
ವೃದ್ದೆಗೆ 1.28 ಲಕ್ಷ ರೂ. ವಂಚನೆ
ಶಿವಮೊಗ್ಗ: ನಗರದ ನೆಹರು ರಸ್ತೆಯಲ್ಲಿ ಎಟಿಎಂ ಕಾರ್ಡ್ ಅದಲು ಬದಲು ಮಾಡಿ ವೃದ್ಧೆಗೆ 1.28 ಲಕ್ಷ ರೂ. ವಂಚಿಸಲಾಗಿದೆ. ಮಂಜುನಾಥ ಬಡಾವಣೆಯ 68 ವರ್ಷದ ವೃದ್ಧೆ ವಂಚನೆಗೆ ಒಳಗಾದವರು. ಮಂಗಳವಾರ ನೆಹರು ರಸ್ತೆಯ ಕೆನರಾ ಬ್ಯಾಂಕ್ ಎಟಿಎಂನಲ್ಲಿ ಹಣ ವಿತ್ ಡ್ರಾ ಮಾಡಲು ಹೋಗಿದ್ದರು. ಈ ವೇಳೆಗೆ ಎಟಿಎಂ ಬಳಿ ಇದ್ದ ವ್ಯಕ್ತಿ ಎಷ್ಟು ಹಣ ಬಿಡಿಸಬೇಕೆಂದು ಸಹಾಯ ಮಾಡುವ ರೂಪದಲ್ಲಿ ಕೇಳಿದ್ದ. ವೃದ್ಧೆ ಆತನ ಕೈಗೆ ಎಟಿಎಂ ಕಾರ್ಡ್ ಕೊಟ್ಟು 500 ರೂ. ವಿತ್ ಡ್ರಾ ಮಾಡಿಕೊಡುವಂತೆ ಕೇಳಿದ್ದರು. ಆತ ಎಟಿಎಂಗೆ ಕಾರ್ಡ್ ಹಾಕಿ ಪಿನ್ ನಂಬರ್ ಒತ್ತುವಂತೆ ಹೇಳಿ 500 ರೂ. ಬಿಡಿಸಿಕೊಟ್ಟಿದ್ದ. ಪಾಸ್ರ್ಡ್ ನೋಡಿಕೊಂಡಿದ್ದ ಆತ ಎಟಿಎಂ ಕಾರ್ಡ್ ಅದಲು ಬದಲು ಮಾಡಿ 1,28,910 ರೂ. ವಿತ್ ಡ್ರಾ ಮಾಡಿಕೊಂಡು ವಂಚನೆ ಮಾಡಿದ್ದಾನೆ. ಕೋಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಿವಮೊಗ್ಗ | ನಕಲಿ ಪತ್ರ ಸೃಷ್ಟಿಸಿ ನಿವೇಶನ ಮಾರಾಟ
ಶಿವಮೊಗ್ಗ: ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ಸಿ ಬ್ಲಾಕ್ನಲ್ಲಿ ಮಹಿಳೆಯ ನಕಲಿ ಪ್ರಮಾಣಪತ್ರ ಸೃಷ್ಟಿಸಿ 20X30 ಸುತ್ತಳತೆ ನಿವೇಶನ ನೋಂದಣಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಈಶ್ವರ್ ಮತ್ತು ಅವರ ಪತ್ನಿ ಸುಧಾರಾಣಿ ಎಂಬುವರ ಹೆಸರಿನಲ್ಲಿ ಬೊಮ್ಮನಕಟ್ಟೆ ಆಶ್ರಯ ಬಡಾವಣೆ ಸಿ ಬ್ಲಾಕ್ ನಲ್ಲಿ ನಿವೇಶನ ಸಂಖ್ಯೆ 579ರಲ್ಲಿ 20X30 ಅಡಿ ಅಳತೆಯ ನಿವೇಶನ ಮಂಜೂರಾಗಿತ್ತು. ಆದರೆ ಸುಧಾರಾಣಿ ಅವರ ಪತಿ ಈಶ್ವರ್ ಹೆಸರಿನಲ್ಲಿ ಬೇರೆಯೊಬ್ಬ ಈಶ್ವರ ಎಂಬಾತ ಪಾಲಿಕೆ ಅಧಿಕಾರಿಗಳೊಂದಿಗೆ ಶಾಮೀಲಾಗಿ ಸುಧಾರಾಣಿ ಅವರ ನಕಲಿ ಮರಣಪತ್ರ ಸೃಷಿಸಿದಲ್ಲದೆ, ಈಶ್ವರ ಅವರ ಹೆಸರಿಗೆ ಸಿಂಗಲ್ ಖಾತೆ ಮಾಡಿಸಿಕೊಂಡು ಬಳಿಕ ಆ ನಿವೇಶನವನ್ನು ಮಹಿಳೆಯೊಬ್ಬರಿಗೆ ಮಾರಾಟ ಮಾಡಿದ್ದಾರೆ. ಇದು ಸಟ್ ರಿಜಿಸ್ಟ್ರಾರ್ ಕಚೇರಿಯಲ್ಲಿ ರಿಜಿಸ್ಟರ್ ಮಾಡಿಸಿ ಮಹಿಳೆ ಹೆಸರಿಗೆ ಕ್ರಯಪತ್ರ ಮಾಡಲಾಗಿದೆ. ಸುಧಾರಾಣಿ ಅವರ ನಕಲಿ ಮರಣ ಪ್ರಮಾಣಪತ್ರ ಸೃಷ್ಟಿಸಿ ಪಾಲಿಕೆಯಲ್ಲಿ ಖಾತೆ ಮಾಡಿಸಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕ್ರಯಪತ್ರ ಮಾಡಿಸಿದ ಈಶ್ವರ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
