ಶಿವಮೊಗ್ಗ, ಜ.25:
ಬಡವರ ಹಾಗೂ ಕೂಲಿ ಕಾರ್ಮಿಕರ ಆರ್ಥಿಕ ಅವಶ್ಯಕತೆಗಳ ಹಿನ್ನೆಲೆ ಹಾಗೂ ಅವರ ಹಿತ ಚಿಂತನೆಗಾಗಿ ಶಿವಮೊಗ್ಗ ಬೊಮ್ಮನಕಟ್ಟೆ ಮುಖ್ಯ ರಸ್ತೆಯಲ್ಲಿ ಶ್ರೀರಕ್ಷೆ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಅನ್ನು ಆರಂಭಿಸಲಾಗಿದೆ. ಅದನ್ನು ನಾಳೆ ಬೆಳಗ್ಗೆ 11 ಗಂಟೆಗೆ ಸೊಸೈಟಿ ಆವರಣದಲ್ಲಿ ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಅವರು ಉದ್ಘಾಟಿಸಲಿದ್ದಾರೆ ಎಂದು ಸೊಸೈಟಿಯ ಅಧ್ಯಕ್ಷ ವೀರೇಶ್ ಚಿತ್ತರಗಿ ತಿಳಿಸಿದರು.
ಅವರು ಇಂದು ಬೆಳಿಗ್ಗೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಸಂಸ್ಥೆ ಬೊಮ್ಮನಕಟ್ಟೆ ಆಶ್ರಯ ಬಡಾವಣೆಯಲ್ಲಿರುವ ಬಡವರ ಹಾಗೂ ಕೂಲಿ ಕಾರ್ಮಿಕರ ಹಿತದೃಷ್ಟಿಯ ಉದ್ದೇಶದಿಂದ, ಅವರಲ್ಲಿ ಉಳಿತಾಯ ಹಾಗೂ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಉದ್ದೇಶದಿಂದ ಮತ್ತು ಸಣ್ಣಪುಟ್ಟ ವ್ಯಾಪಾರಸ್ಥರ ವ್ಯವಹಾರ ಅಭಿವೃದ್ಧಿಗೋಸ್ಕರ ಸೊಸೈಟಿಯನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.
ಈಗಾಗಲೇ 450ಕ್ಕೂ ಹೆಚ್ಚು ಠೇವಣಿದಾರರನ್ನು ನಮ್ಮ ಸಂಸ್ಥೆ ಹೊಂದಿದ್ದು ಸಂಸ್ಥೆಯ ಸದಸ್ಯರಿಗೆ ಉಳಿತಾಯ ಖಾತೆ, ಫಿಗ್ನಿ ಠೇವಣಿ, ಅದರ ಮೇಲೆ ಸಾಲ, ನಿಶ್ಚಿತ ಠೇವಣಿ ಹಾಗೂ ಅದರ ಮೇಲೆಯೂ ಸಾಲ, ಮಾಸಿಕ ಆದಾಯ ಯೋಜನೆ ಮತ್ತು ಈ ಸ್ತಂಪಿಂಗ್ ಪ್ರಾರಂಭಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದರು.
ಸಂಸ್ಥೆಯ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸದಸ್ಯರಿಗೆ ವಿಶೇಷವಾಗಿ ಅಪಘಾತ ವಿಮೆ, ಮರಣೋತ್ತರ ಕ್ಷೇಮಾಭಿವೃದ್ಧಿ ನಿಧಿ ಮತ್ತು ಯಶಸ್ವಿನಿ ಆರೋಗ್ಯ ಯೋಜನೆಯಂತಹ ಹಲವಾರು ಯೋಜನೆಗಳನ್ನು ಕೊಡುವ ಉದ್ದೇಶವನ್ನು ಹೊಂದಿದೆ. ಸಂಸ್ಥೆ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಲು ಸಿದ್ಧತೆ ನಡೆಸಲಾಗಿದೆ ಎಂದು ವೀರೇಶ್ ಹೇಳಿದರು.
ನಾಳೆ ನಡೆಯಲಿರುವ ಕಾರ್ಯಕ್ರಮದಲ್ಲಿ ಸಚಿವರಾದ ಮಧು ಬಂಗಾರಪ್ಪ, ಶಾಸಕರಾದ ಚನ್ನಬಸಪ್ಪ ಶಾರದಾ ಪೂರ್ಯಾ ನಾಯಕ್, ಡಾ. ಧನಂಜಯ ಸರ್ಜಿ, ಡಿಎಸ್ ಅರುಣ್ ಹಾಗೂ ವಿಶೇಷವಾಗಿ ಕೆಎಸ್ ಈಶ್ವರಪ್ಪ ಡಾ. ಆರ್ ಎಂ ಮಂಜುನಾಥಗೌಡ, ಎಸ್ಪಿ ದಿನೇಶ್, ಎಂ. ಶ್ರೀಕಾಂತ್, ಸೂಡಾ ಅಧ್ಯಕ್ಷ ಸುಂದರೇಶ್, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಹರೀಶ್, ನಿರ್ದೇಶಕರಾದ ವಾಸುದೇವ್ , ಮುರುಳಿಧರ್, ಜಯದೀಪ್, ಕಿರಣ್ ಕುಮಾರ್, ದ್ವಾರಕೇಶ್, ಶ್ರೀಧರ ಮೂರ್ತಿ, ಪ್ರದೀಪ್, ಪ್ರಶಾಂತ್, ಸಂತೋಷ್, ಮಂಜುಳಾ ಪಾಂಡೆ, ಅನಿಲ ಜ್ಯೋತಿರ್ಮಠ ಉಪಸ್ಥಿತರಿದ್ದರು.