ಹೊಸನಗರ: ಸರ್ಕಾರಿ ಮತ್ತು ಅನುದಾನಿತ ಸೇರಿದಂತೆ ಕಿರಿಯ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅಕ್ಷರ ದಾಸೋಹ ಯೋಜನೆ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಿಸಿಊಟ ತಯಾರಕ ಸಿಬ್ಬಂದಿಗಳು ತಮ್ಮ ವಿವಿದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಹಶೀಲ್ದಾರ್ ಕಛೇರಿ ಎದುರು ಪ್ರತಿಭಟನೆ ನಡೆಸುವ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಅಕ್ಷರ ದಾಸೋಹ ಯೋಜನೆಯ ಬಿಸಿ ಊಟ ತಯಾರಿಕ ಫೆಡರೇಶನಿನ ರಾಜ್ಯ ಉಪಾಧ್ಯಕ್ಷ ಪರಮೇಶ್ವರ್ ಕೆ ಹೊಸಕೊಪ್ಪ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿ ಕಳೆದ 23 ವರ್ಷಗಳಿಂದ ಸರ್ಕಾರಿ ಮತ್ತು ಅನುದಾನಿತ ಕಿರಿಯ ಹಾಗು ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸುವ ಸಿಬ್ಬಂದಿಗಳಿಗೆ ಸರ್ಕಾರ ಅತ್ಯಂತ ಕಡಿಮೆ ಗೌರವ ಧನ ನೀಡುತ್ತಿದೆ. ಮುಖ್ಯ ಬಾಣಸಿಗನಿಗೆ ಮಾಸಿಕ ರೂ 3700 ಹಾಗೂ ಸಹಾಯಕ ಅಡುಗೆ ಸಿಬ್ಬಂದಿಗೆ ರೂ 3600 ಗೌರವಧನ ಸರ್ಕಾರ. ನಿಗದಿ ಪಡಿಸಿದ್ದು, ಇದು ಸಿಬ್ಬಂದಿಗಳಿಗೆ ಜೀವನ ಸಾಗಿಸಲು ಕಷ್ಟಸಾಧ್ಯ ಆಗಿದೆ.
ಮುಂಬರುವ 2025 -26ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಸಿಬ್ಬಂದಿಗಳ ಗೌರವಧನ ಹೆಚ್ಚಳ ಮಾಡಬೇಕು. ಸಿಬ್ಬಂದಿಗಳಿಗೆ ಮರಣ ಪರಿಹಾರ ಜಾರಿಗೊಳಿಸಬೇಕು. ನಿವೃತ್ತ ಹೊಂದಿದ ಸಿಬ್ಬಂದಿಗೆ ನೀಡುವ ಇಡುಗಂಟು ಹಣವನ್ನು ಕನಿಷ್ಟ ರೂ ಎರಡು ಲಕ್ಷ ರೂಪಾಯಿಗೆ ಏರಿಕೆ ಮಾಡುವುದು ಸೇರಿದಂತೆ ಹಲವು ವಿವಿಧ ಬೇಡಿಕೆಗಳನ್ನು ಈ ಬಾರಿಯ ಬಜೆಟ್ನಲ್ಲಿ ಜಾರಿಗೊಳಿಸಬೇಕು. ಅಲ್ಲದೆ ಕೆಲವು ಶಾಲೆಗಳಲ್ಲಿ ಬಿಸಿ ಊಟ ತಯಾರಿಕರಿಗೆ ವಿನಾಕಾರಣ ಕಿರುಕುಳ ನೀಡಿ, ಕೆಲಸದಿಂದ ವಜಾಗೊಳಿಸಿದ ಹಲವು ಪ್ರಕರಣಗಳು ನಡೆದಿದೆ. ಶಾಲೆಗಳಲ್ಲಿ ಅಡುಗೆ ಸಿಬ್ಬಂದಿಗಳು ತಮ್ಮ ಕರ್ತವ್ಯದಲ್ಲಿ ಲೋಪ ಎಸೆಗಿದ್ದರೆ ಅಂತವರಿಗೆ ನೋಟಿಸ್ ನೀಡಿ, ವಿವರಣೆ ಪಡೆದು ನಿಯಮಾನುಸಾರ ಕ್ರಮ ಕೈಗೊಳ್ಳಬೇಕೇ ಹೊರತು ಏಕಪಕ್ಷಿಯವಾಗಿ ಸಿಬ್ಬಂದಿಗಳನ್ನು ಕೆಲಸದಿಂದ ವಜಾಗೊಳಿಸಬಾರದು. ಅಲ್ಲದೆ, 2024 ಬರಗಾಲ ಕಾರ್ಯಕ್ರಮದ ವೇತನ ಶೀಘ್ರ ಬಿಡುಗಡೆ ಮಾಡಬೇಕು ಎಂದು ಅವರು ಸರಕಾರಕ್ಕೆ ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ತಾಲೂಕು ಬಿಸಿಯೂಟ ತಯಾರಿಕೆ ಸಿಬ್ಬಂದಿಗಳ ಫೆಡರೇಶನ್ ಅಧ್ಯಕ್ಷೆ ಸುಶೀಲಾ, ವನಜಾ ಬೇಳೂರು, ಶಕೀಲಾ, ರೂಪ ನೇತ್ರಾ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.