ಶಿವಮೊಗ್ಗ;30 ಮಾತೃಭಾಷೆ ಬೇರೆಯಾದರೂ ಕನ್ನಡ ಭಾಷೆಯಲ್ಲಿ ವಿಶಿಷ್ಟ ಕೃಷಿ ಮಾಡಿದ ಸಾಧಕರು ನಮಗೆ ಆದರ್ಶವಾಗಬೇಕು ಎಂದು ವಿಧಾನ ಪರಿಷತ್ತಿನ ಸದಸ್ಯ ಡಾ.ಧನಂಜಯ ಸರ್ಜಿ ಅಭಿಪ್ರಾಯಪಟ್ಟರು.
ನಗರದ ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನ ವತಿಯಿಂದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಉತ್ತಮ ಸಂಸ್ಕಾರವು ಮಾನವನನ್ನು ಮಹದೇವನಾಗಿಸುತ್ತದೆ. ಆದ್ದರಿಂದ ಇಂದಿನ ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡಿದಾಗ ಸಮಾಜದಲ್ಲಿ ಯಶಸ್ವಿ ಸಾಧಕರಾಗಿ ರೂಪಗೊಳ್ಳಲು ಸಹಕಾರಿಯೆಂದು ತಿಳಿಸಿದರು.

ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಡಾ.ಶುಭಾ ಮರವಂತೆ ಮಾತನಾಡಿ, ಇಂದು ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾದ ಯುವ ಸಮುದಾಯವು ದೊಡ್ಡಪ್ಪ, ಚಿಕ್ಕಪ್ಪ, ದೊಡ್ಡಮ್ಮ, ಚಿಕ್ಕಮ್ಮ ಬದಲಾಗಿ ಆಂಟಿ, ಅಂಕಲ್ ಸಂಸ್ಕೃತಿ ಬಂದು ಸಂಬಂಧಗಳ ಮಹತ್ವವನ್ನೇ ತಿಳಿಯದಂತೆ ಆಗಿರುವುದು ವಿಷಾದನೀಯ.

ಸಂಬಂಧಗಳ ಮಹತ್ವವನ್ನು ತಿಳಿಯಲು ಮಾತೃಭಾಷೆಯು ಮಹತ್ತರ ಪಾತ್ರ ವಹಿಸುತ್ತದೆ. ಕನ್ನಡ ಭಾಷೆಯನ್ನು ಬಳಸುವುದು ಕೀಳರಿಮೆ ಎಂದು ಪರಿಗಣಿಸದೆ ಮಾತೃಭಾಷೆಯಲ್ಲಿಯೇ ಪರಸ್ಪರ ಸಂವಹನ ನಡೆಸುವುದರಿಂದ ಭಾಷೆಯ ಮಹತ್ವವನ್ನು ತಿಳಿಯುವುದರ ಜೊತೆಗೆ ಸಂಬಂಧಗಳ ಮಹತ್ವವನ್ನು ತಿಳಿಯಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪ್ರಾಂಶುಪಾಲರಾದ ಡಾ ಶಿವಪ್ರಸಾದ.ಬಿ.ಎಸ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕರ ಅಶ್ವತ್ಥ ನಾರಾಯಣ ಶ್ರೇಷ್ಟಿ ಉಪಸ್ಥಿತರಿದ್ದರು.