ಶಿವಮೊಗ್ಗ,ಸೆ.24:ತೀವ್ರ ಕುತೂಹಲ ಮೂಡಿಸಿರುವ ಕರ್ಕಿ ಚಲನಚಿತ್ರ ಈಗಾಗಲೇ ಸೆ.20ರಂದು ಬಿಡುಗಡೆಯಾಗಿ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ನಾಯಕ ನಟ ಜಯಪ್ರಕಾಶ್ (ಜೆಪಿ)ರೆಡ್ಡಿ ಹೇಳೀದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕನ್ನಡದ ಮಟ್ಟಿಗೆ ಇದೊಂದು ಮನಮುಟ್ಟುವ ಚಿತ್ರವಾಗಿದೆ. ಒಂದಿಷ್ಟು ಕಾರಣಕ್ಕಾಗಿ ತೀವ್ರ ಕುತೂಹಲ ಮೂಡಿಸಿದೆ. ಅದಕ್ಕೆ ಕಾರಣ ತಮಿಳಿನಲ್ಲಿ ಹಲವಾರು ಚಿತ್ರಗಳನ್ನು ನಿರ್ದೇಶನ ಮಾಡಿ ಯಶಸ್ವಿ ಎನಿಸಿಕೊಂಡಿರುವ ಖ್ಯಾತ ನಿರ್ದೇಶಕ ಪವಿತ್ರನ್ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ ಎಂದರು.
ಈಗಾಗಲೇ ರಾಜ್ಯಾದಾದ್ಯಂತ ಸುಮಾರು 60ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಬಿಡುಗಡೆ ಗೊಂಡು ಕ್ಲಾಸ್ ಮತ್ತು ಮಾಸ್ ಎರಡು ತರದ ಪ್ರೇಕ್ಷಕರನ್ನು ಈ ಚಿತ್ರ ಹಿಡಿದುಕೊಟ್ಟಿದೆ. ತಮಿಳಿನ ಪರಿಯೂರಮ್ ಪೆರುಮಾಳ್ ಸಿನಿಮಾದ ರಿಮೇಕ್ ಆಗಿದ್ದರೂ ಕೂಡ ಇದನ್ನು ಕನ್ನಡದ ಮಣ್ಣಿಗೆ ಹೊಂದಿಸಲಾಗಿದೆ. ಕನ್ನಡದ ಪರಿಸರಕ್ಕೆ ತಕ್ಕಂತೆ ಚಿತ್ರಿಸಿ ಹೊನ್ನಾಳ್ಳಿಯ ಭಾಷೆಯ ಸೊಗಡಿನೊಂದಿಗೆ ಮಲೆನಾಡಿನಲ್ಲಿ ಚಿತ್ರಿಕರಣ ಮಾಡಲಾಗಿದೆ. ಆಗಾಗಿ ಇದೊಂದು ಹಳ್ಳಿಯ ಬದುಕಿನ ಚಿತ್ರವಾಗಿದ್ದರೂ ಕೂಡ ನಗರದ ಸಂಪರ್ಕವನ್ನು ಕೂಡ ಇಟ್ಟುಕೊಂಡಿದೆ ಎಂದರು.
ನನ್ನ ಪಾತ್ರ ಇದರಲ್ಲಿ ವಿಭಿನ್ನವಾಗಿದ್ದು ಕಾನೂನು ಪದವೀಧರನಾಗಬೇಕು ಎಂಬ ಕನಸು ಕಟ್ಟಿಕೊಂಡ ಹುಡುಗನ ಪಾತ್ರ ಇದಾಗಿದೆ. ಇದಕ್ಕಾಗಿ ಹಳ್ಳಿಯ ಬದುಕನ್ನೇ ಅರ್ಥ ಮಾಡಿಕೊಳ್ಳಲು ನಾನು ಹೊನ್ನಾಳಿ ತಾಲ್ಲೂಕಿನ ಕ್ಯಾಸಿನಕೆರೆಯಲ್ಲಿ ಹಲವು ದಿವಸಗಳ ಕಾಲ ವಾಸವಾಗಿ ಅಲ್ಲಿನ ಪರಿಸರ, ಭಾಷೆ, ಜೀವನಕ್ರಮ, ಮಾತನಾಡುವ ರೀತಿ ಇವೆಲ್ಲವನ್ನು ಅರ್ಥಮಾಡಿಕೊಂಡೆ. ಇದು ನನ್ನ ಅಭಿನಯಕ್ಕೆ ಸುಲಭವಾಯಿತು ಎಂದರು.
ಈಗಾಗಲೇ ಬಾಲನಟನಾಗಿ ನಾನು ಈ ಹಿಂದೆ ಅಭಿನಯಿಸಿದ್ದೆ. ಅನಂತರ ವಾಟ್ಸಾಪ್ ಲವ್ ಮತ್ತು ರಾಜರಾಣಿ ಸಿನಿಮಾಗಳಲ್ಲಿ ನಾಯಕನಟನಾಗಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿತ್ತು. ಅದಾದ ನಂತರ ಈಗ ಮತ್ತೊಮ್ಮೆ ಕರ್ಕಿ ಚಿತ್ರದಲ್ಲಿ ನಾಯಕ ನಟನಾಗಿದ್ದೇನೆ. ನನ್ನೊಂದಿಗೆ ಮಲೆಯಾಳಿ ಬೆಡಗಿ ಮೀನಾಕ್ಷಿ ನಾಯಕಿಯಾಗಿ ಜೋಡಿಯಾಗಿದ್ದಾರೆ. ಉಳಿದಂತೆ ಸಾಧುಕೋಕಿಲ, ಮಿಮಿಕ್ರಿ ಗೋಪಿ, ಸ್ವಾತಿ, ಸವಿತಾ, ಯತಿರಾಜ್, ಜೋಸೈಮಾನ್ ಸೇರಿದಂತೆ ಹಲವು ಹಿರಿಯ ನಾಯಕರು ಇದರಲ್ಲಿ ಅಭಿನಯಿಸಿದ್ದಾರೆ ಎಂದರು.
ಸಿನಿಮಾದಲ್ಲಿ ಒಟ್ಟು ಆರು ಹಾಡುಗಳಿವೆ. ಎಲ್ಲಾ ಹಾಡುಗಳನ್ನು ಕವಿರಾಜ್ ಬರೆದಿದ್ದು, ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿದ್ದಾರೆ. ಹಾಡಿನ ದೃಶ್ಯಗಳು ಮತ್ತು ಸಿನಿಮಾದ ಕೆಲವು ಭಾಗಗಳು ಶಿವಮೊಗ್ಗ ಸುತ್ತಮುತ್ತ ಚಿತ್ರಿಕರಣ ಮಾಡಲಾಗಿದೆ. ಒಟ್ಟಾರೆ ಈ ಸಿನಿಮಾ ಸ್ನೇಹಾ, ಜಾತಿ, ಶಿಕ್ಷಣ, ಶ್ವಾನ ಪ್ರೀತಿಯ ಸುತ್ತ ಹೆಣೆದುಕೊಂಡಿದ್ದು, ಒಂದು ಸಾಮಾಜಿಕ ಕಳಕಳಿಯನ್ನು ಹೊಂದಿದ ಚಿತ್ರವಾಗಿದೆ ಎಂದರು.
ಉದ್ಯಮಿ ಪ್ರಕಾಶ್ ಪಳನಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಥರ್ಡ್ ಐ ಮೀಡಿಯಾ ಬ್ಯಾನರ್ನಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಹೃಷಿಕೇಶ್ ಛಾಯಾಗ್ರಹಣ ಹೊಂದಿದ್ದು, ಸಿನಿಮಾವನ್ನು ಕನ್ನಡದ ಪ್ರೇಕ್ಷಕರು ನೋಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪತ್ರಿಕಾ ಸಂಪರ್ಕಾಧಿಕಾರಿ ಕಾರ್ತಿಕ್ ಸುಧನ್ ಇದ್ದರು.