ಶಿವಮೊಗ್ಗ,ಜ.11 : ಶಿವಮೊಗ್ಗ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿ ನಿರ್ದೇಶಕರ ಚುನಾವಣೆ ನಾಳೆ ನಡೆಯಲಿದ್ದು, ಚುನಾವಣೆಯನ್ನು ಪಾರದರ್ಶಕವಾಗಿ ನಡೆಸುವ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಚುನಾವಣೆಗೆ ಸ್ಪರ್ಧಿಸಿರುವ ಎಂ. ಉಮಾಶಂಕರ ಉಪಾಧ್ಯ ಹಾಗೂ ಎಸ್.ಪಿ.ದಿನೇಶ್ ತಂಡ ಜಿಲ್ಲಾಧಿಕಾರಿಗಳಿಗೆ ಹಾಗೂ ಸಹಕಾರ ಸಂಘಗಳ ಉಪನಿಬಂಧಕರಿಗೆ ಆಗ್ರಹಿಸಿದೆ.
ಈ ಕುರಿತು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್.ಪಿ.ದಿನೇಶ್ ಈ ಬಾರಿಯ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಪಟ್ಟಿಯನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಸತ್ತವರು, ಊರುಬಿಟ್ಟವರು, ಹೊರ ಜಿಲ್ಲೆಯವರು ಹಾಗೂ ವಿದೇಶದಲ್ಲಿರುವ ಮತದಾರರನ್ನು ಸೇರಿಸಲಾಗಿದೆ. ಆದ್ದರಿಂದ ಈ ಎಲ್ಲಾರನ್ನು ತೆಗೆದು ನೈಜ ಮತದಾರರ ಪಟ್ಟಿಯನ್ನು ಸಿದ್ದಪಡಿಸಿ ಚುನಾವಣೆ ನಡೆಸಬೇಕು ಎಂದರು.
ಇದಲ್ಲದೆ ಈ ಚುನಾವಣೆಯಲ್ಲಿ ಈಗಾಗಲೇ ಅಕ್ರಮಗಳು ನಡೆಯುತ್ತಿವೆ ಎಂದು ಕೇಳಿಬರುತ್ತಿದೆ. ಕೆಲವು ಅಭ್ಯರ್ಥಿಗಳು ಮತದಾರರಿಗೆ ಹಣದ ಮತ್ತು ವಸ್ತುಗಳ ಆಮೀಷವನ್ನು ಒಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ. ಕೂಡಲೇ ಇದನ್ನು ನಿಲ್ಲಿಸಬೇಕು ಎಂದರು.
ಬ್ಯಾಂಕಿನ ಸಿಬ್ಬಂದಿಗಳನ್ನು ಚುನಾವಣಾ ಕೆಲಸಕ್ಕೆ ಬಳಸಿಕೊಳ್ಳಬಾರದು. ಮತಪತ್ರ ಕೊಡುವ ಎಲ್ಲಾ ಕೊಠಡಿಗಳಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಬೇಕು. ಮತ ಏಣಿಕೆಯ ಸಂಪೂರ್ಣ ಪ್ರಕ್ರಿಯೆ ಕೂಡ ಸಿ.ಸಿ.ಕ್ಯಾಮರಾದ ಕಣ್ಗಾವಲಿನಲ್ಲಿ ನಡೆಯಬೇಕು. ನಕಲಿ ಮತದಾನ ನಡೆಯುವ ಸೂಚನೆಗಳಿದ್ದು, ಇವರ ನಕಲಿ ಮತದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುವುದು ಸೇರಿದಂತೆ ಪರಾದರ್ಶಕವಾಗಿ ನಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು.
ಚುನಾವಣೆಯಲ್ಲಿ ಸ್ಪರ್ಧಿಸಿರುವ ಮಾಜಿ ಶಾಸಕ ಕೆ.ಜಿ.ಕುಮಾರ ಸ್ವಾಮಿ ಮಾತನಾಡಿ, ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯಲ್ಲಿ ೧೫ಸ್ಥಾನಗಳಿದ್ದು, ೩,೦೬೩ ಮತದಾರರಿದ್ದಾರೆ. ಕಳೆದ ಅವಧಿಯಲ್ಲಿ ಆಡಳಿತದಲ್ಲಿದ್ದವರು ನಿವೇಶನ ಸೇರಿದಂತೆ ಸದಸ್ಯರಿಗೆ ಯಾವ ಅನುಕೂಲವನ್ನು ಮಾಡಲಿಲ್ಲ. ಆಡಳಿತ ಮಂಡಳಿಯಲ್ಲಿ ಸಂಪೂರ್ಣ ನಿಷ್ಕ್ರೀಯ ವಾಗಿತ್ತು ಎಂದು ಆರೋಪಿಸಿದರು.
ಈ ಎಲ್ಲಾ ಹಿನ್ನಲೆಯಲ್ಲಿ ಸದಸ್ಯರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲು ಮತ್ತು ನಿವೇಶನ ಹಾಗೂ ಮನೆ ನೀಡುವ ಉದ್ದೇಶದಿಂದ ನಾವು ಹೊಸ ತಂಡವನ್ನೇ ಕಟ್ಟಿಕೊಂಡಿದ್ದೇವೆ. ನಮ್ಮ ಹೊಸ ತಂಡ ಅಧಿಕಾರಕ್ಕೆ ಬಂದರೆ ಮೂರು ಸಾವಿರ ನಿವೇಶನವನ್ನು ಸದಸ್ಯರಿಗೆ ಹಂಚುತ್ತೇವೆ. ಮತ್ತು ಎಲ್ಲಾ ರೀತಿಯ ಸೌಲಭ್ಯಗಳನ್ನು ಸದಸ್ಯರಿಗೆ ನೀಡುತ್ತೇವೆ. ನಮ್ಮನ್ನೆ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ನಮ್ಮ ತಂಡದಲ್ಲಿ ಎಸ್.ಡಿ.ಅನಂತರಾಮ್ಸಿಂಗ್, ಎಂ.ಉಮಾಶಂಕರ್ ಉಪಾಧ್ಯ ಹೆಚ್.ತುಳಸೀರಾಮ ಪ್ರಸಾದ್, ಎಸ್.ಪಿ.ದಿನೇಶ್, ನರಸಿಂಹ ಗಂಧದಮನೆ, ಅ.ಮಾ.ಪ್ರಕಾಶ್, ಬಿ.ವಿ.ಭೀಮೇಶ್,ಎಲ್.ಕೆ.ಲಕ್ಷ್ಮೀನಾರಾಯಣ, ಕೆ.ಈ.ಸೋಮಶೇಖರ್, ಕೆ.ಜಿ.ಕುಮಾರಸ್ವಾಮಿ, ನಾಗರಾಜ್ ಬಿ.ಎಸ್., ಉಮೇಶ ಪುಟ್ಟಪ್ಪ, ಎಂ.ಆರ್.ಪ್ರಕಾಶ್, ಕವಿತಾ ಈ. ಶ್ರೀನಿವಾಸ್, ವೇದವತಿ ಕೆ.ಎಸ್. ಇವರುಗಳು ಸ್ಪರ್ಧಿಸಿದ್ದಾರೆ.ಜ.೧೨ರ ಬೆಳಿಗ್ಗೆ ೯ರಿಂದ ಸಂಜೆ ೪ರವರೆಗೆ ಕೋರ್ಟ್ ಮುಂಭಾಗದಲ್ಲಿರುವ ನ್ಯಾಷನಲ್ ಹೈಸ್ಕೂಲ್ ಆವರಣದಲ್ಲಿ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ತಂಡದ ಸದಸ್ಯರು ಹಾಜರಿದ್ದರು.