ಶಿವಮೊಗ್ಗ,ಜ.9: ಶರಾವತಿ ಜಲವಿದ್ಯುತ್ ಯೋಜನೆಯಿಂದ ಭೂಮಿ ಕಳೆದುಕೊಂಡ ರೈತರ ಸಮಸ್ಯೆಗಳ ಕುರಿತು ಸಂಸದ ಬಿ.ವೈ.ರಾಘವೇಂದ್ರ ಅವರು, ಅರಣ್ಯ ಸಚಿವ ಈಶ್ವರಖಂಡ್ರೆ ಅವರನ್ನು ಭೇಟಿಯಾಗಿ ಇಂದು ಚರ್ಚೆ ನಡೆಸಿದ್ದಾರೆ.
1958-1964ರ ಅವಧಿಯಲ್ಲಿ ನಿರ್ಮಾಣಗೊಂಡ ಶರಾವತಿ ಜಲವಿದ್ಯುತ್ ಯೋಜನೆಯಿಂದ ರೈತರು ತಮ್ಮ ಭೂಮಿಯನ್ನು ಕಳೆದುಕೊಂಡು ಸಮಸ್ಯೆ ಎದುರಿಸುತ್ತಿದ್ದು, 9136 ಎಕರೆ ಅರಣ್ಯ ಭೂಮಿಯಲ್ಲಿ ಪುನರ್ವಸತಿಗಾಗಿ ರಾಜ್ಯ ಸರ್ಕಾರವು ಆರಂಭಿಸಿದ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲವೆಂದು, ರೈತರ ಹೆಸರಿಗೆ ಹಕ್ಕು ಪತ್ರ (ಪಟ್ಟಾ) ಇಂದಿಗೂ ನೀಡಲಾಗದ ಕಾರಣ ರೈತರು ಹಲವು ಸವಲತ್ತುಗಳಿಂದ ವಂಚಿತರಾಗಿದ್ದಾರೆಂದು, ಮನೆ ನಿರ್ಮಾಣಕ್ಕಾಗಿ ಬ್ಯಾಂಕ್ ನಿಂದ ಸಾಲ ಸಹ ದೊರೆಯದೇ ರೈತರು ಸಂಕಷ್ಟಕ್ಕೆ ಒಳಗಾಗಿರುವ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು.
ದಿನಾಂಕ: 03.12.2024 ರಂದು ಸುಪ್ರಿಂ ಕೋರ್ಟ್ ನೀಡಿರುವ ನಿರ್ದೇಶನದ ಮೇರೆಗೆ ಕೇಂದ್ರದ ಅರಣ್ಯ ಮತ್ತು ಪರಿಸರ ಖಾತೆ ಸಚಿವರಾದ ಭೂಪೇಂದ್ರ ಯಾದವ್ ಅವರನ್ನು ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ, ಸಾಗರದ ಮಾಜಿ ಶಾಸಕ ಹರತಾಳು ಹಾಲಪ್ಪ ಮತ್ತು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಅಶೋಕನಾಯ್ಕ ರವರ ಜೊತೆಯಲ್ಲಿ ಭೇಟಿ ಮಾಡಿ ಈ ಬಗ್ಗೆ ಮಾತನಾಡಿ, ಕೇಂದ್ರ ಸರ್ಕಾರದಿಂದ ಪೂರ್ಣ ಸಹಕಾರವನ್ನು ನೀಡಲಾಗುವುದೆಂದು ನಿಯೋಗದ ಸದಸ್ಯರಿಗೆ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ರಾಜ್ಯ ಸರ್ಕಾರವು ಕೇಂದ್ರ ಸರ್ಕಾರವನ್ನು ತಕ್ಷಣವೇ ಸಂಪರ್ಕಿಸಿ ರೈತರ ಪರವಾಗಿ ನಿಲುವನ್ನು ತೆಗೆದುಕೊಂಡು ಸುಪ್ರಿಂ ಕೋರ್ಟ್ ನಲ್ಲಿ ಇದೇ ಬರುವ ಜನವರಿ 20 ರಂದು ಪ್ರಕರಣವು ವಿಚಾರಣೆಗೆ ಬರಲಿರುವುದರಿಂದ ಅಷ್ಟರೊಳಗೆ ಪರಸ್ಪರ ಸಮನ್ವಯತೆಯನ್ನು ಸಾಧಿಸಿ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆಯವರನ್ನು ಸಂಸದ ರಾಘವೇಂದ್ರ ಅವರು ಒತ್ತಾಯಿಸಿದ್ದಾರೆ.