ಶಿವಮೊಗ್ಗ ಜ.06 :: ಜೀವನದ ಪರೀಕ್ಷೆಯಲ್ಲಿ ಉತ್ತೀರ್ಣತೆ ಹೊಂದಲು ಶಿಕ್ಷಣದ ಜೊತೆಗೆ ಕೌಶಲ್ಯತೆ ಎಂಬುದು ಅತ್ಯವಶ್ಯಕವಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶ್ರೇಷ್ಟಿ ಹೇಳಿದರು.

ನಗರದ ಹೆಚ್.ಎಸ್.ರುದ್ರಪ್ಪ ರಾಷ್ಟ್ರೀಯ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಒಂದು ವಿದ್ಯಾಸಂಸ್ಥೆಯ ಉನ್ನತಿಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಕೊಡುಗೆ ಅಪಾರ. ಎನ್ಎಸ್ಎಸ್, ಸೇವಾದಳದಂತಹ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯರಾಗುವುದರಿಂದ ಕ್ರೀಡಾ ಮನೋಭಾವ ಬೆಳೆಸಲು ಸಾಧ್ಯವಾಗಲಿದೆ. ವಿದ್ಯಾರ್ಥಿಗಳು ಇತ್ತಿಚೆಗೆ ದೈಹಿಕ ಸಾಮರ್ಥ್ಯದ ಉನ್ನತಿಕರಣಕ್ಕೆ ಯಾವುದೇ ಪರಿಶ್ರಮ ಪಡುತ್ತಿಲ್ಲ‌. ಆರೋಗ್ಯ ಮುಖ್ಯ ಎಂಬ ಕನಿಷ್ಟ ಜ್ಞಾನವಿಲ್ಲದೆ, ನಾಲ್ಕು ಗೋಡೆಯ ಮಧ್ಯೆ ಪಾಠ, ಓದು, ಮೊಬೈಲ್ ಗೆ ಸೀಮಿತವಾಗಿದ್ದಾರೆ. ಮೊಬೈಲ್ ಶಾಪವಾಗಿ ಯುವ ಸಮೂಹವನ್ನು ಕಾಡುತ್ತಿದೆ‌. ಅಂತಹ ಆಧುನಿಕತೆಯ ಅಂಧತ್ವದಿಂದ ಹೊರಬಂದು ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕ ಕ್ರಿಯಾಶೀಲತೆಯಲ್ಲಿ ತೊಡಗಿಸಿಕೊಳ್ಳಿ.  

ಪಾಸ್ ಅದರೆ ಸಾಕು ಎಂಬ ಕಾಲದಿಂದ, ರ‍್ಯಾಂಕ್ ಪಡೆಯಲು ಪೈಪೋಟಿ ನಡೆಸುವ ಸ್ಪರ್ಧಾತ್ಮಕ ಯುಗದಲ್ಲಿ ನಾವಿದ್ದೇವೆ. ಸ್ಪರ್ಧೆಯ ಹಿಂದೆ ಓಡುವಾಗ, ನಮ್ಮ ಸಂಸ್ಕೃತಿ ಸಂಸ್ಕಾರಗಳನ್ನು ಮರೆಯದಿರಿ. ಪೋಷಕರು ನೀಡುವ ಅತಿಯಾದ ಕಾಳಜಿ, ಕೆಲವೊಮ್ಮೆ ಯುವ ಸಮೂಹದಲ್ಲಿ ಸೌಜನ್ಯತಾ ಸ್ವಭಾವ ಕಾಣೆಯಾಗುವಂತೆ ಮಾಡುತ್ತಿದೆ. ಪೋಷಕರೆ ಮಕ್ಕಳನ್ನು ನೋಡಿ ಹೆದರು ಪರಿಸ್ಥಿತಿ ನಿರ್ಮಾಣವಾಗಿದೆ. ಯಾವುದೇ ಸೋಲು ಅವಮಾನಗಳನ್ನು ಎದುರಿಸಲಾರದ ಸೂಕ್ಷ್ಮತೆಗೆ ಒಳಗಾಗಿದ್ದಾರೆ. ಅಂತಹ ಅಂಧತ್ವ ಎಂದಿಗೂ ನಿಮ್ಮನ್ನು ಕಾಡದಿರಲಿ  ಎಂದು ಹೇಳಿದರು.

ದುರ್ಗಿಗುಡಿ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಡಿ.ಪಿ.ಪ್ರಕಾಶ್‌ ಮಾತನಾಡಿ, ಬಹುಮಾನಕ್ಕಾಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಡಿ. ಕ್ರೀಡೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಸಧೃಡತೆ ಕಾಪಾಡಲಿದೆ.ಕ್ರೀಡಾತ್ಮಕ ಮನೋಭಾವ ಬದುಕಿನ ಅತ್ಯವಶ್ಯಕ ಸಾಧನ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಎಸ್.ಚನ್ನಪ್ಪ ಮಾತನಾಡಿ, ಗುರಿ ತಲುಪಲು ಸಿಗುವ ಪ್ರೇರಣೆಗಳೆ, ನಮಗೆ ಸಿಕ್ಕ ಅದ್ಭುತ ಶಿಕ್ಷಣ. ಯಶಸ್ಸಿಗೆ ಸಿದ್ದತೆ ಮತ್ತು ಬದ್ದತೆ ಎರಡೂ ಮುಖ್ಯ. ಸ್ಪರ್ಧಾತ್ಮಕ ಯುಗದಲ್ಲಿ ಹಿಂಜರಿಕೆ ನಮ್ಮಯ ಅತಿ ದೊಡ್ಡ ಶತ್ರು. ಅಂತಹ ಹಿಂಜರಿಕೆಯಿಂದ ಹೊರಬಂದು ಕೌಶಲ್ಯತೆಯ ಗಣಿ ನೀವಾಗಿ ಎಂದು ಹೇಳಿದರು.

ಎನ್ಇಎಸ್ ಆಜೀವ ಸದಸ್ಯರಾದ ಗುರುಪ್ರಸಾದ್, ದೈಹಿಕ ಶಿಕ್ಷಣ ವಿಭಾಗದ ಉಪನ್ಯಾಕಿ ಶೀಲಾ, ಉಪನ್ಯಾಸಕರಾದ ಆದಿತ್ಯ, ಫ್ರಾನ್ಸಿಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ನಿತಿನ್, ಅಮೃತ್ ನಿರೂಪಿಸಿ, ಭರತ್ ಸ್ವಾಗತಿಸಿ, ಕಾವ್ಯ ವಂದಿಸಿದರು.

By admin

ನಿಮ್ಮದೊಂದು ಉತ್ತರ

error: Content is protected !!