ಸಂಸ್ಕೃತಿ ಹಾಗೂ ಸಂಸ್ಕಾರವಿಲ್ಲದ ಬದುಕು ಅರ್ಥವಿಲ್ಲದ್ದು, ಮಕ್ಕಳಲ್ಲಿ ನಾವು ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಹುಟ್ಟು ಹಾಕಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ನಿತ್ಯ ಶ್ರಮ ವಹಿಸಬೇಕು ಎಂದು ಶ್ರೀ ಆದಿಚುಂಚನಗಿರಿ ಶಾಖಾಮಠದ ಪೂಜ್ಯ ಶ್ರೀ ಶ್ರೀ ಸಾಯಿನಾಥ ಸ್ವಾಮೀಜಿ ಅಭಿಪ್ರಾಯ ಪಟ್ಟರು.

ಅವರು ಇಂದು ನಡೆದ ಗುರುಪುರದ ಬಿಜಿಎಸ್ ಶಾಲಾ ಕಾಲೇಜಿನ ಸಭಾ ಭವನದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆಯಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ , ಸಂಸ್ಕೃತಿ, ಸಂಸ್ಕಾರಕ್ಕೆ ಹೆಚ್ಚಿನ ಆದ್ಯತೆ ನೀಡುವ ಜೊತೆಗೆ , ಶಿಕ್ಷಕರು ಕೇವಲ ಪಾಠ ಪ್ರವಚನಕ್ಕೆ ಮಾತ್ರ ಸೀಮಿತವಾಗದೆ ಮಕ್ಕಳಲ್ಲಿ ಹುದುಗಿರುವ ಪ್ರತಿಭೆಗಳನ್ನು ಹೊರಗೆಳೆಯಬೇಕು. ಅದರ ಜೊತೆಗೆ ಪಾಲಕರು ಹಾಗೂ ಶಿಕ್ಷಕರು, ಮಕ್ಕಳು ಅನಗತ್ಯವಾಗಿ ಮೊಬೈಲ್ ಬಳಕೆ ಮಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.

ಮಕ್ಕಳು ಕಲಿಕೆಯ ಜೊತೆ ಸಂಸ್ಕಾರ ಮತ್ತು ತಮ್ಮ ಮುಂದಿನ ಗುರಿಗಳ ಬಗ್ಗೆ ನಿಖರವಾದ ಉದ್ದೇಶಗಳನ್ನು ಹೊಂದುವ ಅಗತ್ಯವಿದೆ. ನಾಳಿನ ಸುಂದರ ಬದುಕನ್ನು ರೂಪಿಸಿಕೊಳ್ಳಲು ದೇಶದ ಪ್ರಜ್ಞಾವಂತ ನಾಗರೀಕನಾಗಲು ಚಿಂತನೆ ನಡೆಸಬೇಕಿದೆ. ದೇಶಕ್ಕೆ, ನನ್ನ ಊರಿಗೆ, ನನ್ನ ಜಿಲ್ಲೆಗೆ ಏನಾದರೂ ಕೊಡುಗೆ ನೀಡುವಂತಹ ಸಮಾಜಮುಖಿ ಮನಸ್ಸು ಬೆಳೆಸಿಕೊಳ್ಳಬೇಕಿದೆ ಎಂದರು.

ಕಾರ್ಯಕ್ರಮ ದಲ್ಲಿ ಸಂಸ್ಥೆಯ ನಿರ್ದೇಶಕರಾದ ಹಿರಿಯಣ್ಣ ಹೆಗಡೆ,ಬಿಜಿಎಸ್ ಗುರುಕುಲ ಶಾಲಾ ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ಎಸ್. ಹೆಚ್., ಶಿಕ್ಷಕರು, ಉಪನ್ಯಾಸಕರು,ಸಿಬ್ಬಂದಿ ವರ್ಗದವರು, ಪೋಷಕರು ಹಾಗೂ ವಿದ್ಯಾರ್ಥಿಗಳು, ಇನ್ನೂ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಶಿಕ್ಷಕರಿಗೆ ಕ್ರೀಡೆಯನ್ನು ಏರ್ಪಡಿಸಿದ್ದು ಕ್ರೀಡೆಯಲ್ಲಿ ವಿಜೇತರಾದ ಶಿಕ್ಷಕರಿಗೆ ಬಹುಮಾನವನ್ನು ನೀಡಿ ಗೌರವಿಸಲಾಯಿತು.
ವಿದ್ಯಾರ್ಥಿಗಳು ಬದುಕಿನ ರಕ್ಷಣೆಯ ಬಗ್ಗೆ ಹಾಗೂ ತಮ್ಮನ್ನು ಸಾಕಿ ಸಲಹಿದ ತಂದೆ ತಾಯಿಗಳ ಬಗ್ಗೆಯೂ ಕೂಡ ಚಿಂತನೆ ನಡೆಸಬೇಕಿದೆ.
ಶಿಕ್ಷಕರು ವಿದ್ಯಾರ್ಥಿಗಳಿಗೆ ಒಳ್ಳೆಯ ಅಂಶಗಳನ್ನು ಒತ್ತಿ ಒತ್ತಿ ಹೇಳಬೇಕು. ಆ ಮೂಲಕ ವಿದ್ಯಾರ್ಥಿ ಸಮೂಹವನ್ನು ಉತ್ತಮ ಸತ್ಪ್ರಜೆಗಳಾಗಿ ರೂಪಸಿಬೇಕೆಂದು ಹೇಳಿದರು.

ಡಾ.ರಾಧಾಕೃಷ್ಣ ತತ್ವಜ್ಞಾನಿ, ರಾಯಬಾರಿ, ರಾಷ್ಟ್ರಪತಿಯಾಗಿದ್ದರು ಆದರೆ ಅವರ ಜನ್ಮದಿನವನ್ನು ಶಿಕ್ಷಕ ದಿನಾಚರಣೆಯಾಗಿ ಆಚರಿಸಿ ಎಂದು ಹೇಳಿದರು. ಕಾರಣ ಅವರು ಒಬ್ಬ ಶಿಕ್ಷಕರಾಗಿ, ಶಿಕ್ಷಕರ ವೃತ್ತಿಯಲ್ಲಿ ಆತ್ಮ ತೃಪ್ತಿಯನ್ನು ಪಡೆದುಕೊಂಡಿದ್ದರು ಎಂದರು. ಶಿಕ್ಷಣಕ್ಕೆ ಅತಿ ಹೆಚ್ಚಿನ ಆದ್ಯತೆ ನೀಡುವುದು ಇಂದಿನ ದಿನಮಾನಗಳಲ್ಲಿ ಕಂಡು ಬರುತ್ತಿದ್ದು, ಇಂದು ಶಿಕ್ಷಣ ಕೇವಲ ಕಲಿಕೆಯಾಗದೆ ಅದು ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಸಹ ಬಿಂಬಿಸುವ ಅಂಶವಾಗಬೇಕಿದೆ.ಮಕ್ಕಳನ್ನು ಎಲ್ಲೋ ಒಂದು ಕಡೆ ಇಟ್ಟು ಓದಿಸಿದಾಗ ಮಕ್ಕಳು ಬುದ್ಧಿವಂತರಾಗುತ್ತಾರೆ ಎಂಬುದು ಭ್ರಮೆ, ಮಕ್ಕಳನ್ನು ಪೋಷಕರು ಅತಿ ಜಾಗರೂಕತೆಯಿಂದ ನೋಡಿಕೊಂಡಾಗ, ಶಿಕ್ಷಕ ವಲಯ ಅವರನ್ನು ಶಿಕ್ಷಣ ನೀಡುವ ವಿಷಯದಲ್ಲಿ ಎಚ್ಚರಗೊಳಿಸಿದಾಗ ಉತ್ತಮವಾದ ಶಿಕ್ಷಣ ಮಗುವಿಗೆ ದೊರಕುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ಸಂಸ್ಕಾರಯುತ ಪ್ರಜೆಗಳನ್ನಾಗಿ ಬೆಳೆಸುವುದು ಮುಖ್ಯ.
– ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ, ಡಾ. ರಾಜೇಂದ್ರ ಬುರಡಿಕಟ್ಟೆ
ಸರ್ಕಾರಿ ಪ್ರೌಢಶಾಲೆ, ಗಾಜನೂರು, ಶಿವಮೊಗ್ಗ.