ಶಿವಮೊಗ್ಗ;30 ಕನ್ನಡ ಭಾಷೆ, ಸಂಸ್ಕೃತಿ ಮತ್ತು ಈ ನಾಡಿನ ಇತಿಹಾಸ ಸಮೃದ್ಧವಾದುದು. ಕನ್ನಡ ನಾಡಿನ ಸ್ಥಳನಾಮಗಳ ಉಲ್ಲೇಖಗಳು ಮಹಾಕಾವ್ಯಗಳಲ್ಲಿ ಕಂಡು ಬರುತ್ತವೆ. ಕ್ರಿಪೂ ೨೫೨ರ ಅಶೋಕನ ಬ್ರಹ್ಮಗಿರಿಯ ಶಾಸನದಿಂದ ಹಿಡಿದು ಹಲವಾರು ಶಾಸನಗಳಲ್ಲಿ ಕನ್ನಡ ಭಾಷೆಯ ಪದಗಳು ಕಂಡು ಬರುತ್ತವೆ. ಕನ್ನಡವೆಂದರೆ ಕೇವಲ ಭಾಷೆಯಲ್ಲ. ಪ್ರದೇಶವಾಚಕವಲ್ಲ. ಕನ್ನಡವೆಂದರೆ ಒಂದು ಸಂಸ್ಕೃತಿ, ಕನ್ನಡವೆಂದರೆ ಭಾವ, ಉಡುಗೆ ತೊಡುಗೆ ಜೀವನವಿಧಾನವಾಗಿದೆ. ಹಾಗೆಯೇ ಕನ್ನಡ ಭಾಷೆಯಲ್ಲಿ ಪ್ರಾದೇಶಿಕತೆಯ ಸೊಗಡು ಸತ್ವಗಳಿವೆ. ಭಾಷೆ ಉಳಿದರೆ ಬದುಕು ಉಳಿಯುತ್ತದೆ. ಕನ್ನಡದ ನೆಲವೂ ಕೂಡ ಬಹು ಸಂಸ್ಕೃತಿ, ವಿಭಿನ್ನ ಪ್ರಾದೇಶಿಕ ಭಾಷೆಯ ಸೊಗಡನ್ನು ಹಾಗೂ ಬಹು ವಿಚಾರಧಾರೆಗಳ ನಾಡು. ಪ್ರತಿಯೊಬ್ಬ ಕನ್ನಡಿಗರೂ ಕೂಡ ತಮ್ಮ ಮಾತೃಭಾಷೆಯಾದ ಕನ್ನಡ ಭಾಷೆಯನ್ನು ಪ್ರೀತಿಸಬೇಕು. ಅದರ

ಸೌಂದರ್ಯವನ್ನು ಅರಿತು ರೂಢಿಸಿಕೊಳ್ಳಬೇಕು. ಶ್ರೀವಿಜಯನು ತನ್ನ ಕೃತಿ ಕವಿರಾಜಮಾರ್ಗದಲ್ಲಿ ಕನ್ನಡಿಗರ ಸ್ವಭಾವ, ಸೌಂದರ್ಯ, ಗುಣಲಕ್ಷಣಗಳನ್ನು ಸೊಗಸಾಗಿ ವರ್ಣಿಸಿದ್ದಾನೆ. ವಿಶಾಲವಾಗಿದ್ದ ಕನ್ನಡ ನಾಡಿನ ಎಲ್ಲೆಯನ್ನು ವರ್ಣಿಸಿದ್ದಾನೆ. ಪಂಪನಂತಹ ಮಹಾಕವಿಗಳಿಂದ ಹಿಡಿದು ಆಧುನಿಕ ಸಾಹಿತ್ಯದವರೆಗಿನ ದಾರ್ಶನಿಕರು, ಸಾಹಿತಿಗಳು, ಶರಣರು ಕನ್ನಡ ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡದ ಕಟ್ಟಾಳು ಎನಿಸಿದ್ದ ಸಾಲಿ ರಾಮಚಂದ್ರರಾಯರು ಕನ್ನಡದ ಹುಲ್ಲೆನಗೆ ಪಾವನ ತುಳಸಿ ಕನ್ನಡದ ನೆಲದ ನೀರ್ವೊಲೆನಗೆ ಜೀವನದಿ ಕನ್ನಡದ ನೆಲದ ಕಲ್ಲೆನಗೆ ಸಾಲಿಗ್ರಾಮ ಶಿಲೆ ಎಂದು ಸ್ಮರಿಸುತ್ತಾ ಕನ್ನಡ ನೆಲದ ಶ್ರೇಷ್ಠತೆಯನ್ನು ತಮ್ಮ ಕಾವ್ಯಗಳಲ್ಲಿ ಬಿಂಬಿಸಿದ್ದಾರೆ. ವಿದ್ಯಾರ್ಥಿಗಳು

ಕನ್ನಡದ ಸಾಹಿತ್ಯವನ್ನು ಕಲಿಯುವುದರ ಮೂಲಕ ಭಾಷೆ ಮತ್ತು ಸಾಹಿತ್ಯ, ಸಂಸ್ಕೃತಿಗಳ ಕುರಿತು ಅಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ಕುವೆಂಪು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಸಂಯೋಜನಾಧಿಕಾರಿಗಳಾದ ಡಾ. ಶುಭಾ ಮರವಂತೆಯವರು ನಗರದ ಪಿಇಎಸ್ ಐಎಎಮ್ಎಸ್ ಕಾಲೇಜಿನ ಅಭಿವ್ಯಕ್ತಿ ಸಾಹಿತ್ಯ ವೇದಿಕೆ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಕನ್ನಡ ನುಡಿಹಬ್ಬ- ೨೦೨೪ ರ ಮುಖ್ಯ ಅತಿಥಿಗಳಾಗಿ ಆಗಮಿಸಿ, ಸಮಾರಂಭವನ್ನು ಉದ್ಘಾಟಿಸಿ ಸಭೆಯನ್ನು ಉದ್ದೇಶಿಸಿ ನುಡಿದರು.

ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿಗಳು ಹಾಗೂ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ. ಎನ್. ಪ್ರವೀಣ್ ಚಂದ್ರ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡುತ್ತಾ ಕನ್ನಡ ಭಾಷೆ, ಸಂಸ್ಕೃತಿ ಅತ್ಯಂತ ಶ್ರೀಮಂತವಾದುದು. ಈ ವರ್ಷ ಕರ್ನಾಟಕ ಎಂಬ ಹೆಸರು ನಾಮಕರಣವಾಗಿ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದ್ದೇವೆ. ಈ ಚಾರಿತ್ರಿಕ ಮಹತ್ವವನ್ನು ಎಲ್ಲಾ ವಿದ್ಯಾರ್ಥಿಗಳು ಅರಿಯಬೇಕು ಅಲ್ಲದೆ ಕನ್ನಡ ಭಾಷೆ, ನಾಡು, ಸಂಸ್ಕೃತಿ ಪರಂಪರೆಗಳ ರಕ್ಷಣೆಗೆ ನಾವು ಕಂಕಣಬದ್ದರಾಗಬೇಕು ಎಂದು ನುಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಅರುಣ.ಎ ಅವರು ಮಾತನಾಡುತ್ತಾ ಇಂದಿನ ಯುವಪೀಳಿಗೆ ಭಾಷೆಯ ವಿಚಾರದಲ್ಲಿ ಅಷ್ಟು ಆಸಕ್ತಿಯನ್ನು ತೋರುತ್ತಿಲ್ಲ. ಭಾಷೆ ಕೇವಲ ಸಂವಹನ ಮಾಧ್ಯಮ ಮಾತ್ರವಲ್ಲ. ಅದು ಭಾವನೆಗಳ ಅಭಿವ್ಯಕ್ತಿಯ ವಿಧಾನವೂ ಹೌದು. ಪ್ರತಿಯೊಬ್ಬರೂ ತಮ್ಮ ಅಗತ್ಯಕ್ಕೆ ತಕ್ಕಂತೆ ಎಷ್ಟು ಭಾಷೆಗಳನ್ನು ಬೇಕಿದ್ದರೂ ಕಲಿಯಬಹುದು ಆದರೆ ತಮ್ಮ ಮಾತೃಭಾಷೆಗೆ ಮೊದಲ ಆದ್ಯತೆಯನ್ನು ನೀಡಬೇಕು. ಅಲ್ಲದೆ ಅದರ ಉಳಿವಿಗಾಗಿ ತಮ್ಮ ಕೊಡುಗೆಯನ್ನು ಕೊಡಬೇಕು. ಗಿಡಗಳಿಗೆ ತಾಯಿ ಬೇರಿರುವಂತೆ ನಮಗೆ ಮಾತೃಭಾಷೆ. ಈ ನೆಲದ ಸತ್ವಗಳನ್ನು ನಾವು ನಮ್ಮ ಮಾತೃಭಾಷೆಯ ಮೂಲಕ ಅರಿಯುತ್ತೇವೆ. ತನ್ನ ಮಾತೃಭಾಷೆಯನ್ನು ಹೆಚ್ಚು ಹೆಚ್ಚು ಬಳಸುವುದು, ಸಾಹಿತ್ಯವನ್ನು ಓದುವುದು ಮತ್ತು ಬರೆಯುವುದರ ಮೂಲಕ ಕನ್ನಡದ ಪ್ರಜ್ಞೆಯನ್ನು ಜಾಗೃತಗೊಳಿಸಬೇಕು ಹಾಗೆಯೇ ಕನ್ನಡ ನುಡಿಹಬ್ಬ ಒಂದು ದಿನದ ಹಬ್ಬವಲ್ಲ ಇದು ನಿತ್ಯೋತ್ಸವವಾಗಲಿ ಎಂದು ನುಡಿದರು. ವೇದಿಕೆಯಲ್ಲಿ ಅಭಿವ್ಯಕ್ತಿ ಸಾಹಿತ್ಯವೇದಿಕೆಯ ಸಂಚಾಲಕರಾದ ವಿದ್ಯಾ ಎಸ್ ಹಾಗೂ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಶ್ರೀ ರವಿಕುಮಾರ್ ಅವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ಮಖ್ಯಸ್ಥರಾದ ರೂಪ ಡಿ ಎಸ್, ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಮೋಹನ್ ಡಿ ಹಾಗೂ ಬೋಧಕ- ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಮೇಘ ಎಸ್ ರಾಯ್ಕರ್ ಮತ್ತು ತಂಡದವರು ಕನ್ನಡ ಗೀತೆಗಳನ್ನು ಪ್ರಸ್ತುತಪಡಿಸಿದರು. ನವೀನ್ ಎಸ್ ಕೆ ಅವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ತನುಷಾ ಕೆ ಹೆಚ್ ಸ್ವಾಗತಿಸಿ, ವರ್ಷಿಣಿ ಎಂ ವಂದಿಸಿ, ಸಿಂಚನ ಹೆಚ್ ಬಿ ಅವರು ನಿರೂಪಿಸಿದರು.