ಸಾಗರ : ತಾಲ್ಲೂಕಿನ ಪಡವಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮರೂರು ಗ್ರಾಮದ ರೈತ ಉಮೇಶ್ ಎಂ.ಆರ್. ಬಿನ್ ರಾಜಶೇಖರಪ್ಪ ಗೌಡ (60) ಎಂಬ ರೈತ ಕ್ರಿಮಿನಾಶಕ ಸೇವಿಸಿ ಮೃತಪಟ್ಟ ಘಟನೆ ಸೋಮವಾರ ವರದಿಯಾಗಿದೆ.
ಮರೂರು ಗ್ರಾಮದ ಉಮೇಶ್ ಎಂ.ಆರ್. ಅವರು ಎರಡು ಮೂರು ಎಕರೆ ತೋಟ ಮತ್ತು ಕೃಷಿ ಜಮೀನು ಹೊಂದಿದ್ದರು. ಬೆಳೆಗಾಗಿ ರಾಷ್ಟ್ರೀಕೃತ ಬ್ಯಾಂಕ್, ಸಹಕಾರ ಸಂಸ್ಥೆ ಹಾಗೂ ಕೈಗಡ ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲಾಗದೆ ಚಿಂತಾಕ್ರಾಂತರಾಗಿದ್ದರು ಎನ್ನಲಾಗಿದೆ.
ಉಮೇಶ್ ಎಂ.ಆರ್. ಅವರು ಮನೆಯಲ್ಲಿ ಇರಲಿಲ್ಲ. ಮನೆಯವರು ಹುಡುಕಿ ನೋಡಿದಾಗ ಮನೆಯ ಹಿಂಭಾಗದ ಖಾಲಿ ಜಾಗದಲ್ಲಿ ಉಮೇಶ್ ಎಂ.ಆರ್. ಅವರು ಅಸ್ವಸ್ಥಗೊಂಡು ಮಲಗಿದ್ದರು. ತಕ್ಷಣ ಅವರನ್ನು ಖಾಸಗಿ ವಾಹನದಲ್ಲಿ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು.
ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಆದರೆ ಶಿವಮೊಗ್ಗಕ್ಕೆ ಕರೆದೊಯ್ಯುವ ಮೊದಲೆ ಉಮೇಶ್ ಎಂ.ಆರ್. ಮೃತಪಟ್ಟಿದ್ದಾರೆ. ಮೃತ ಉಮೇಶ್ ಗೌಡ ಅವರು ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ.
ಈ ಸಂಬಂಧ ಮೃತ ಉಮೇಶ್ ಎಂ.ಆರ್. ಅವರ ಪುತ್ರ ಅರ್ಜುನ್ ಗ್ರಾಮಾಂತರ ಠಾಣೆಗೆ ನೀಡಿದ ದೂರಿನಲ್ಲಿ ತನ್ನ ತಂದೆ ಕೃಷಿಗಾಗಿ ಬ್ಯಾಂಕ್ ಹಾಗೂ ವಿವಿಧ ಕಡೆ ಸಾಲ ಮಾಡಿದ್ದರು. ಸಾಲ ತೀರಿಸಲಾಗದೆ ಮಾನಸಿಕವಾಗಿ ನೊಂದು, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿಸಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!