ಶಿವಮೊಗ್ಗ,ಸೆ.೧೮: ಮಹಾನಗರ ಪಾಲಿಕೆ ಹಾಗೂ ಮಹಾನಗರ ಪಾಲಿಕೆ ನೌಕರರ ಸಂಘದ ವತಿಯಿಂದ ಪೌರಕಾರ್ಮಿಕರ ದಿನಾಚರಣೆಯನ್ನು ಸೆ.೧೯, ೨೦ ಮತ್ತು ೨೩ರಂದು ಸಂಭ್ರಮ ಸಡಗರಿಂದ ಆಚರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಎನ್.ಗೋವಿಂದಣ್ಣ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರತಿಬಾರಿಯಂತೆ ಈ ಬಾರಿಯೂ ಕೂಡ ಪೌರಕಾರ್ಮಿಕರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುವುದು. ಇದರ ಅಂಗವಾಗಿ ಸೆ.೧೯ರಂದು ಬೆಳಿಗ್ಗೆ ೧೦ರಿಂದ ಪಾಲಿಕೆ ನೌಕರರಿಗೆ ಅಥ್ಲೆಟಿಕ್ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಹಾಗೆಯೇ ಸೆ.೨೦ರಂದು ಬೆಳಿಗ್ಗೆ೧೦ಕ್ಕೆ ಸಹ್ಯಾದ್ರಿ ಕಾಲೇಜು ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಸೆ.೨೩ರಂದು ಬೆಳಿಗ್ಗೆ ೧೦ಕ್ಕೆ ರಾಮಣ್ಣಶ್ರೇಷ್ಠಿ ಪಾರ್ಕಿನಿಂದ ಬಿ.ಆರ್.ಅಂಬೇಡ್ಕರ್ ಭವನದವರೆಗೆ ಮೆರವಣಿಗೆ ಆಯೋಜಿಸಲಾಗಿದೆ. ಈ ಮೆರವಣಿಗೆಯಲ್ಲಿ ಡೊಳ್ಳು ಸೇರಿದಂತೆ ವಿವಿಧ ಕಲಾಪ್ರಕಾರಗಳು ಪಾಲ್ಗೊಳ್ಳಲಿವೆ ಎಂದರು.
ಸಭಾ ಕಾರ್ಯಕ್ರಮ ಮತ್ತು ಪೌರ ದಿನಾಚರಣೆ ಕಾರ್ಯಕ್ರಮವು ಸೆ.೨೩ರಂದು ಬೆಳಿಗ್ಗೆ ೧೧.೩೦ಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧುಬಂಗಾರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಪ್ರಾದೇಶಿಕ ಆಯುಕ್ತರಾದ ಅಮ್ಲಾನ್ ಆದಿತ್ಯ ಬಿಸ್ವಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಶಾಸಕ ಎಸ್.ಎನ್.ಚನ್ನಬಸಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಶಾರದ ಪೂರ‍್ಯನಾಯ್ಕ್, ಎಸ್.ಎಲ್. ಭೆಜೇಗೌಡ, ಭಾರತೀಶೆಟ್ಟಿ, ಡಿ.ಎಸ್.ಅರುಣ್, ಡಾ.ಧನಂಜಯಸರ್ಜಿ, ಬಲ್ಕೀಶ್ ಬಾನು ಹಾಗೂ ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಆಯುಕ್ತೆ ಡಾ. ಕವಿತಾ ಯೋಗಪ್ಪನವರ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದರು.
ಪೌರ ಕಾರ್ಮಿಕರ ಸೇವೆ ಅತ್ಯಂತ ಮಹತ್ವವಾದದ್ದು, ತಮ್ಮ ಆರೋಗ್ಯವನ್ನು ಬದಿಯಿಟ್ಟು ಸಾಮಾಜದ ಆರೋಗ್ಯಕ್ಕೆ ಸದಾ ಕಂಕಣ ಬದ್ಧರಾಗಿರುತ್ತಾರೆ. ಹಲವು ಕಷ್ಟಗಳನ್ನು ಸಹಿಸಿಕೊಳ್ಳುತ್ತಾರೆ. ಇಂತಹ ಪೌರ ಕಾರ್ಮಿಕರ ಸನ್ಮಾನಿಸುವುದು ಕೂಡ ನಮ್ಮ ಕರ್ತವ್ಯವಾಗಿದೆ. ಹಾಗೆಯೇ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ಕೆಲಸ ಮಾಡಿದ ೨೦ ಪೌರಕಾರ್ಮಿಕರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಗುವುದು ಎಂದರು.
ಶಿವಮೊಗ್ಗ ಮಹಾನಗರ ಪಾಲಿಕೆ ಸಂಬಂಧಿಸಿದಂತೆ ೭೫೦ ಕಾರ್ಮಿಕರಿದ್ದಾರೆ. ಗುತ್ತಿಗೆ ಕಾರ್ಮಿಕರು, ಕಚೇರಿ ಸಿಬ್ಬಂದಿಗಳು ಸೇರಿದಂತೆ ೧೦೫೦ ಜನ ಇದ್ದಾರೆ. ಇಷ್ಟಿದ್ದರೂ ಕೂಡ ಜನಸಂಖ್ಯೆಗೆ ತಕ್ಕಂತೆ ಪೌರ ಕಾರ್ಮಿಕರು ಇಲ್ಲ. ಶೇ.೨೫ರಷ್ಟು ಕಡಿಮೆ ಇದ್ದಾರೆ. ಈಗಾಗಲೇ ಈ ಬಗ್ಗೆ
ಸರ್ಕಾರಕ್ಕೆ ಮನವಿ ಕೂಡ ಮಾಡಿದ್ದೇವೆ. ಪೌರ ಕಾರ್ಮಿಕರಿಗೆ ಸರ್ಕಾರದಿಂದ ಹಲವು ಸೌಲತ್ತುಗಳು ಸಿಗುತ್ತವೆ. ಇನ್ನೂ ಸಿಗಬೇಕಾಗಿದೆ. ಪೌರ ಕಾರ್ಮಿಕರ ಹೆಣ್ಣುಮಕ್ಕಳ ಮದುವೆಗೆ ಸರ್ಕಾರ ರೂ. ೫೦ ಸಾವಿರ ನೀಡಿದರೆ, ಸಂಘ ೧೦ ಸಾವಿರ ನೀಡುತ್ತ ಬಂದಿದೆ. ಈಗಾಗಲೇ ಸುಮಾರು ೬೩ ಹೆಣ್ಣು ಮಕ್ಕಳಿಗೆ ಈ ಸೌಲಭ್ಯ ಒದಗಿಸಲಾಗಿದೆ. ಇನ್ನುಳಿದಂತೆ ಮನೆಕಟ್ಟಲು, ನಿವೇಶನ ಪಡೆಯಲು ಸರ್ಕಾರದ ನಿಯಮದಂತೆ ಅನುದಾನ ಕೂಡ ಸಿಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಮೋಹನ್‌ಕುಮಾರ್, ಪದಾಧಿಕಾರಿಗಳಾದ ಕೆ.ಮಂಜಣ್ಣ, ಎಸ್.ಟಿ.ವಸಂತಕುಮಾರ್, ಎಸ್.ಆರ್.ನಾಗೇಶ್, ಬಿ.ಎನ್.ವೇಣುಗೋಪಾಲ್, ಅಧಿಕಾರಿಗಳಾದ ಉಪ ಆಯುಕ್ತ ತುಷಾರ್ ಹೊಸೂರು, ಅನುಪಮ ಇದ್ದರು.