ಶಿವಮೊಗ್ಗ ಜ.17 :: ಚಾಮರಾಜ ಪೇಟೆಯಲ್ಲಿ ಗೋವುಗಳ ಕೆಚ್ಚಲನ್ನು ಕತ್ತರಿಸಿದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಬಿಜೆಪಿ ಮುಖಂಡರು, ಶಿವಮೊಗ್ಗದ ಗೋ ರಕ್ಷಾ ಪರಿವಾರದ ಕಾರ್ಯಕರ್ತರೊಡನೆ ಸೇರಿ ಇಂದು ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಚಾಮರಾಜಪೇಟೆಯಲ್ಲಿ ಗೋವಿನ ಕೆಚ್ಚಲುಗಳನ್ನು ಕತ್ತರಿಸಿ ವಿಕೃತಿ ಮೆರೆಯಲಾಗಿದೆ. ಇದು ಕೋಟ್ಯಂತರ ಭಾರತೀಯರ ಭಾವನೆಗಳಿಗೆ ಇಟ್ಟಿರುವ ಕೊಳ್ಳಿಯಾಗಿದೆ. ಕರುಳು ಹಿಂಡುವ ಇಂತಹ ದುಷ್ಕೃತ್ಯಗಳು ನಡೆಯದಂತೆ ಎಚ್ಚರವಹಿಸಬೇಕಾಗಿದೆ. ಕೂಡಲೇ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಆರೋಪಿ ಮಾನಸಿಕ ಖಿನ್ನತೆಯುಳ್ಳವನು. ಕುಡಿದ ಅಮಲಿನಲ್ಲಿ ಕೃತ್ಯವೆಸಗಿದ್ದಾನೆ ಎಂದು ಬಿಂಬಿಸಿ ದಿಕ್ಕು ತಪ್ಪಿಸಲಾಗುತ್ತಿದೆ. ನಿಜವಾಗಿಯೂ ಗೋವಿನ ಕೆಚ್ಚಲನ್ನು ಕತ್ತರಿಸಬೇಕೆಂದು ಮಾಡಿದ ತಪ್ಪಿದು. ಗೋ ಮಾಲೀಕರಿಗೆ ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ನೀಡಬೇಕು. ಗೋವನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಬೇಕು. ಗೋಶಾಲೆಯ ಅನುದಾನಗಳನ್ನು ನಿಲ್ಲಿಸಿರುವುದನ್ನು ತೆರವುಗೊಳಿಸಬೇಕು, ಗೋ ಹತ್ಯೆ ಕಾನೂನು ಜಾರಿಯಾಗಬೇಕು. ಆರೋಪಿ ದುರುಳರ ಬಂಧಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪ್ರತಿಭಟನೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಎಸ್.ಎನ್. ಚನ್ನಬಸಪ್ಪ, ಪ್ರಮುಖರಾದ ವಾಸುದೇವ್, ನಾರಾಯಣ ವರ್ಣೇಕರ್, ದೇವರಾಜ್, ದತ್ತಾತ್ರಿ, ರಾಜೇಶ್ ಗೌಡ, ಆನಂದರಾವ್ ಜಾಧವ್, ಮಾಲತೇಶ್, ರಮೇಶ್ ಜಾಧವ್, ದೀನದಯಾಳ್, ಜ್ಞಾನೇಶ್ವರ್, ಸುರೇಖಾ ಮುರಳೀಧರ್, ಸುನಿತಾ, ಚೈತ್ರಾ, ಲಕ್ಷ್ಮಿ, ಯಶೋದಾ, ಗೀತಾ ಲಕ್ಷ್ಮಿ ಮೊದಲಾವರಿದ್ದರು.