ಡಾ. ಬಸವ ಮರುಳಸಿದ್ದ ಸ್ವಾಮೀಜಿ ಆಶೀರ್ವಚನ ನೀಡಿ, ಹತ್ತೊಂಭತ್ತನೆಯ ಶತಮಾನದಿಂದ ಇಂದಿನವರೆಗೂ ಹಲವರು ಆಧುನಿಕ ವಚನಗಳನ್ನು ರಚಿಸಿದ್ದಾರೆ. ರಚಿಸುತ್ತಿದ್ದಾರೆ. ಅವುಗಳಲ್ಲಿ ಬಹುತೇಕ ವಚನಗಳು, ವಚನ ಶೈಲಿಯ ರಚನೆಗಳೆನಿಸುತ್ತವೆಯೇ ಹೊರತು ನಿಜ ವಚನಗಳೆನಿಸುವುದಿಲ್ಲ ಎಂದರು.
ಕೆಲವು ವಚನಕಾರರಂತೂ ಟೊಳ್ಳು ವ್ಯಕ್ತಿತ್ವದ ಹಣವಂತರನ್ನು, ನೇತಾರರನ್ನು ಹೊಗಳಿ ವಚನ ಶೈಲಿಯಲ್ಲಿ ಕೃತಿಗಳನ್ನು ರಚಿಸಿ ಆಧುನಿಕ ವಚನಕಾರರೆಂದು ಕರೆದುಕೊಂಡಿದ್ದಾರೆ ಎಂದು ವಿಮರ್ಶಿಸಿದರು.
ಇಂಥವರನ್ನು ವಚನಕಾರರೆಂದು ಕರೆಯುವುದು ವಚನ ಪರಂಪರೆಗೆ ಮಾಡುವ ಅವಮಾನವೆಂದೇ ನಮ್ಮ ಭಾವನೆ. ಇದರ ನಡುವೆ, ಕೆಲವರಾದರೂ ಆಧುನಿಕ ವಚನಕಾರರು ಬದ್ಧತೆಯ ಬದುಕು ನಡೆಸುತ್ತ, ತಮ್ಮ ಆತ್ಮದ ದನಿಗಳನ್ನು ವಚನದ ಮೂಲಕ ಅಭಿವ್ಯಕ್ತಿಸಿದ್ದಾರೆ.
ಇವರನ್ನು ಆಧುನಿಕ ವಚನಕಾರರೆಂದರೆ ಯಾವ ತಪ್ಪೂ ಇಲ್ಲ! ಅಂತಹವರ ಸಂಖ್ಯೆ ಬಹಳ ಕಡಿಮೆ ಎಂದರು.
ಈ ಕಡಿಮೆ ಸಂಖ್ಯೆಯವರ ಸಾಲಿನಲ್ಲಿ, ಶರಣ ಪರಂಪರೆಯ ಮಠಗಳೊಂದಿಗೆ, ಸಾಧಕರೊಂದಿಗೆ ನಿರಂತರ ಸಂಪರ್ಕದಲ್ಲಿರುವ, ಸಮ್ಮೇಳನಾಧ್ಯಕ್ಷೆ ತಾಯಿ ದಾಕ್ಷಾಯಣಿ ಜಯದೇವಪ್ಪನವರೂ ನಿಂತಿದ್ದಾರೆ ಎನ್ನುವುದು ನಮಗೆ ಹೆಮ್ಮೆಯ ಸಂಗತಿ ಎಂದರು.
ಸಮ್ಮೇಳನಾಧ್ಯಕ್ಷೆ ದಾಕ್ಷಾಯಣಿ ಜಯದೇವಪ್ಪ, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷರಾದ ಆರ್.ಎಸ್. ಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್, ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಮಹಾದೇವಿ ಇನ್ನಿತರರು ವೇದಿಕೆಯಲ್ಲಿ ಇದ್ದರು.