ಯುವ ಪರಿವರ್ತಕರು ಮತ್ತು ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನ
ಶಿವಮೊಗ್ಗ : ಜನ ಆರೋಗ್ಯ ಕೇಂದ್ರ, ಎಪಿಡಿಮಿಯಾಲಜಿ ವಿಭಾಗ, ನಿಮ್ಹಾನ್ಸ್ ಬೆಂಗಳೂರು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಯುವ ಸ್ಪಂದನ ಕಾರ್ಯಕ್ರಮದಡಿಯಲ್ಲಿ ಕಾರ್ಯ ನಿರ್ವಹಿಸಲು ಯುವ ಪರಿವರ್ತಕರು ಮತ್ತು ಯುವ ಸಮಾಲೋಚಕರ ಹುದ್ದೆಗೆ 21 ರಿಂದ 35 ವರ್ಷದೊಳಗಿನ ಪದವಿ ಹಾಗೂ ಮೇಲ್ಪಟ್ಟು (ಫಿಸಿಯೋಲಾಜಿ/ ಸೋಷಿಯಲ್ ವರ್ಕ್ ಪದವಿ ಹೊಂದಿದವರಿಗೆ ಆದ್ಯತೆ ನೀಡಲಾಗುವುದು) ಹಾಗೂ ಸಮುದಾಯದಲ್ಲಿ ಕೆಲಸ ಮಾಡಿರುವವರಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಮುದಾಯದಲ್ಲಿ ಕೆಲಸ ಮಾಡಲು ಆಸಕ್ತಿ ಮತ್ತು ಉತ್ತಮ ಸಂವಹನ ಕೌಶಲ್ಯ, ಸ್ಪಷ್ಟವಾದ ಕನ್ನಡ ಉಚ್ಛಾರಣೆ ಇರಬೇಕು. ಯುವ ಪರಿವರ್ತಕರಿಗೆ ಗೌರವ ಧನವಾಗಿ ರೂ. 7000 ಹಾಗೂ ಯುವ ಸಮಾಲೋಚಕರಿಗೆ ಗೌರವ ಧನವಾಗಿ ರೂ. 9000 ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಕ್ರೀಡಾಂಗಣ, ಶಿವಮೊಗ್ಗ ಇಲ್ಲಿ ಸಂಪರ್ಕಿಬಹುದು ಎಂದು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ನೇರ ಸಂದರ್ಶನ’
ಶಿವಮೊಗ್ಗ : ಶಿವಮೊಗ್ಗದ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುವ ಸಂಬಂಧ ಡಿ. 23 ರಂದು ನೇರ ಸಂದರ್ಶನ ಏರ್ಪಡಿಸಲಾಗಿದೆ.
ಪ್ರಾಣಿ ಆಹಾರ ಶಾಸ್ತ್ರ ವಿಭಾಗ, ಪಶುವೈದ್ಯಕೀಯ ಔಷಧ ಹಾಗೂ ವಿಷಶಾಸ್ತ್ರ ವಿಭಾಗ, ಜಾನುವಾರು ಉತ್ಪನ್ನಗಳ ತಾಂತ್ರಿಕತೆ ವಿಭಾಗ, ಪಶುವೈದ್ಯಕೀಯ ಸಾರ್ವಜನಿಕ ಆರೋಗ್ಯ ಮತ್ತು ಸಮುದಾಯ ರೋಗ ಅಧ್ಯಯನ ಶಾಸ್ತ್ರ ವಿಭಾಗ, ಜಾನುವಾರು ಸಾಕಾಣಿಕಾ ಸಂಕೀರ್ಣ ವಿಭಾಗ, ಪಶುವೈದ್ಯಕೀಯ ಶರೀರಕ್ರಿಯಾ ಮತ್ತು ಜೀವರಸಾಯನ ಶಾಸ್ತ್ರ ವಿಭಾಗ, ಪಶುವೈದ್ಯಕೀಯ ಶಾಸ್ತ್ರ ಚಿಕಿತ್ಸೆ ಮತ್ತು ಕ್ಷ-ಕಿರಣ ಶಾಸ್ತ್ರ ವಿಭಾಗ, ಪಶು ವೈದ್ಯಕೀಯ ಚಿಕಿತ್ಸಾ ಸಂಕೀರ್ಣ ವಿಭಾಗಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ನಿಯಮಾವಳಿಯಂತೆ ಹಾಗೂ ಮಾರ್ಗಸೂಚಿಯಂತೆ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬಹುದು.
ನೇರ ಸಂದರ್ಶನವು ಡೀನ್ ಕಚೇರಿ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ ಇಲ್ಲಿ ಡಿ.23ರ ಬೆಳಿಗ್ಗೆ 11 ಗಂಟೆಯಿಂದ ನಡೆಯಲಿದೆ. ಆಯ್ಕೆಯಾದ ರಾಷ್ಟ್ರೀಯ ಅರ್ಹತಾ ಪರೀಕ್ಷೆ(ಎನ್ಇಟಿ) ಪ್ರಮಾಣ ಪತ್ರ ಹೊಂದಿರುವ ಅಭ್ಯರ್ಥಿಗಳಿಗೆ ಮಾಸಿಕ ರೂ.56,700/- ಮತ್ತು ರಾಷ್ಟ್ರೀಯ ಅರ್ಹತಾ ಪರೀಕ್ಷೆಯ (ಎನ್ಇಟಿ)ಪ್ರಮಾಣ ಪತ್ರ ಹೊಂದಿರದ ಅಭ್ಯರ್ಥಿಗಳಿಗೆ ಮಾಸಿಕ ರೂ.50,000 ವೇತನ ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08182-200872 ಹಾಗೂ ವಿಶ್ವವಿದ್ಯಾಲಯದ ಜಾಲತಾಣ www.kvafsu.edu.in ನ್ನು ಸಂಪರ್ಕಿಸುವAತೆ ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.