ಶಿವಮೊಗ್ಗ ಜ.18 ೮:: ಲಿಂಗಾಯತರು ಮಾತ್ರವಲ್ಲದೆ ಎಲ್ಲ ಸಮುದಾಯದ ಪ್ರೀತಿಗೆ ಒಳಗಾಗಿರುವ ಆನಂದಪುರದ ಬೆಕ್ಕಿನಕಲ್ಮಠವು ಮಲೆನಾಡು ಭಾಗದಲ್ಲಿ ನಿಜವಾದ ಅನುಭವ ಮಂಟಪ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಶಿವಮೊಗ್ಗದ ಬೆಕ್ಕಿನಕಲ್ಮಠದಲ್ಲಿ ಜಗದ್ಗುರು ಗುರುಬಸವ ಮಹಾಸ್ವಾಮಿಗಳವರ ಸ್ಮರಣೋತ್ಸವ ಸಮಿತಿ ಮತ್ತು ಭಕ್ತ ಮಂಡಳಿಯಿಂದ ಜಗದ್ಗುರು ಶ್ರೀ ಗುರುಬಸವ ಮಹಾಸ್ವಾಮಿಗಳವರ 113ನೇ ಪುಣ್ಯಸ್ಮರಣೋತ್ಸವ ಮತ್ತು ಶರಣ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಬೆಕ್ಕಿನಕಲ್ಮಠದ ಇತಿಹಾಸವನ್ನು ಗಮನಿಸಿದಾಗ 12ನೇ ಶತಮಾನದಲ್ಲಿ ಬಸವಾದಿ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನೆಡೆಯುತ್ತಿದೆ. ಶ್ರೇಷ್ಟವಾದ ಸಿದ್ದಾಂತವನ್ನು ಹೊಂದಿದ್ದು ಕಾಯಕದ ಮೂಲಕ ಎಲ್ಲರನ್ನೂ ಸೇರಿಸಿಕೊಂಡು ಅನುಭವ ಮಂಟಪವನ್ನು ಮರು ಸೃಷ್ಟಿ ಮಾಡಿದೆ ಎಂದರೆ ತಪ್ಪಾಗಲಾರದು ಎಂದು ಬಣ್ಣಿಸಿದರು.
ದೇವರಿಗೂ ಕನ್ನಡ ಕಲಿಸಿದವರು ವಚನಕಾರರು. ಬಸವಾದಿ ಶರಣರು ಜನರ ಬಳಿಗೆ ಹೋಗಿ ವಚನಗಳ ಮೂಲಕ ಸಮಾಜದಲ್ಲಿದ್ದ ಅನಿಷ್ಠ, ಮೇಲು-ಕೀಳು ಭಾವನೆಗಳನ್ನು ಕಿತ್ತೊಗೆದು ಸಾಮಾಜಿಕ ಕ್ರಾಂತಿ ಮಾಡಿದ್ದರು. ಆ ಮೂಲಕ ಸುಂದರ ಸಮಾಜ ನಿರ್ಮಾಣಕ್ಕೆ ಬಸವಾದಿ ಶರಣರು ಅಡಿಪಾಯ ಹಾಕಿಕೊಟ್ಟಿದ್ದರು. ಕಲ್ಯಾಣ ಕ್ರಾಂತಿ ಬಳಿಕ ಎಲ್ಲರಿಗೂ ಆಶ್ರಯ ಕೊಟ್ಟಿದ್ದು ಬೆಕ್ಕಿನ ಕಲ್ಮಠ. ಈ ಮಠ ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ ಎಂದರು.
ಪರಮತಪಸ್ವಿ ಗುರುಬಸವ ಶ್ರೀಗಳಿಗೆ ಹಾನಗಲ್ ಶ್ರೀಗಳ ಬಗ್ಗೆ ವಿಶೇಷ ಕಾಳಜಿ ಇತ್ತು. ಭಕ್ತರನ್ನು ಫೆÇೀಷಿಸುವ ಕೆಲಸವನ್ನು ಗುರುಬಸವ ಶ್ರೀಗಳು ಮಾಡಿದ್ದರು. ಅವರ ಹಾದಿಯಲ್ಲಿ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ ಮುನ್ನೆಡೆಯುತ್ತಿದ್ದು ಮಠಾಧೀಶರ ಪರಿಷತ್ ಮಾಡಿಕೊಂಡು ಸಮುದಾಯದ ಸೇವೆ, ದುಶ್ಚಟ ದೂರವಿಡಲು ಶ್ರೀಗಳು ಶ್ರಮಿಸುತ್ತಿರುವುದು ಅಭಿನಂದನೀಯ ಕಾರ್ಯವಾಗಿದೆ ಎಂದರು.