ಶಿವಮೊಗ್ಗ,ಸೆ.೧೮: ೮೦ನೇ ವರ್ಷದ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ರಾಜಬೀದಿ ಉತ್ಸವವು ಅತ್ಯಂತ ವಿಜೃಂಭಣೆಯಿಂದ ಶಾಂತಿಯುತವಾಗಿ, ಯಶಸ್ವಿಯಾಗಿ ನಡೆದಿದೆ. ಇದಕ್ಕಾಗಿ ಇಡೀ ಹಿಂದೂ ಸಮಾಜ ಹಾಗೂ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗಣಪತಿ ವಿಸರ್ಜನಾ ಮೆರವಣಿಗೆಯೂ ಬಹುಕಾಲ ನೆನಪಿನಲ್ಲಿ ಉಳಿಯುವಂತೆ ಮಾಡಿದೆ. ಲಕ್ಷಾಂತರ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ. ವಿಶೇಷವಾಗಿ ಈ ಬಾರಿ ಹೆಣ್ಣುಮಕ್ಕಳು ಭಾಗವಹಿಸಿದ್ದಾರೆ. ಯುವಕ ಯುವತಿಯರು ಉತ್ಸಾಹದಿಂದ ಕುಣಿದು ಕುಪ್ಪಳಿಸುವ ಮೂಲಕ ದೇಶ ಭಕ್ತಿಯನ್ನು ಪ್ರಕಟಗೊಳಿಸಿದ್ದಾರೆ. ವಿವಿಧ ಸಮಾಜದ ಮುಖಂಡರು, ಸಂಘ ಸಂಸ್ಥೆಗಳು ಜವಾಬ್ದಾರಿಯುತವಾಗಿ ವರ್ತಿಸಿದ್ದಾರೆ. ಒಂದು ಪರಂಪರೆಯೇ ವಿಜೃಂಭಿಸಿದೆ. ಎಲ್ಲವೂ ಅಚ್ಚುಕಟ್ಟಾಗಿತ್ತು, ಮುಂಜಾನೆ ೪.೧೬ಕ್ಕೆ ಭೀಮನಮಡುವಿನಲ್ಲಿ ಗಣಪತಿ ವಿಸರ್ಜನೆ ನಡೆಯಿತು ಎಂದರು.
ಇಡೀ ನಗರ ಕೇಸರಿಮಯವಾಗಿತ್ತು. ಕೇಸರಿ ಹಿಂದೂ ಅಲಂಕಾರ ಸಮಿತಿಯವರು ಇಡೀ ನಗರವನ್ನು ಅಲಂಕಾರಗೊಳಿಸಿದ್ದರು. ಇದರ ಪರಿಣಾಮ ಹೆಚ್ಚು ಜನರು ಭಾಗವಹಿಸುವಂತಾಗಿದೆ. ಬಾಲಗಂಗಾಧರತಿಲಕ್, ವೀರಸಾರ್ವಕರ್‌ರವರ ಆಶಯಗಳು ಈಡೇರಿದಂತಾಗಿದೆ. ವಿವಿಧ ಸಮಾಜದವರು, ಸಂಘಗಳು, ಅಲ್ಲಲ್ಲಿ ಪ್ರಸಾದದ ವ್ಯವಸ್ಥೆ ಮಾಡಿದ್ದು ಕೂಡ ವಿಶೇಷವಾಗಿತ್ತು ಎಂದರು.
ಮುಖ್ಯವಾಗಿ ಪಕ್ಷಬೇಧ ಮರೆತು ಈ ಉತ್ಸವದಲ್ಲಿ ಎಲ್ಲರೂ ಪಾಲ್ಗೊಂಡಿದ್ದರು. ಜಿಲ್ಲಾಡಳಿತ ಮತ್ತು ಜಿಲ್ಲಾರಕ್ಷಣಾಧಿಕಾರಿಗಳು ಮುಂಜಾಗ್ರತ ಕ್ರಮ ಕೈಗೊಂಡಿದ್ದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ. ಒಟ್ಟಾರೆ ಶಾಂತಿಯುತವಾಗಿ ಗಣೇಶ ಹಬ್ಬ ನಡೆಯಲು ಕಾರಣರಾದ ಎಲ್ಲರಿಗೂ ಮತ್ತೊಮ್ಮೆ ಕೃತಜ್ಞತೆಗಳು ಎಂದರು.
ಶಿವಮೊಗ್ಗ ನಗರದಲ್ಲಿ ಸೆ.೨೨ರಂದು ಈದ್‌ಮೀಲಾದ್ ಮೆರವಣಿಗೆ ಇದೆ. ಇದು ಕೂಡ ಶಾಂತಿಯುತವಾಗಿ ನಡೆಯಲಿ, ಇಂದು ವಿಚಿತ್ರ ಸನ್ನಿವೇಶಗಳು ನಡೆಯುತ್ತಿವೆ. ಮೊದ ಮೊದಲು ಪಾಕಿಸ್ತಾನಕ್ಕೆ ಜೈ ಎನ್ನುತ್ತಿದ್ದರು, ಪ್ಯಾಲಿಸ್ಥಾನಕ್ಕೆ ಜೈ ಎನ್ನುತ್ತಿದ್ದಾರೆ, ಇದೇಕೋ ಅರ್ಥವಾಗುತ್ತಿಲ್ಲ. ಮುಸ್ಲಿಂ ಮುಖಂಡರು ಈ ಬಗ್ಗೆ ಗಮನಹರಿಸಬೇಕು. ಇಂತವರ ಬಗ್ಗೆ ಎಚ್ಚರಿಕೆ ವಹಿಸಿ ಘಟನೆಗಳನ್ನು ಖಂಡಿಸಬೇಕು ಇಲ್ಲದಿದರೆ ಪರಿಣಾಮ ಬೇರೆ ಬೇರೆ ರೀತಿಯಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಮೋಹನ್‌ರೆಡ್ಡಿ, ಎನ್.ಜೆ.ನಾಗರಾಜ್, ಜ್ಞಾನೇಶ್ವರ್, ದೀನದಯಾಳ್, ಮುರುಳಿ, ಮಂಜುನಾಥ್ ಇದ್ದರು.