ಆನವಟ್ಟಿ : ಸೊರಬ ತಾಲ್ಲೂಕು ನೆಗವಾಡಿ ಗ್ರಾಮ ಸಮೀಪದ ಹಿರೇಮಾಗಡಿ ಕ್ರಾಸ್ನ ರಾಜ್ಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಜೀಪ್, ಕಂಬಗಳಿಗೆ ಡಿಕ್ಕಿ ಹೊಡೆದಿದ್ದರಿಂದ ಮೂವರು ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸೋಮವಾರ ರಾತ್ರಿ 11.30ರ ಸುಮಾರಿಗೆ ಘಟನೆ ನಡೆದಿದೆ.
ಕಣಸೋಗಿಯಿಂದ ಎಸ್.ಎನ್.ಕೊಪ್ಪ ಕಡೆಗೆ ಹೋಗುತ್ತಿದ್ದ ಜೀಪ್ನಲ್ಲಿ ಕಬ್ಬೂರು, ಎಸ್.ಎನ್. ಕೊಪ್ಪ, ಕಣಸೋಗಿ ಗ್ರಾಮದ 8 ಜನ ಪ್ರಯಾಣಿಸುತ್ತಿದ್ದರು. ಹೆದ್ದಾರಿ ಅಂಚಿನಲ್ಲಿದ್ದ ಸಿಮೆಂಟ್ ಕಂಬಗಳಿಗೆ ಜೀಪ್ ಡಿಕ್ಕಿ ಹೊಡೆದು ಗದ್ದೆಗೆ ಉರುಳಿದೆ.
ಚಿಕ್ಕಕಬ್ಬೂರು ಗ್ರಾಮದ ಹನುಮಂತಪ್ಪ (50) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಲ್ಲೂರು ವಡ್ಡಿಗೇರಿ ಗ್ರಾಮದ ಲಕ್ಷ್ಮವ್ವ (46) ಮತ್ತು ಕಣಸೋಗಿ ಗ್ರಾಮದ ರೇಣುಕಮ್ಮ (65) ಶಿಕಾರಿಪುರದ ಆಸ್ಪತ್ರೆಯಲ್ಲಿ ಮೃತಪಟ್ಟರು. ಆನವಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.