ಶಿವಮೊಗ್ಗ,ಅ.23: ಬೆಂಗಳೂರಿನ ಎಸ್.ಬಂಗಾರಪ್ಪ ವಿಚಾರ ವೇದಿಕೆ ವತಿಯಿಂದ ದಿ.ಬಂಗಾರಪ್ಪನವರ 92ನೇ ಹುಟ್ಟುಹಬ್ಬ ಆಚರಣೆಯನ್ನು ಅ.26ರಂದು ಸೊರಬದಲ್ಲಿ ಆಚರಿಸಲಾಗುವುದು ಎಂದು ವೇದಿಕೆಯ ಅಧ್ಯಕ್ಷ ವೇಣುಗೋಪಾಲ್ ನಾಯ್ಕ್ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬಂಗಾರಪ್ಪನವರನ್ನು ಬಿಟ್ಟು ಕರ್ನಾಟಕದ ರಾಜಕೀಯ ಚರಿತ್ರೆಯನ್ನು ಉಹಿಸಲು ಸಾಧ್ಯವಿಲ್ಲ. ಶೋಷಿತ ಸಮುದಾಯಗಳ ಧ್ವನಿಯಾಗಿದ್ದರು, ಸಾಂಸ್ಕøತಿಕ ವಕ್ತಾರರು ಕೂಡ, ಬಹುದೊಡ್ಡ ಸಮಾಜವಾದಿ ಚಿಂತಕರಾಗಿದ್ದರು. ಇಂತಹ ಮಹಾನ್ ವ್ಯಕ್ತಿಯ ಹುಟ್ಟುಹಬ್ಬವನ್ನು ಅಂದು ವಿವಿಧ ಕಾರ್ಯಕ್ರಮಗಳ ಮೂಲಕ ಮತ್ತು ಸಾಧಕರಿಗೆ ಪ್ರಶಸ್ತಿ ನೀಡುವ ಮೂಲಕ ಆಚರಿಸಲಾಗುವುದು ಎಂದರು.

ಪ್ರತಿಷ್ಠಾನವು ಬಂಗಾರಪ್ಪನವರ ಹೆಸರಿನಲ್ಲಿ ಬಂಗಾರ ಪ್ರಶಸ್ತಿಯನ್ನು ನೀಡುತ್ತ ಬಂದಿದೆ.  ಈ ಬಾರಿ ಸೇವಾಬಂಗಾರ ಪ್ರಶಸ್ತಿಯನ್ನು ಬೆಂಗಳೂರಿನ ಸಾಧಕಿ ಹೆಚ್.ಜಿ.ಸುಶೀಲಮ್ಮ ಅವರಿಗೆ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ, ಸಾಹಿತಿ ಕೋಂ ವೀರಭದ್ರಪ್ಪ ಅವರಿಗೆ ಸಾಹಿತ್ಯ ಬಂಗಾರ ಪ್ರಶಸ್ತಿ ಹಾಗೂ ರಂಗಭೂಮಿ ಸೇವೆಗಾಗಿ ನಾಟಕ ಕಲಾವಿದೆ. ಪ್ರತಿಭಾ ನಾರಾಯಣ್ ಅವರಿಗೆ ಕಲಾ ಬಂಗಾರ ಪ್ರಶಸ್ತಿಯನ್ನು ನೀಡಲಾಗುವುದು. ಈ ಪ್ರಶಸ್ತಿಯು 1 ಲಕ್ಷ ರೂ. ನಗದು ಹಾಗೂ ಫಲಕಗಳನ್ನು ಒಳಗೊಂಡಿರುತ್ತದೆ ಎಂದರು.

ಅ.26ರ ಬೆಳಿಗ್ಗೆ ಸೊರಬದ ರಾಜಕುಮಾರ ರಂಗಮಂದಿರದಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣ ಕೂಡ ಆಯೋಜಿಸಲಾಗಿದೆ. ಇದರ ಅಧ್ಯಕ್ಷತೆಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ವಹಿಸಲಿದ್ದು, ಶಿರಾಜ್ ಅಹ್ಮದ್ ಹಾಗೂ ರವಿಕುಮಾರ್ ಅವರು ವಿಚಾರ ಮಂಡನೆ ಮಾಡಲಿದ್ದಾರೆ. ಸಂಜೆ 5ಕ್ಕೆ ರಾಜಕುಮಾರ್ ರಂಗಮಂದಿರದಿಂದ ಬಂಗಾರಧಾಮದವರೆಗೆ ಮೆರವಣಿಗೆ ಕೂಡ ಆಯೋಜಿಸಲಾಗಿದೆ ಎಂದರು.

ಸಂಜೆ 6ಕ್ಕೆ ಬಂಗಾರ ಪ್ರಶಸ್ತಿಗಳ ಪ್ರದಾನ ಸಮಾರಂಭ ನಡೆಯಲಿದೆ. ಗೃಹಮಂತ್ರಿ ಡಾ.ಜಿ. ಪರಮೇಶ್ವರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.ಬಂಗಾರಪ್ಪ ಜನ್ಮದಿನದ ಅಂಗವಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಚರ್ಚಾ ಮತ್ತು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ  ನಟ ಶಿವರಾಜ್‍ಕುಮಾರ್ ಬಹುಮಾನ ವಿತರಣೆ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಚಿವ ಮಧುಬಂಗಾರಪ್ಪ ಪ್ರಮುಖರಾದ ಬಸಪ್ಪ ಅಂಕರವಳ್ಳಿ, ಕೆ.ವಿ.ನಾಗರಾಜಮೂರ್ತಿ, ವೇಣುಗೋಪಾಲ್, ಹಳ್ಳಿ ಬ್ಯಾಂಡ್ ಸವಿತಕ್ಕ, ಜಾನಪದ ಗಾರುಡಿಗ ರಂಗಸ್ವಾಮಿ ಮುಂತಾದವರು  ಭಾಗವಹಿಸಲಿದ್ದು ಜಾನಪದ ತಂಡಗಳಿಂದ ಜಾತ್ರೆ ಆಯೋಜಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಜಿ.ಡಿ.ಮಂಜುನಾಥ್, ಶಮಂತ್, ಮಧುಚಂದ್ರ ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!