ಶಂಕರಘಟ್ಟ ಜ.11 :ಸ್ವಯಂ ತಪಾಸಣೆಯಿಂದ ಸ್ತನ ಕ್ಯಾನ್ಸರ್ ನ್ನು ಬೇಗನೆ ಪತ್ತೆ ಹಚ್ಚಿ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಲು ಸಾಧ್ಯ ಎಂದು ತೀರ್ಥಹಳ್ಳಿ ಎಂಐ ಒ ಆಸ್ಪತ್ರೆಯ ತಜ್ಞೆ ಡಾ.ಭವ್ಯ ಹೇಳಿದರು .
ಅವರು ಶನಿವಾರ ಬೆಳಗ್ಗೆ ಶಿವಮೊಗ್ಗದ ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ ,ಮಥುರಾ ಪ್ಯಾರಡೈಸ್ ರಜತೋತ್ಸವ ಸಮಿತಿ, ತೀರ್ಥಹಳ್ಳಿಯ ಎಂಐಒ ಆಸ್ಪತ್ರೆ ಮತ್ತು ಸಾಗರದ ಶಾರದಾ ಮಹಿಳಾ ಮಂಡಳಿ ಶೃಂಗೇರಿ ಮಠ, ಇವರ ಸಂಯುಕ್ತ ಆಶ್ರಯದಲ್ಲಿ ತೀರ್ಥಹಳ್ಳಿಯ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಸಾಮಾನ್ಯ ಆರೋಗ್ಯ ಹಾಗೂ ಕ್ಯಾನ್ಸರ್ ಕುರಿತ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷತೆಯ ಮೂಲಕ ವಿವರಿಸಿ ಮಾತನಾಡಿದರು.
ಕ್ಯಾನ್ಸರ್ ಮಹಿಳೆಯರನ್ನು ಕಾಡುವ ಭಯ ಹುಟ್ಟಿಸುವ ಕಾಯಿಲೆಯಾಗಿದೆ. ಆದರೆ ಮುಂಜಾಗ್ರತೆಯಿಂದ ಬೇಗನೆ ಕಂಡುಹಿಡಿದರೆ ಖಂಡಿತ ಗುಣಮುಖರಾಗುವ ಬಹುದು, ವಿಶೇಷವಾಗಿ ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸುತ್ತದೆ ಎಂದರು.
ಮಹಿಳೆಯರು ಕನ್ನಡಿ ಮುಂದೆ ನಿಂತು ತಮ್ಮ ಸ್ತನಗಳನ್ನು ತಾವೇ ತಪಾಸಣೆ ಮಾಡಿಕೊಂಡು ಗಂಟುಗಳ ಪತ್ತೆ ಹಚ್ಚಿ ಬೇಗನೆ ಚಿಕಿತ್ಸೆ ಪಡೆದು ಗುಣಮುಖರಾಗಬಹುದು ಎಂದರು .
ಇದೇ ಸಂದರ್ಭದಲ್ಲಿ ಸಾಗರದ ಶೃಂಗೇರಿ ಮಠದ ಶಾರದ ಮಂಡಳಿಯ ಮುಖ್ಯಸ್ಥೆ ಹಾಗು ಸಮಾಜ ಸೇವೆಕಿ ಸಹೃದಯಿ ರಾಜಶ್ರೀ ಅಶ್ವಿನಿ ಕುಮಾರ್ ಅವರನ್ನು ಆಸ್ಪತ್ರೆ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನಿತರಾಗಿ ಮಾತನಾಡಿದ ರಾಜಶ್ರೀ ಅಶ್ವಿನಿ ಕುಮಾರ್ ಅವರು ಕ್ಯಾನ್ಸರ್ ಬಗ್ಗೆ ಮಹಿಳೆಯರು ತಲ್ಲಣ ಗೊಳ್ಳುವ ಕಾಲವಿತ್ತು ,ಈಗ ಇದಕ್ಕೆ ವಿವಿಧ ರೀತಿಯ ಆಧುನಿಕ ಚಿಕಿತ್ಸಾ ಪದ್ಧತಿಗಳಿವೆ .ರೋಗ ಬೇಗ ಪತ್ತೆ ಹಚ್ಚುವುದರಿಂದ ಕ್ಯಾನ್ಸರನ್ನು ಗುಣಪಡಿಸಬಹುದು ಈ ನಿಟ್ಟಿನಲ್ಲಿ ಮಹತ್ವದ ವಿಷಯಗಳನ್ನು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆಎಂದರು.
ಶೃಂಗೇರಿ ಮಠದ ಶಾರದಾ ಮಹಿಳಾ ಮಂಡಳಿಯ ಸುಮಾರು ೬೦ಕ್ಕೂ ಹೆಚ್ಚು ಮಹಿಳೆಯರು ಈ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಾಗರದ ಪ್ರಮುಖರಾದ ಮಹಾಬಲೇಶ್ವರ, ಗೋಪಿ ದೀಕ್ಷಿತ್, ತರುಣೋದಯ ಘಟಕದ ಶ್ರಿವತ್ಸಾ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ದಿವ್ಯ ಜ್ಯೋತಿ ಎನ್, ಅಂಕುಶ್ ಸೇರಿದಂತೆ ಹಲವರಿದ್ದರು. ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.