ಶಿವಮೊಗ್ಗ,ಸೆ.20: ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆ ತೋರಿದ ಶಿಕ್ಷಕರನ್ನು ಅಮಾನತ್ತುಗೊಳಿಸಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಎಬಿವಿಪಿ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯ ಪದವಿಪೂರ್ವ ಕಾಲೇಜು ಮುಂಭಾಗ ಭಾರೀ ಪ್ರತಿಭಟನೆ ನಡೆಸಿ ಕಾಲೇಜು ಆಡಳಿತ ಮಂಡಳಿಗೆ ದೂರು ಸಲ್ಲಿಸಿದೆ.
ನಗರದ ಪ್ರತಿಷ್ಠಿತ ಪಿಯು ಕಾಲೇಜಿನಲ್ಲಿ ಉಪನ್ಯಾಸಕೋರ್ವರು ಕಳೆದ ಸುಮಾರು ದಿನಗಳಿಂದ ವಿದ್ಯಾರ್ಥಿನಿಯರೊಂದಿಗೆ ಅನುಚಿತ ವಾಗಿ ವರ್ತಿಸುತ್ತಿದ್ದುದ್ದಲ್ಲದೆ, ಅಸಭ್ಯ ಮಾತುಗಳಿಂದ ಮಾನಸಿಕ ಹಿಂಸೆ ನೀಡುತ್ತಿರುವುದು ತಿಳಿದುಬಂದಿದೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ದೂರಿದರು.
ಕಳೆದ ಕೆಲವು ದಿನಗಳ ಹಿಂದೆ ಓರ್ವ ವಿದ್ಯಾರ್ಥಿನಿಯ ಬಳಿ ಅಸಭ್ಯ ವರ್ತನೆ ಮಾಡಿದ್ದು, ಆ ವಿದ್ಯಾರ್ಥಿನಿ ಮಕ್ಕಳ ಸಹಾಯವಾಣಿಗೂ ದೂರು ನೀಡಲಾಗಿದೆ. ನಂತರ ಸೆ.೩ರಂದು ಪೊಲೀಸರು ಕಾಲೇಜಿಗೆ ಭೇಟಿ ನೀಡಿ, ನಂತರ ಪ್ರಾಂಶುಪಾಲರಿಗೆ ಈ ಕುರಿತು ನೋಟೀಸ್ ನೀಡಿರುತ್ತಾರೆ.
ಈ ವಿಷಯದ ಬಗ್ಗೆ ೧೫ ದಿನಗಳು ಕಳೆದರೂ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿ ಸಹ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಮನವಿಯಲ್ಲಿ ದೂರಲಾಗಿದೆ.
ಅಲ್ಲದೇ ಇದೇ ರೀತಿ ಹಲವು ವಿದ್ಯಾರ್ಥಿನಿಯರ ಜೊತೆ ಇದೇ ಉಪನ್ಯಾಸಕರು ಅನುಚಿತ ವರ್ತನೆ ತೋರಿದ್ದು, ಅವರ‍್ಯಾರು ದೂರು ನೀಡಲು ಮುಂದೆ ಬಂದಿರಲಿಲ್ಲ ಈ ಕೃತ್ಯವನ್ನು ಖಂಡಿಸಿ ಎಬಿವಿಪಿ ಇಂದು ಆ ಉಪನ್ಯಾಸಕರನ್ನು ಸೇವೆಯಿಂದ ಅಮಾನತ್ತು ಮಾಡಿ ಅವರ ಮೇಲೆ ಎಫ್‌ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿದೆ.
ಪ್ರತಿಭಟನೆಯಲ್ಲಿ ಎಬಿವಿಪಿ ಮುಖಂಡರಾದ ಯಶಸ್ವಿನಿ, ಲೋಹಿತ್, ಅಕ್ಷಯ್, ವರುಣ್, ರವಿ, ರಂಜನಿ ಮತ್ತಿತರರು ಇದ್ದರು.