ಶಿವಮೊಗ್ಗ: ಬಿಟ್ಟು ಬಿಡದೇ ಕಾಡುತ್ತಿರುವ ಕೋವಿಡ್-19 ಮಹಾಮಾರಿ ಕೊರೊನಾ ಮಲೆನಾಡಿನ ಶಿವಮೊಗ್ಗದಲ್ಲಿ ಸದ್ದು ಮಾಡದೇ ಸುದ್ದಿ ಮಾಡುತ್ತಿದೆ.
ಪ್ರಖ್ಯಾತ ಆಸ್ಪತ್ರೆಯೊಂದರ ಇಬ್ಬರು ವೈದ್ಯರು ಸೇರಿದಂತೆ ಆರು ಜನರಿಗೆ ಕೊರೊನಾ ಸೋಂಕು ತಗುಲಿರುವ ಅನುಮಾನ ಬಲವಾಗಿ ಕಾಡಿದ್ದು, ಶಿವಮೊಗ್ಗದ ಚೆನ್ನಪ್ಪ ಲೇ-ಔಟ್ ಸೇರಿದಂತೆ ಬಹುತೇಕ ಭಾಗಗಳು ಸ್ಯಾನಿಟೈಜೇಷನ್ ಹಾಗೂ ಸೀಲ್‌ಡೌನ್‌ನಲ್ಲಿ ಬಂಧಿಗಳಾಗುತ್ತಿವೆ. ಸ್ವಾಮಿವಿವೇಕಾನಂದ ಬಡಾವಣೆ, ಕುಂಬಾರಗುಂಡಿ ಸೇರಿದಂತೆ ಹಲವು ಭಾಗಗಳ ಸೀಲ್ಡೌನ್ ಅವಧಿಯನ್ನು ವಿಸ್ತರಿಸಲಾಗಿದೆ.
ನಗರದ ಓ.ಟಿ.ರಸ್ತೆಯ ಮುಖ್ಯ ಆಸ್ಪತ್ರೆಯೊಂದರಲ್ಲಿ ರೋಗಿಯೊಬ್ಬರನ್ನು ಪರೀಕ್ಷಿಸಿದ ಇಬ್ಬರು ವೈದ್ಯರಿಗೆ ಸೋಂಕು ಕಾಣಿಸುವ ಮೂಲಕ ರೋಗಿ ಹಾಗೂ ಇಬ್ಬರು ವೈದ್ಯರನ್ನು ಕೋವಿಡ್-೧೯ ಆಸ್ಪತ್ರೆಗೆ ವರ್ಗಾಯಿಸಲಾಗಿದೆ.
ಭದ್ರಾವತಿ ಮೂಲದ ವ್ಯಕ್ತಿಯೋರ್ವರು ಮಗಳಿಗೆ ಗಂಡು ನೋಡಲು ಹೋಗಿ ಕೊರೊನಾ ಸೋಂಕು ತಗುಲಿಸಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಆ ಬೀದಿಯನ್ನು ಲಾಕ್‌ಡೌನ್ ಮಾಡಲಾಗಿದೆ. ಅಂತೆಯೇ ಅಲ್ಲಿಯ ಏಜೆಂಟರೊಬ್ಬರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಮೂಲಗಳು ಹೇಳುತ್ತಿವೆ. ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಶಾಸಕ ಕೆ.ಬಿ.ಅಶೋಕ್ ನಾಯ್ಕ್ ಅವರ ಕಾರ್ಯಾಲಯಗಳಿರುವ, ಸುಮಾರು ಐದಾರು ಸರ್ಕಾರಿ ಕಛೇರಿಗಳನ್ನು ಹೊಂದಿರುವ ನೆಹರೂ ರಸ್ತೆಯ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊರ್ವರ ಸೋಂಕು ದೃಢಪಟ್ಟಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂಪರ್ಕಿತರನ್ನು ಕ್ವಾರಂಟೈನ್‌ನಲ್ಲಿ ಇಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.
ಕೋವಿಡ್-೧೯ ಹಿನ್ನೆಲೆಯಲ್ಲಿ ಸಾವು ಕಂಡ ವೃದ್ದೆಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಶಿಕಾರಿಪುರದ ಮಹಿಳೆಯೋರ್ವರಿಗೆ ಸೋಂಕು ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.
ನಿನ್ನೆಯ ನಾಲ್ಕು ಪ್ರಕರಣಗಳು ಸೇರಿದಂತೆ ೧೨೩ರ ಗಡಿಯಲ್ಲಿದ್ದ ಸೋಂಕಿತರ ಸಂಖ್ಯೆ ಸಂಜೆಯ ಹೊತ್ತಿಗೆ ೧೩೦ರ ಗಡಿಯನ್ನು ದಾಟುವ ಶಂಕೆ ವ್ಯಕ್ತವಾಗಿದೆ.
ವಿಶೇಷವೆಂದರೆ ಶಿವಮೊಗ್ಗದಲ್ಲಿನ ೧೨೩ ಸೋಂಕಿತರಲ್ಲಿ ೯೩ಜನ ಈಗಾಗಲೇ ಕೊರೊನಾ ಸೋಂಕಿನಿಂದ ಬಿಡುಗಡೆಯಾಗಿದ್ದಾರೆ. ನಿನ್ನೆ ಐದು ಜನ ಬಿಡುಗಡೆಯಾಗಿದ್ದರು. ಪ್ರಸಕ್ತ ೨೯ಜನ ಚಿಕಿತ್ಸೆ ಪಡೆಯುತ್ತಿದ್ದು, ಓರ್ವ ಮಹಿಳೆ ಸಾವು ಕಂಡ ದಾಖಲೆ ಶಿವಮೊಗ್ಗದ ಹೆಸರಿಗೆ ನೊಂದಣಿಯಾಗಿದೆ.