ಶಿವಮೊಗ್ಗ ಜ.22::ಸಾಗರ : ಕುವೆಂಪು ವಿಶ್ವವಿದ್ಯಾಲಯದಲ್ಲಿ ಭ್ರಷ್ಟಾಚಾರ ಎಸಗಿ ಆರ್ಥಿಕ ನಷ್ಟ ಉಂಟು ಮಾಡಿರುವ ಆಡಳಿತ ವಿಭಾಗದ ಕುಲಸಚಿವ ಎ.ಎಲ್.ಮಂಜುನಾಥ್, ಪರೀಕ್ಷಾಂಗ ವಿಭಾಗದ ಕುಲಸಚಿವ ಪ್ರೊ. ಗೋಪಿನಾಥ್ ಅವರನ್ನು ಅಮಾನತ್ತುಗೊಳಿಸಿ ಸೂಕ್ತ ತನಿಖೆ ನಡೆಸುವಂತೆ ಬುಧವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ಶಿವಮೊಗ್ಗ ಮತ್ತು ಸಾಗರ ವಿಭಾಗದ ಪ್ರಮುಖರು ಶಿವಮೊಗ್ಗದಲ್ಲಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ದೂರ ಶಿಕ್ಷಣ ಪದವಿ ಕೋರ್ಸ್ಗಳನ್ನು ಎಂಎಲ್ಎಸ್ ತಂತ್ರಾಂಶದ ಮೂಲಕ ಪ್ರವೇಶಾತಿ ಪರೀಕ್ಷೆ ಮತ್ತು ನಿರ್ವಹಣೆಗೆ ಬೆಂಗಳೂರಿನ ಖಾಸಗಿ ಕಂಪನಿಯೊಂದಕ್ಕೆ ಗುತ್ತಿಗೆ ನೀಡಿದ್ದು, ಗುತ್ತಿಗೆ ದರ ಅತ್ಯಂತ ದುಬಾರಿ ಎಂದು ಸಮಿತಿ ತಿಳಿಸಿದೆ. ಸಮಿತಿಯ ಪ್ರಮುಖರಾದ ಗೋಪಿನಾಥ್ ಮತ್ತು ಎಸ್.ಎಲ್.ಮಂಜುನಾಥ್ ಅವರ ವಿರುದ್ದ ಸೂಕ್ತ ತನಿಖೆ ನಡೆಸಿ ವಿವಿಗೆ ಆಗಿರುವ ಆರ್ಥಿಕ ನಷ್ಟವನ್ನು ಸರಿಪಡಿಸಬೇಕು ಎಂದು ಮನವಿಯಲ್ಲಿ ಕೇಳಲಾಗಿದೆ.
ದೂರ ಶಿಕ್ಷಣವನ್ನು ಅಧ್ಯಯನ ಕೇಂದ್ರಗಳ ಮೂಲಕ ನಡೆಸಲಾಗುತ್ತಿದ್ದು, ಅಧ್ಯಯನ ಕೇಂದ್ರಗಳು ಕೋಟ್ಯಾಂತರ ರೂಪಾಯಿ ಬಾಕಿ ಉಳಿಸಿ ಕೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರಗಳ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲು ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಆದರೆ ಅಧ್ಯಯನ ಕೇಂದ್ರಗಳಿಗೆ ಅಂಕಪಟ್ಟಿ ವಿತರಿಸಲು ಅವಕಾಶ ಕಲ್ಪಿಸಲಾಗಿದೆ. ಈ ಪ್ರಕರಣದಲ್ಲಿ ಸಹ ವಿಶ್ವವಿದ್ಯಾಲಯಕ್ಕೆ ದೊಡ್ಡಮಟ್ಟದ ಆರ್ಥಿಕ ನಷ್ಟ ಉಂಟಾಗಿದೆ. ಕುವೆಂಪು ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದಲ್ಲಿ ಸುಮಾರು ೫೦ ಲಕ್ಷ ರೂ. ಅವ್ಯವಹಾರ ನಡೆದಿದ್ದು ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸ್ಗೆ ದೂರು ನೀಡಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಅಂಕಪಟ್ಟಿ ಮುದ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿರ್ದೇಶನವನ್ನು ಬದಿಗೊತ್ತಿ ಖಾಸಗಿಯವರಿಗೆ ನೀಡಲಾಗಿದೆ. ಕುವೆಂಪು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ವ್ಯಾಸಂಗ ಪೂರ್ಣಗೊಂಡಿದ್ದರೂ ಅವರಿಗೆ ಈತನಕ ನೈಜ ಅಂಕಪಟ್ಟಿ ನೀಡಿಲ್ಲ.
ಇದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ವಿಶ್ವವಿದ್ಯಾಲಯಕ್ಕೆ ಸಂಬಂಧಪಟ್ಟಂತೆ ಸುಮಾರು ೧೦ಕ್ಕೂ ಹೆಚ್ಚು ಬೇಡಿಕೆಗಳ ಮನವಿಯಲ್ಲಿ ವಿದ್ಯಾರ್ಥಿ ಪರಿಷತ್ ರಾಜ್ಯಪಾಲರಿಗೆ ನೀಡಿದೆ. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ವಿದ್ಯಾರ್ಥಿ ಪರಿಷತ್ನ ರಾಜ್ಯ ಕಾರ್ಯದರ್ಶಿ ಪ್ರವೀಣ್, ಎಸ್ಎಫ್ಡಿ ರಾಜ್ಯ ಸಂಚಾಲಕ ಅಭಿಷೇಕ್ ಎಂ. ಶೆಟ್ಟಿ ಇನ್ನಿತರರು ಹಾಜರಿದ್ದರು.