ಶಿವಮೊಗ್ಗ, ಅ.೧೭:
ಶಿವಮೊಗ್ಗವು ಸೇರಿದಂತೆ ಜಿಲ್ಲಾದಾದ್ಯಂತ ರೈತರು ಸಡಗರ ಸಂಭ್ರಮದಿಂದ ಭೂಮಿ ಹುಣ್ಣಿಮೆ ಹಬ್ಬವನ್ನು ಇಂದು ಆಚರಿಸಿದರು.
ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಬೆಳೆಗಳ ನಡುವೆ ಭೂಮಿ ತಾಯಿಗೆ ಗುರುವಾರ ಜಿಲ್ಲಾದ್ಯಂತ ವಿಶೇಷ ಪೂಜೆ ಪುನಸ್ಕಾರಗಳು ನೆರವೇರಿದವು. ರೈತಾಪಿ ವರ್ಗದವರು ಬೆಳೆದು ನಿಂತ ಪೈರುಗಳಿಗೆ ಉಡಿ ತುಂಬುವ ಮೂಲಕ ಭೂಮಿ ಹುಣ್ಣಿಮೆಯನ್ನು ಸಡಗರ ಸಂಭ್ರಮದಿಂದ ಆಚರಿಸಿದರು.
ಮುಂಗಾರಿನಲ್ಲಿ ಬಿತ್ತನೆ ಮಾಡಿದ ಬೆಳೆಗಳು ಹಾಲು ತುಂಬುವ ಭೂಮಿ ಹುಣ್ಣಿಮೆಯ ಸಮಯದಲ್ಲಿ ತುಂಬು ಗರ್ಭಿಣಿಯಂತೆ ಕಂಗೊಳಿಸುವ ಭೂಮಿ ತಾಯಿಗೆ ಮಡಿಲು ತುಂಬುವುದು ಭೂಮಿ ಹುಣ್ಣಿಮೆಯ ವಿಶೇಷವಾಗಿದ್ದು, ಹಬ್ಬದ ಮುನ್ನ ದಿನ ರಾತ್ರಿ ಇಡೀ ಮಾಡಿದ ವಿವಿಧ ಸಿಹಿ ಅಡುಗೆಯನ್ನು ನೈವೇದ್ಯವಾಗಿ ಮಾಡಿ ಪೂಜೆ ಸಲ್ಲಿಸಿ ಸವಿದರು.
ಭೂತಾಯಿ ಈ ಸಮಯದಲ್ಲಿ ಗರ್ಭಿಣಿಯಂತೆ ಬೆಳೆಗಳಿಂದ ಮೈತುಂಬಿಕೊಂಡಿರುತ್ತಾಳೆ ಎಂಬ ಪ್ರತೀತಿ ಇದೆ. ಹಾಗಾಗಿ ಭೂಮಿ ತಾಯಿಯನ್ನು ಗರ್ಭಿಣಿಯ ಸ್ಥಾನದಲ್ಲಿಟ್ಟು ಸೀಮಂತದ ಸಂಭ್ರಮದಂತೆ ರೈತರು ಪೂಜೆ ಸಲ್ಲಿಸುವುದು ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿಯಾಗಿದೆ.
ರೈತರು ವಿವಿಧ ರೀತಿಯ ತಿಂಡಿ ತಿನಿಸುಗಳನ್ನು ತಯಾರಿಸಿ ಭೂಮಿ ತಾಯಿಗೆ ಅರ್ಪಣೆ ಮಾಡಿದರಿ. ಭೂಮಣ್ಣಿ ಬುಟ್ಟಿ ತಯಾರಿಸಿ ಚಿತ್ತಾರ ಬರೆದು ವಿಶಿಷ್ಟ ರೀತಿಯಲ್ಲಿ ಹಬ್ಬ ಆಚರಣೆ ಮಾಡುವುದು ಕೆಲವೆಡೆ ಇದೆ. ಮನೆಯಲ್ಲಿ ತಯಾರಿಸಿದ ಭೋಜನಗಳನ್ನು ಹೊಲಕ್ಕೆ ಸಮರ್ಪಿಸಿ, ನಂತರ ಹೊಲದಲ್ಲೇ ರೈತ ಕುಟುಂಬ ಸಾಮೂಹಿಕ ಊಟ ಮಾಡಿದರು.
ಜಿಲ್ಲೆಯಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಮಳೆ ಅಬ್ಬರ ಜೋರಾಗಿದೆ. ಇದರ ನಡುವೆಯೂ ಗ್ರಾಮೀಣ ಭಾಗದಲ್ಲಿ ಹಬ್ಬದ ಸಂಭ್ರಮ ಜೋರಾಗಿದೆ.ಬೆಳಗಿನಜಾವವೇ ಬೆಳಗಿನ ಜಾವವೇ ಜಮೀನುಗಳಿಗೆ ತೆರಳಿ ಪೂಜೆ ಸಲ್ಲಿಸಿದರು.
ಭತ್ತದ ಗದ್ದೆ ಹೊಂದಿರುವವರು ಸಸಿಯನ್ನು ಮುತ್ತೈದೆಯಂತೆ ಸಿಂಗರಿಸಿ ನೈವೇದ್ಯ ನೀಡಿದರೆ, ಕೆಲವರು ಅಡಕೆ ಮರಗಳಿಗೆ ವಿಶೇಷ ಪೂಜೆ ಸಲ್ಲಿಸಿ ನೈವೇದ್ಯ ಮಾಡಿದರು. ಹಸೆ ಚಿತ್ತಾರದಿಂದ ಅಲಂಕೃತಗೊಂಡಿರುವ ಎರಡು ಬುಟ್ಟಿಯಲ್ಲಿ ವಿವಿಧ ಬಗೆಯ ಅಡುಗೆ ಪದಾರ್ಥಗಳನ್ನು ತಮ್ಮ ಹೊಲಕ್ಕೆ ಒಯ್ದು, ಭೂಮಿಗೆ ನೈವೇದ್ಯ ಮಾಡಿ, ನಂತರ ಅಲ್ಲಿಯೇ ಊಟ ಮಾಡಲಾಗುತ್ತದೆ. ಬಳಿಕ ಚರಗವನ್ನು ಭೂಮಿತಾಯಿಗೆ ಹಾಕಿದರು.
ಹೊಡೆಗೆ ಬಂದ ಸಸಿಗಳನ್ನು ಗರ್ಭವತಿಯಾದ ಹೆಣ್ಣೆಂದು ಕಲ್ಪಿಸಿಕೊಂಡು ಆಕೆಗೆ ಬಯಕೆ ತೀರಿಸುವುದೇ ಈ ಹಬ್ಬದ ವಿಶಿಷ್ಟತೆ. ಭೂಮಾತೆಗೆ ಪೂಜೆ ಮಾಡಿ ಒಳ್ಳೆಯ ಫಸಲನ್ನು ನೀಡು ಎಂದು ಬೇಡಿಕೊಳ್ಳಲಾಗುತ್ತದೆ. ಇಷ್ಟು ವರ್ಷಗಳ ಕಾಲ ಅನ್ನವನ್ನು ನೀಡಿದ್ದಕ್ಕಾಗಿ ಧನ್ಯವಾದ ಅರ್ಪಿಸಲಾಗುತ್ತದೆ. ಪೂಜೆ ನಂತರ ಕುಟುಂಬದವರೆಲ್ಲರೂ ಒಟ್ಟಿಗೆ ಸೇರಿ ತಮ್ಮ ಜಾಗದಲ್ಲಿ ಕುಳಿತು ಭೋಜನ ಮಾಡುವುದು ಎಲ್ಲೆಡೆ ನಡೆದುಕೊಂಡು ಬಂದಿದೆ.