ಶಿವಮೊಗ್ಗ,ಅ.೧೦:ಉಡಾನ್ ಯೋಜನೆಯಡಿ ಹೈದರಾಬಾದ್ ಮತ್ತು ಚೆನ್ನೈಗೆ ನೇರ ವಿಮಾನ ಸೇವೆ ಪ್ರಾರಂಭಗೊಂಡಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಪ್ರಧಾನಿ ನರೇಂದ್ರ ಮೋದಿಜಿಯವರಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.
ಶಿವಮೊಗ್ಗ ಮತ್ತು ಹೈದರಾಬಾದ್ ಹಾಗೂ ಚೆನ್ನೈ ನಡುವೆ ನೇರ ವಿಮಾನ ಸೇವೆ ಪ್ರಾರಂಭವಾಗಿರುವುದನ್ನು ಘೋಷಿಸಲು ನನಗೆ ಅಪಾರ ಸಂತೋಷವಾಗಿದೆ. ಈ ಹೊಸ ಸೇವೆಗಳು ನಮ್ಮ ಮಲೆನಾಡು ಪ್ರದೇಶದಲ್ಲಿ ಸಂಪರ್ಕತೆಯನ್ನು ಹೆಚ್ಚಿಸುವಂತಾಗಿದ್ದು, ಇದರಿಂದ
ಪ್ರವಾಸೋದ್ಯಮ, ವ್ಯಾಪಾರ ಮತ್ತು ಆರ್ಥಿಕತೆ ಬಲವರ್ಧನೆ ಕಾಣಲಿದೆ. ಈ ಸೇವೆಗಳು ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರ ದೂರದೃಷ್ಟಿಯ ನಾಯಕತ್ವದ ಫಲವಾಗಿದ್ದು, ಅವರು ದೇಶಾದ್ಯಾಂತ ಸಂಪರ್ಕತೆಯನ್ನು ವಿಸ್ತರಿಸಲು ಉಡಾನ್ ಯೋಜನೆ ಮೂಲಕ ಪ್ರಮುಖ ಪಾತ್ರವಹಿಸಿದ್ದಾರೆ ಎಂದರು.
ಶಿವಮೊಗ್ಗದಲ್ಲಿನ ವಿಮಾನ ನಿಲ್ದಾಣವನ್ನು ಕೇಂದ್ರದ ಉಡಾನ್ (ಉಡೆ ದೇಶ್ ಕಾ ಆಮ್ ನಾಗರಿಕ್) ಯೋಜನೆ ಅಡಿಯಲ್ಲಿ ನಿರ್ಮಿಸಲಾಗಿದೆ, ಮತ್ತು ಕೇವಲ ೨೦ ತಿಂಗಳ ಅವಧಿಯಲ್ಲಿ ಇದು ಪ್ರಾದೇಶಿಕ ಸಂಪರ್ಕತೆಯ ಪ್ರಮುಖ ಕೇಂದ್ರವಾಗಿ ರೂಪುಗೊಂಡಿದೆ. ಇಂದು, ಈ ವಿಮಾನ ನಿಲ್ದಾಣವು ಪ್ರತಿ ದಿನ ೧೨ ಪ್ರಯಾಣಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದು, ವ್ಯಾಪಕ ಪ್ರಗತಿಗೆ ದಾರಿ ಮಾಡಿಕೊಡುತ್ತಿದೆ. ಇದು ಕರ್ನಾಟಕದಲ್ಲಿ ವಿಮಾನ ನಿಲ್ದಾಣ ಆರಂಭವಾದ ಮೇಲೆ ಪ್ರಥಮ ಬೆಳವಣಿಗೆಯಾಗಿದೆ ಎಂದರು.
ಹೈದರಾಬಾದ್ ಮತ್ತು ಚೆನ್ನೈಗೆ ಹೊಸ ವಿಮಾನಗಳೊಂದಿಗೆ, ಶಿವಮೊಗ್ಗವು ಈಗ ಬೆಂಗಳೂರು, ತಿರುಪತಿ, ಮತ್ತು ಮೊಪಾ (ಗೋವಾ) ಗೆ ನೇರ ಸಂಪರ್ಕ ಹೊಂದಿದ್ದು, ಇದರಿಂದ ನಮ್ಮ ಜನರಿಗೆ ವಿವಿಧ ಪ್ರಮುಖ ಪ್ರದೇಶಗಳ ಸಂಪರ್ಕ ಸುಲಭಗೊಳಿಸಲಾಗಿದೆ. ಈ ಹೊಸ ಮಾರ್ಗಗಳು ನಮ್ಮ ಮಲೆನಾಡು ಪ್ರದೇಶದ ಪ್ರವಾಸೋದ್ಯಮ ಮತ್ತು ವ್ಯಾಪಾರದ ಬೆಳವಣಿಗೆಗೆ ಮಹತ್ವದ ಕಾರಣವಾಗಲಿದೆ ಎಂದರು.
ನಾನು ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಜಿಗೆ ನಿಸ್ಸೀಮ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅವರ ಸದಾ ಬೆಂಬಲದಿಂದ ಮಲೆನಾಡು ಮತ್ತು ಶಿವಮೊಗ್ಗದ ಜನತೆ ಈ ಅತ್ಯಾಧುನಿಕ ವಿಮಾನ ಸಂಪರ್ಕದಿಂದ ಲಾಭ ಪಡೆಯುತ್ತಿದ್ದಾರೆ. ಈ ಹೊಸ ವಿಮಾನ ಮಾರ್ಗಗಳು ನಮ್ಮ ಪ್ರದೇಶದ ಒಟ್ಟಾರೆ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸಲಿವೆ ಎಂದರು.
ದೇಶದ ಅನೇಕ ನಗರಗಳಿಗೆ ಶಿವಮೊಗ್ಗದಿಂದ ವಿಮಾನಯಾನ ಸೌಲಭ್ಯ ವಿಸ್ತರಿಸಲಿದ್ದು, ಒಂದು ತಿಂಗಳೊಳಗೆ ರಾತ್ರಿ ಪ್ರಯಾಣ ಕೂಡ ಪ್ರಾರಂಭವಾಗಲಿದೆ. ಕೆ.ಎಸ್.ಐ.ಡಿ.ಸಿ.ಯಿಂದ ಒಳ್ಳೆಯ ಅಧಿಕಾರಿಗಳು ಬಂದಿದ್ದಾರೆ. ವಿಮಾನ ಹಾರಾಟಕ್ಕೆ ಇರುವ ಅನೇಕ ಲೋಪದೋಷಗಳು
ಹಾಗೂ ಸುತ್ತಮುತ್ತಲಿನ ತಾಂತ್ರಿಕ ತೊಂದರೆಗಳು ಕೂಡ ನಿವಾರಣೆಯಾಗಿದ್ದು, ಕೇಂದ್ರ ವಿಮಾನ ಪ್ರಾಧಿಕಾರ ತೃಪ್ತಿವ್ಯಕ್ತಪಡಿಸಿದೆ ಎಂದರು.
ನಾಗರಿಕರು ಈ ಹೊಸ ಸಂಪರ್ಕದ ಪ್ರಯೋಜನ ಪಡೆಯಬೇಕೆಂದು ಸಂಸದ ಬಿ.ವೈ. ರಾಘವೇಂದ್ರ ಮನವಿ ಮಾಡಿದರು.